ಬೆಂಗಳೂರು,
ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆ ಇನ್ನಿತರ ಹೊರವಲಯದ ರಸ್ತೆಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡುವರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಉತ್ತರ ವಿಭಾಗದ ಸಂಚಾರ ಪೊಲೀಸರು ಭಾನುವಾರ ರಾತ್ರಿ ವ್ಹೀಲಿಂಗ್ ನಡೆಸುತ್ತಿದ್ದ 6 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ದೇವನಹಳ್ಳಿ 3, ಯಲಹಂಕ 2, ಚಿಕ್ಕಜಾಲ 1 ಸೇರಿ 6 ವ್ಹೀಲಿಂಗ್ ಮಾಡುತ್ತಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವ್ಹೀಲಿಂಗ್ ಮಾಡುತ್ತಿದ್ದ 8 ಯುವಕರನ್ನು ಠಾಣೆಗೆ ತಂದು ವಿಚಾರಣೆ ನಡೆಸಲಾಗಿದೆ
ಯಲಹಂಕ, ಚಿಕ್ಕಜಾಲ, ಆರ್.ಟಿ. ನಗರ, ದೇವನಹಳ್ಳಿ ಸೇರಿ ಉತ್ತರ ವಿಭಾಗದ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವ್ಹೀಲಿಂಗ್ ನಡೆಸುವರನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ತೀವ್ರ ಗೊಳಿಸಲಾಗಿದೆ ಎಂದು ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.
ಸ್ಕೂಟರ್ ಪತ್ತೆ
ದೇವನಹಳ್ಳಿ ಬಳಿ ಸ್ನೇಹಿತೆಯನ್ನು ಹಿಂಬದಿ ಕುಳಿತುಕೊಂಡು ಅಪಾಯಕಾರಿ ವ್ಹೀಲಿಂಗ್ ನಡೆಸಿದ ಹೊಂಡಾ ಡಿಯೋ ಸ್ಕೂಟರ್ ಪತ್ತೆಯಾಗಿದೆ. ವ್ಹೀಲಿಂಗ್ ನಡೆಸಿದ ಯುವಕ ಆಂಧ್ರದಲ್ಲಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ ಎಂದರು.
ಕೆಳ ದಿನಗಳ ಹಿಂದೆ ದೇವನಹಳ್ಳಿಯ ಮುಖ್ಯರಸ್ತೆಯಲ್ಲಿ ಯುವಕನೊಬ್ಬ ಸ್ಕೂಟರ್‍ನಲ್ಲಿ ಹಿಂದೆ ಸ್ನೇಹಿತೆಯನ್ನು ಕೂರಿಸಿಕೊಂಡು ಅಪಾಯಕಾರಿ ವ್ಹೀಲಿಂಗ್ ನಡೆಸಿದ್ದು, ಆ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಆತಂಕ ಸೃಷ್ಟಿಸಿದ್ದವು. ಈ ಬಗ್ಗೆ ದೇವನಹಳ್ಳಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದರು.