ಕಾರ್ಮಿಕರ ಮನೆ ನಿರ್ಮಾಣಕ್ಕೆ 5 ಲಕ್ಷ ಅನುದಾನ

ಚಿತ್ರದುರ್ಗ;

       ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿ, ಮನಸ್ಸು ಪಕ್ವಗೊಂಡಿರುವ ಹಿರಿಯರ ಅನುಭವ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು ಹೇಳಿದರು.

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಚಿತ್ರದುರ್ಗ ಇವರ ಸಹಯೋಗದೊಂದಿಗೆ ನಗರದ ತ.ರಾ.ಸು ರಂಗಮಂದಿರದಲ್ಲಿ ಸೋಮವಾರದಂದು ಏರ್ಪಡಿಸಿದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

       ಹಿರಿಯ ನಾಗರಿಕರು ಸುಖ ಜೀವನ ನಡೆಸುವಂತಾಗಲು ಸರ್ಕಾರ ಹಲವಾರು ಯೋಜನೆಗಳನ್ನು ಕೈಗೊಂಡಿದ್ದು, ವೃದ್ಧರಿಗೆ ನೀಡಲಾಗುತ್ತಿರುವ ಪಿಂಚಣಿ ಏರಿಕೆಗೆ ಕ್ರಮ ವಹಿಸಲಾಗಿದೆ. ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿ, ಬದುಕು ಕಟ್ಟಿಕೊಂಡಿರುವ ಹಿರಿಯರ ಅನುಭವ ಸಮಾಜಕ್ಕೆ ಬೇಕಿದೆ ಎಂದು ಹೇಳಿದರು

      ಬಡವರ ಪರ ಇರುವಂತಹ ಇಲಾಖೆಯೆಂದರೆ ಅದು ಕಾರ್ಮಿಕ ಇಲಾಖೆ. ಕಾರ್ಮಿಕರಿಗೆ ಅನೇಕ ಯೋಜನೆಗಳನ್ನು ಒದಗಿಸಲಾಗುತ್ತಿದ್ದು, ನಿವೇಶನ ಹೊಂದಿರುವ ಕಟ್ಟಡ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ರೂ. ಅನುದಾನ ನೀಡಲಾಗುವುದು. ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲ ಬಗೆಯ ಕಾರ್ಮಿಕರಿಗೂ ಈ ಯೋಜನೆ ಅನ್ವಯವಾಗಲಿದೆ.

      ಬೆಂಗಳೂರು ಬಳಿಯ ಪೀಣ್ಯ ಮತ್ತು ಕೆಂಗೇರಿ ಬಳಿ ಇಂತಹ ಬಡವರಿಗಾಗಿ 03 ಸಾವಿರ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಬಡವರು, ಬೀದಿ ಬದಿಗಳಲ್ಲಿ ವಾಸಿಸುತ್ತಿರುವವರು ಸ್ವಂತ ಸೂರು ಇಲ್ಲದೆ ತೊಂದರೆ ಎದುರಿಸುತ್ತಿದ್ದು, ಇವರೆಲ್ಲರಿಗೂ ಮನೆ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದರು

       ರಾಜ್ಯದಲ್ಲಿ ಕಾರ್ಮಿಕರನ್ನು ಗುರುತಿಸಿ, ಅವರಿಗೆ ಸರ್ಕಾರದ ಯೋಜನೆ ಒದಗಿಸುವ ನಿಟ್ಟಿನಲ್ಲಿ ಕಾರ್ಮಿಕರ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಉದ್ಯೋಗಖಾತ್ರಿಯಡಿ ಕೆಲಸ ನಿರ್ವಹಿಸುವವರನ್ನೂ ಕಾರ್ಮಿಕರೆಂದು ಪರಿಗಣಿಸಲಾಗುತ್ತಿದೆ. ಕೂಲಿ ಕಾರ್ಮಿಕರ ಮಕ್ಕಳ ಮದುವೆ, ವಿದ್ಯಾಭ್ಯಾಸ, ಅಪಘಾತ ಪ್ರಕರಣಗಳು ಹಾಗೂ ಮರಣ ಪ್ರಕರಣಗಳಲ್ಲೂ ಸಹ ಸಹಾಯಧನ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿ ಆಧಾರಿತ ನಿರುದ್ಯೋಗಿಗಳಿಗೆ ತರಬೇತಿ ನೀಡಿ, ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ನೆರವು ನೀಡಲಾಗುತ್ತಿದೆ. ಅಧಿಕಾರ ಎಂಬುದು ಶಾಶ್ವತವಲ್ಲ, ನಾವು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳೇ ಶಾಶ್ವತವಾಗಿ ಉಳಿಯಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಅವರು ಹೇಳಿದರು.

      ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರು ಮಾತನಾಡಿ, ವಿದ್ಯೆಗಿಂತ ಅನುಭವ ದೊಡ್ಡದು ಎಂಬ ಮಾತು ಜನರಲ್ಲಿ ರೂಢಿಯಲ್ಲಿದೆ. ಹಿರಿಯರ ಅನುಭವವನ್ನು ಕಿರಿಯರು ಪಡೆದುಕೊಳ್ಳಬೇಕು. ಈ ಮೊದಲು ಸಮಾಜದಲ್ಲಿ ಕೂಡು ಕುಟುಂಬ ವ್ಯವಸ್ಥೆ ಇತ್ತು. ಆದರೆ ಈಗ ಅಂತಹ ಸ್ಥಿತಿ ಇಲ್ಲ. ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

       ಸಂಸದ ಬಿ.ಎನ್. ಚಂದ್ರಪ್ಪ ಅವರು ಮಾತನಾಡಿ, ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಎಂದರೆ, ವರ್ಷಕ್ಕೊಮ್ಮೆ ತಂದೆ-ತಾಯಿಯರನ್ನು ಸ್ಮರಿಸುವ ದಿನವಾಗಿದೆ. ಕಣ್ಣಿಗೆ ಕಾಣುವ ದೇವರು ಎಂದರೆ ತಂದೆ ತಾಯಿ. ತಂದೆ ತಾಯಿಯನ್ನು ನಿರ್ಲಕ್ಷಿಸಿ ಅನ್ಯ ದೇವರನ್ನು ಪೂಜಿಸುವುದರಲ್ಲಿ ಅರ್ಥವಿಲ್ಲ. ಯುವ ಜನತೆ ತಮ್ಮ ಮದುವೆಯ ಬಳಿಕ ತಂದೆ-ತಾಯಿಯನ್ನು ನಿರ್ಲಕ್ಷಿಸಬಾರದು. ಹುಟ್ಟು ಸಾವಿನ ಮಧ್ಯೆ ಮಾನವೀಯ ಮೌಲ್ಯಗಳೊಂದಿಗೆ ಬದುಕು ನಡೆಸುವುದನ್ನು ರೂಢಿಸಿಕೊಳ್ಳಬೇಕು. ಹಿರಿಯರು ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ ಶಾಂತಿ, ನೆಮ್ಮದಿಯಿಂದ ಬದುಕುವಂತಾಗಬೇಕು ಎಂದರು.

     ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಮಾನವೀಯತೆಯನ್ನು ಕಲಿಸಿದಲ್ಲಿ, ಮುಪ್ಪಿನ ಕಾಲಕ್ಕೆ ಅವರು ಆಸರೆಯಾಗುತ್ತಾರೆ. ವೃದ್ಧಾಶ್ರಮಗಳು ಸಮಾಜದಲ್ಲಿ ಹೆಚ್ಚಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ. ಹಿರಿಯ ನಾಗರಿಕರ ಹಿತ ಕಾಯಲು ಸರ್ಕಾರ ರೂಪಿಸಿರುವ ಯೋಜನೆಗಳನ್ನು ಅಧಿಕಾರಿಗಳು ಸರಿಯಾಗಿ ತಲುಪಿಸಬೇಕು ಎಂದರು.

      ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್. ಗಿರೀಶ್, ಜಿ.ಪಂ. ಸದಸ್ಯ ನರಸಿಂಹರಾಜ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ರಂಗಪ್ಪ ರೆಡ್ಡಿ, ಐಎಎಸ್ ಪ್ರೊಬೆಷನರಿ ಅಧಿಕಾರಿ ಡಾ. ನಂದಿತಾ ದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾ ನಾಯಕ್, ಮುಂತಾದ ಗಣ್ಯರು ಉಪಸ್ಥಿತರಿದ್ದರು. ಹಿರಿಯ ನಾಗರಿಕರ ಕಲ್ಯಾಣಾದಿಕಾರಿ ವೈಶಾಲಿ ಸ್ವಾಗತಿಸಿದರು.

      ಅತ್ಯುತ್ತಮ ಸಮಾಜ ಸೇವೆಗಾಗಿ ಹಿರಿಯ ನಾಗರಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಚಿತ್ರದುರ್ಗದ ಜಿ. ತಿಮ್ಮಾರೆಡ್ಡಿ, ಗಿರಿಜಮ್ಮ, ಶ್ರೀನಿವಾಸ ಶೆಟ್ಟಿ, ಬಡಮಲ್ಲಪ್ಪ, ಪಿ.ವಿ. ಮಲ್ಲಿಕಾರ್ಜುನಯ್ಯ, ಗುಜ್ಜುಗಾನಹಳ್ಳಿಯ ನಾಗರಾಜ ಸಂಗಮ್, ಹೊಸದುರ್ಗದ ಡಿ.ಟಿ.ಚಂದ್ರಶೇಖರ , ಹೆಚ್.ಬಿ. ಚಿದಾನಂದಪ್ಪ, ವೈದ್ಯಕೀಯ ಕ್ಷೇತ್ರದ ಸೇವೆಗಾಗಿ ಚಳ್ಳಕೆರೆಯ ಡಾ. ಡಿ.ವಿ. ನಾರಾಯಣರೆಡ್ಡಿ, ಸಂಗೀತ ಕ್ಷೇತ್ರ- ಹಿರಿಯೂರಿನ ಈರಣ್ಣ, ಯೋಗಕ್ಷೇತ್ರ- ಹೊಳಲ್ಕೆರೆಯ ಹಾಲಸಿದ್ದಪ್ಪ ಇವರನ್ನು ಸನ್ಮಾನಿಸಲಾಯಿತು. ಹಿರಿಯ ನಾಗರಿಕರಿಗಾಗಿ ಏರ್ಪಡಿಸಲಾಗಿದ್ದ ಕ್ರೀಡೆ ಮತ್ತು ಸಾಂಸ್ಕತಿಕ ಸ್ಪರ್ಧೆಯಲ್ಲಿ ವಿಜೇತರಾದ ಜಯಣ್ಣ ಎಂ.ಹೆಚ್. ಹಾಗೂ ಮಂಜಮ್ಮ ಅವರಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link