ದಾವಣಗೆರೆ :
ಪ್ರಸ್ತುತ ಶೇ.60 ರಷ್ಟು ಮಹಿಳೆಯರು ಸ್ವಾವಲಂಬಿಗಳಾಗುವ ಮೂಲಕ ಸ್ವತಂತ್ರ ಜೀವನ ಆಯ್ಕೆ ಮಾಡಿಕೊಂಡಿದ್ದಾರೆಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ನಾಗಶ್ರೀ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಇವುಗಳ ಸಂಯುಕ್ತಾಶ್ರಯದಲಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಸರ್ಕಾರ ನೀಡುವ ಮೀಸಲಾತಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಸದುಪಯೋಗ ಪಡೆಸಿಕೊಳ್ಳುವ ಮೂಲಕ ಪುರುಷನಂತೆಯೇ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿದ್ದಾಳೆ ಎಂದರು.
ವಿದ್ಯಾರ್ಥಿನಿಯರು ಮುಂದಿನ ಜೀವನವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಕಾರ್ಯಕ್ಷೇತ್ರದಲ್ಲಿ ಸಾಧನೆಯನ್ನು ಮಾಡುವತ್ತ ಗಮನ ಹರಿಸಬೇಕು. ಹೆಣ್ಣುಮಕ್ಕಳು ಇಂದು ಎಷ್ಟೇ ವಿದ್ಯಾವಂತೆ, ಬುದ್ದಿವಂತೆಯಾದರು ಅವಳು ಇಂದು ಅನೇಕ ರೀತಿ ಸಂಕಷ್ಟ, ಶೋಷಣೆ, ದೌರ್ಜನ್ಯ, ಮಾನಸಿಕ ಕ್ಲೇಷೆಗಳನ್ನು ಎದುರಿಸುತ್ತಿದ್ದಾಳೆ ಎಂದು ವಿಷಾದ ವ್ಯಕ್ತಪಡಿಸಿದರು.
ಪಕ್ಕದ ಮನೆಯಲ್ಲಿ ಗಂಡಸರು, ಗಂಡು ಮಕ್ಕಳು ಕೆಲಸ ಮಾಡಿದರೆ ಅದನ್ನು ಹೆಣ್ಣುಮಕ್ಕಳು ನೋಡಿ ನಗಬಾರದು. ಏಕೆಂದರೆ ಮನೆಯಲ್ಲಿ ಗಂಡ ಹೆಂಡತಿಯರಿಬ್ಬರಿಗೂ ಸಮಾನ ಕೆಲಸ ಮತ್ತು ಸಮಾನ ಜವಾಬ್ದಾರಿಗಳಿರುತ್ತವೆ. ಪುರುಷ-ಮಹಿಳೆಯರಿಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಹಂಚಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವವರನ್ನು ನೋಡಿ ಪ್ರಶಂಸಿಸಬೇಕು ಮತ್ತು ಪಾಲಿಸಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಸಿಜೆಎಂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಬಪ್ಪ ಮಾತನಾಡಿ, ವಿದ್ಯಾರ್ಥಿನಿಯರು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು.
ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಸಮಾಜಕ್ಕೆ ಅವರದೇ ಆದ ಕ್ಷೇತ್ರಗಳ ಮೂಲಕ ಉತ್ತಮ ರೀತಿಯ ಕೊಡುಗೆಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ವಕೀಲ ಸಂಘದ ಅಧ್ಯಕ್ಷರಾದ ಎನ್.ಟಿ ಮಂಜುನಾಥ್ ಮಾತನಾಡಿ, ಮಹಿಳೆ ಮತ್ತು ಪರುಷ ಇಬ್ಬರೂ ಸರಿಸಮಾನರು. ಇಂದು ಮನೆಗಳಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಚಾಣುಕ್ಯ ಹೆಳಿದಂತೆ ಪ್ರಪಂಚದಲ್ಲಿ ಎರಡು ಶಕ್ತಿಗಳಿವೆ. ಅವುಗಳೆಂದರೆ ಯುವ ಶಕ್ತಿ ಮತ್ತು ಹೆಣ್ಣು ಮಕ್ಕಳ ಸೌಂದರ್ಯ. ನೀವು ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಾಧನೆಯತ್ತ ಗಮನಹರಿಸಬೇಕು ಎಂದರು.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ಎಲ್.ಎಚ್ ಅರುಣ್‍ಕುಮಾರ್ ಮಾತನಾಡಿ, ನಮ್ಮನ್ನು ಜೈವಿಕವಾಗಿ ಮಾತ್ರ ಗಂಡು ಮತ್ತು ಹೆಣ್ಣು ಎಂದು ಗುರುತಿಸಲಾಗಿದೆ. ಆದರೆ ನಮ್ಮ ಒಳಗಿರುವ ಆತ್ಮಕ್ಕೆ ಗಂಡು, ಹೆಣ್ಣು ಎಂಬ ಬೇಧ ಭಾವವಿಲ್ಲ. ಇಂದು ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳದ ವಿಚಾರವಾಗಿದ್ದು, ಮಹಿಳೆಯರು ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಬೇಕು ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ದಾದಾಪೀರ್ ನವಿಲೇಹಾಳ್ ಮಾತನಾಡಿ, 1910 ಮಾರ್ಚ್ 10ರಂದು ಅಮೇರಿಕಾದ ಸಮಾಜವಾದಿ ಮಹಿಳೆ ಕ್ಲಾರ ಬೆಟ್‍ಕಿನ್ ಮಹಿಳೆಯರ ಹಕ್ಕುಗಳಿಗಾಗಿ ಪ್ರಥಮವಾಗಿ ಹೋರಾಟ ಮಾಡಿದ ದಿನವನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ