ಬೆಂಗಳೂರು
ಉದ್ಯೋಗದ ನೆಪದಲ್ಲಿ ಹೊರ ರಾಜ್ಯಗಳಿಂದ ಯುವತಿಯರನ್ನು ಕರೆತಂದು ಮೊಬೈಲ್ನಲ್ಲಿ ಗಿರಾಕಿಗಳನ್ನು ಸಂಪರ್ಕಿಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ 6 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಮಾಗಡಿ ರಸ್ತೆಯ ಚೋಳಪಾಳ್ಯದ ಮಹೇಶ ಆಲಿಯಾಸ್ ಮೋರಿ (50) ಹೊರಮಾವುವಿನ ಮನುಕುಮಾರ್ (20) ಆಂಧ್ರಹಳ್ಳಿಯ ಮನುಕುಮಾರ್ (22) ಜಯನಗರದ ಸ್ವರೂಪ (19) ಹೊಸಹಳ್ಳಿಯ ರವಿ (32) ಇಂದಿರಾನಗರದ ತುಕಾರಾಂ (27) ಬಂಧಿತ ಆರೋಪಿಗಳಾಗಿದ್ದಾರೆ.
ಇವರಲ್ಲಿ ಮಹೇಶ ಆಲಿಯಾಸ್ ಮೋರಿ ಬಾಡಿಗೆ ಮನೆಯ ಮಾಲೀಕನಾದರೆ ಹೊಸಹಳ್ಳಿಯ ರವಿ ಗಿರಾಕಿಗಳನ್ನು ಸಂಪರ್ಕಿಸಿ ದಂಧೆ ನಡೆಸುತ್ತಿದ್ದು ಬಂಧಿತರಿಂದ 15 ಸಾವಿರ ನಗದು, 8 ಮೊಬೈಲ್, 1 ಕಾರು, ಸ್ಕೂಟರ್ ವಶಪಡಿಸಿಕೊಂಡು ಪಶ್ಚಿಮ ಬಂಗಾಳದ ಯುವತಿ ಸೇರಿದಂತೆ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಕೆಆರ್ಪುರಂನ ಶಾಂತಬಾಯಿ ರಸ್ತೆಯ ನೆಲಮಹಡಿಯ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡು ಹೊರ ರಾಜ್ಯಗಳಿಂದ ಯುವತಿಯರನ್ನು ಉದ್ಯೋಗ ಕೊಡಿಸುವ ನೆಪದಲ್ಲಿ ಕರೆತಂದು ಮೊಬೈಲ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ಆರೋಪಿಗಳು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.
ಹಲವು ದಿನಗಳಿಂದ ದಂಧೆ ನಡೆಸುತ್ತಿದ್ದು ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ಕೆಆರ್ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








