ಆರು ಜಿಲ್ಲೆಗಳಲ್ಲಿ ಖಾಯಂ ಜನತಾ ನ್ಯಾಯಾಲಯ

ದಾವಣಗೆರೆ :

        ಸಾರ್ವಜನಿಕ ಉಪಯುಕ್ತತಾ ಸೇವೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥ ಪಡಿಸುವ ಉದ್ದೇಶದಿಂದ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಖಾಯಂ ಜನತಾ ನ್ಯಾಯಾಲಯ ಸ್ಥಾಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಸಂಜೀವ್ ಕುಮಾರ್ ಹಂಚಾಟೆಯವರು ತಿಳಿಸಿದರು.

         ಖಾಯಂ ಜನತಾ ನ್ಯಾಯಲಯಗಳ ಸ್ಥಾಪನೆ ಮತ್ತು ಧ್ಯೇಯೋದ್ದೆಶಗಳ ಕುರಿತಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಂಗಳವಾರ ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಅವರು ಮಾತನಾಡಿದರು.

         ಪ್ರಯಾಣಿಕರನ್ನು ಅಥವಾ ಸರಕುಗಳನ್ನು ವಾಯುಮಾರ್ಗ, ರಸ್ತೆ ಅಥವಾ ನೀರಿನ ಮೂಲಕ ಸಾಗಿಸುವ ಸಾಗಾಣಿಕೆಯ ಸೇವೆ, ಅಂಚೆ, ಟೆಲಿಗ್ರಾಫ್ ಅಥವಾ ದೂರವಾಣಿ ಸೇವೆ, ಸಾರ್ವಜನಿಕ ವಿದ್ಯುತ್, ಬೆಳಕು ಅಥವಾ ನೀರಿನ ಸರಬರಾಜು ಮಾಡುವ ಯಾವುದೇ ಸಂಸ್ಥೆ, ಸಾರ್ವಜನಿಕ ಸಂರಕ್ಷಣೆ ಅಥವಾ ನೈರ್ಮಲ್ಯ ವ್ಯವಸ್ಥೆ, ಆಸ್ಪತ್ರೆ ಅಥವಾ ವಿತರಣೆ ಅಥವಾ ಸೇವೆ, ವಿಮೆ ಸೇವೆ, ಬ್ಯಾಂಕಿಂಗ್ ಹಾಗೂ ಹಣಕಾಸು ಸಂಸ್ಥೆಗಳು, ವಸತಿ ಮತ್ತು ರಿಯಲ್ ಎಸ್ಟೇಟ್ ಹಾಗೂ ಶಿಕ್ಷಣ ಸೇವೆಗಳನ್ನು ಸೇರಿದಂತೆ ಸಾರ್ವಜನಿಕ ಉಪಯುಕ್ತತೆಯ 9 ಸೇವೆಗಳಲ್ಲಿ ವ್ಯತ್ಯಾಸ ಅಥವಾ ಅಹವಾಲುಗಳಿದ್ದಲ್ಲಿ ಸರಳವಾಗಿ ಒಂದು ಬಿಳಿ ಹಾಳೆಯಲ್ಲಿ ಅರ್ಜಿ ಬರೆದು ದೂರನ್ನು ಖಾಯಂ ಜನತಾ ನ್ಯಾಯಾಲಯಗಳಲ್ಲಿ ದಾಖಲಿಸಬಹುದು ಎಂದು ಮಾಹಿತಿ ನೀಡಿದರು.

        ಕರ್ನಾಟಕ ರಾಜ್ಯದಲ್ಲಿ ಆರು ಖಾಯಂ ಜನತಾ ನ್ಯಾಯಾಲಯಗಳನ್ನು ಆಂಭಿಸಲಾಗಿದ್ದು, ಬೆಂಗಳೂರಿನಲ್ಲಿರುವ ಖಾಯಂ ಜನತಾ ನ್ಯಾಯಾಲಯದ ವ್ಯಾಪ್ತಿಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ ಮತ್ತು ತುಮಕೂರು ಜಿಲ್ಲೆಗಳು, ಬೆಳಗಾವಿಯ ನ್ಯಾಯಾಲಯದಲ್ಲಿ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳು, ಮೈಸೂರು ನ್ಯಾಯಾಲಯದಲ್ಲಿ ಮೈಸೂರು, ಕೊಡಗು, ಚಾಮರಾಜನಗರ, ಹಾಸನ, ಮತ್ತು ಮಂಡ್ಯ ಜಿಲ್ಲೆಗಳು, ಮಂಗಳೂರು ನ್ಯಾಯಾಲಯದಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮತ್ತು ಶಿವಮೊಗ್ಗ ಜಿಲ್ಲೆಗಳು, ಧಾರವಾಡ ನ್ಯಾಯಾಲಯದಲ್ಲಿ ಬಳ್ಳಾರಿ ಧಾರವಾಡ, ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ, ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಾಗೂ ಕಲಬುರಗಿ ನ್ಯಾಯಾಲಯದಲ್ಲಿ ಕಲಬುರಗಿ, ವಿಜಯಪುರ, ಬೀದರ್, ಮತ್ತು ರಾಯಚೂರು ಜಿಲ್ಲೆಗಳ ಜನರು ದೂರುಗಳನ್ನು ದಾಖಲಿಸಬಹುದಾಗಿದೆ ಎಂದು ಅವರು ವಿವರಿಸಿದರು.

        ಸಾರ್ವಜನಿಕ ಉಪಯುಕ್ತತಾ 9 ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ಅತ್ಯಂತ ಸರಳವಾಗಿ ಕೇವಲ ಒಂದು ಬಿಳಿ ಹಾಳೆಯ ಮೇಲೆ ಬರೆದು ಯಾವುದೇ ಶುಲ್ಕವಿಲ್ಲದೇ ಅರ್ಜಿ ಸಲ್ಲಿಸಿ, ಪರಿಹಾರ ಕಂಡುಕೊಳ್ಳಬಹುದು. ಈ ನ್ಯಾಯಾಲಯಗಳಲ್ಲಿ ಸಿವಿಲ್ ದೂರುಗಳನ್ನು ಸಲ್ಲಿಸಲು ಬರುವುದಿಲ್ಲ. ಬೇರೆ ನ್ಯಾಯಾಲಯದಲ್ಲಿ ಸಲ್ಲಿಸಿದ ದೂರನ್ನು ಇಲ್ಲಿ ಮತ್ತೆ ಸಲ್ಲಿಸಲು ಅವಕಾಶವಿಲ್ಲ ಎಂದರು.

        ಪ್ರಾರಂಭಿಕವಾಗಿ ಆರು ಜಿಲ್ಲೆಗಳಲ್ಲಿ ಖಾಯಂ ಜನತಾ ನ್ಯಾಯಾಲಯ ಸ್ಥಾಪಿಸಲಾಗಿದ್ದು, ಈ ನ್ಯಾಯಲಯಗಳಿಗೆ ಯಾವ ಜಿಲ್ಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ದೂರುಗಳು ಬರುತ್ತೋ, ಆ ಜಿಲ್ಲೆಗಳಲ್ಲಿ ಮುಂದೆ ಖಾಯಾಂ ಜನತಾ ನ್ಯಾಯಾಲಯವನ್ನು ಸರ್ಕಾರ ಸ್ಥಾಪಿಸಲಿದೆ ಎಂದು ಹೇಳಿದರು.

        ಗ್ರಾಮೀಣ ಭಾಗದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಕಾನೂನು ಸೇವೆಗಳು ಸೇರಿದಂತೆ ಖಾಯಂ ಜನತಾ ನ್ಯಾಯಾಲಯಗಳ ಬಗ್ಗೆಯೂ ಭಾಷಣ ಮತ್ತು ಸಂವಾದಗಳ ಮೂಲಕ ಜಾಗೃತಿ ಮೂಡಿರುವ ಕಾರ್ಯ ನಡೆದಿದೆ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಬಪ್ಪ, ನ್ಯಾಯಾಲಯದ ಸಿಬ್ಬಂದಿ ವರ್ಗದವರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap