ಜಿಲ್ಲೆಯಲ್ಲಿ ಬಾಕಿ ಇವೆ 68,000 ಕ್ಕೂ ಹೆಚ್ಚು ಪ್ರಕರಣಗಳು

ತುಮಕೂರು:
     ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಜನತಾ ನ್ಯಾಯಾಲಯದಲ್ಲಿ ಜಿಲ್ಲೆಯಲ್ಲಿ 1242 ಪ್ರಕರಣಗಳು ಇತ್ಯರ್ಥಗೊಂಡಿವೆ. ಬರುವ ಡಿಸೆಂಬರ್ 14 ರ 2ನೇ ಶನಿವಾರದಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಆಸಕ್ತಿವುಳ್ಳವರು ಅಂದು ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಜಿಲ್ಲಾ ಪ್ರದಾನ ಸತ್ರ ನ್ಯಾಯಾಧೀಶರು ಆಗಿರುವ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಹೆಂಜಾಟೆ ಸಂಜೀವಕುಮಾರ್ ತಿಳಿಸಿದರು.
     ಜಿಲ್ಲಾ ನ್ಯಾಯಾಲಯದಲ್ಲಿರುವ ಪ್ರಾಧಿಕಾರದ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಸೆಪ್ಟೆಂಬರ್‍ನಲ್ಲಿ ನಡೆದ ಲೋಕ ಅದಾಲತ್‍ನಲ್ಲಿ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಪ್ರಕರಣಗಳು ಇತ್ಯರ್ಥಗೊಂಡಿಲ್ಲ. ಬರುವ ಡಿಸೆಂಬರ್ ವೇಳೆಗೆ ಇತ್ಯರ್ಥಗೊಳ್ಳಬಹುದಾದ ಪ್ರಕರಣಗಳ ಬಗ್ಗೆ ಹೆಚ್ಚು ಗಮನ ಹರಿಸುವಂತೆ ವಕೀಲರಿಗೆ ಮತ್ತು ಕಕ್ಷಿದಾರರಿಗೆ ಈ ಮೂಲಕ ಮನವಿ ಮಾಡಲಾಗುತ್ತಿದೆ. ರಾಜಿ ಮಾಡಿಕೊಳ್ಳಬಹುದಾದ ಪ್ರಕರಣಗಳು ಅಥವಾ ವ್ಯಾಜ್ಯಪೂರ್ವ ಪ್ರಕರಣಗಳನ್ನು ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತಂದು ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
      ಕಳೆದ ಮಾರ್ಚ್, ಜುಲೈ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ರಾಷ್ಟ್ರಾದ್ಯಂತ ನಡೆದಿರುವ ಪ್ರಕರಣಗಳ ಇತ್ಯರ್ಥಕ್ಕೆ ಹೋಲಿಸಿದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಲೋಕ ಅದಾಲತ್ ಮೂಲಕ ಪ್ರಕರಣ ಇತ್ಯಥಪಡಿಸುವಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ನಾನು ಈ ಹಿಂದೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದು, ಲೋಕ ಅದಾಲತ್ ಮೂಲಕ ಪ್ರಕರಣ ಇತ್ಯರ್ಥಪಡಿಸಲು ಹೆಚ್ಚು ಗಮನ ಹರಿಸಿರುತ್ತೇನೆ. ಇನ್ನು ಮುಂದೆಯೂ ಇದೇ ರೀತಿಯಲ್ಲಿ ಪ್ರಯತ್ನಿಸಲಾಗುವುದು ಎಂದರು.
     ಯಾವ ಪ್ರಜೆಯೂ ತನ್ನ ಆರ್ಥಿಕ ದೌರ್ಬಲ್ಯದ ಕಾರಣಗಳಿಂದಾಗಿ ನ್ಯಾಯ ಪಡೆಯುವುದರಿಂದ ವಂಚಿತನಾಗಬಾರದೆಂದು ಉಚಿತ ಮತ್ತು ಸಕ್ಷಮ ಕಾನೂನು ಸೇವೆಗಳನ್ನು ಪ್ರಾಧಿಕಾರವು ಒದಗಿಸುತ್ತದೆ. ಜನತಾ ನ್ಯಾಯಾಲಯದ ಮೂಲಕ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣ ಎರಡನ್ನೂ ಪರಿಗಣಿಸಲಾಗುವುದು. ಜಿಲ್ಲೆ ಮಾತ್ರವಲ್ಲದೆ ತಾಲ್ಲೂಕು ಕೇಂದ್ರಗಳಲ್ಲಿಯೂ ಈ ಅದಾಲತ್ ನಡೆಸುತ್ತಿದ್ದು, ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
      ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾದವರು, ವಿವಿಧ ಸೌಲಭ್ಯಗಳನ್ನು ನೀಡಲು ಇಲಾಖೆಗಳಲ್ಲಿ ನಿರ್ಲಕ್ಷ್ಯ ವಹಿಸಿ ಕಾರ್ಡ್‍ಗಳನ್ನು ವಿತರಿಸದೇ ಇರುವುದು ಇತ್ಯಾದಿಗಳು ದೂರು ಬಂದರೆ ಪ್ರಾಧಿಕಾರವು ಅಂತಹ ದೂರುಗಳನ್ನೂ ಸಹ ಪರಿಗಣಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿ ಸಮಸ್ಯೆ ಇತ್ಯರ್ಥಪಡಿಸಲು ಸೂಚಿಸಲಾಗುವುದು ಎಂದು ಪತ್ರಕರ್ತರಿಗೆ ತಿಳಿಸಿದರು.
     ಜನತಾ ನ್ಯಾಯಾಲಯದಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳಾದ ಚೆಕ್ ಅಮಾನ್ಯ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣಗಳು ಕಾರ್ಮಿಕ ವಿವಾದಗಳು, ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೈಮ್‍ಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳನ್ನು ಜನತಾ ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲು ಅವಕಾಶವಿದೆ ಎಂದರು. ವೈವಾಹಿಕ ವ್ಯಾಜ್ಯ ಪ್ರಕರಣಗಳಲ್ಲಿ ಜೀವನಾಂಶ, ಒಂದುಗೂಡಿಸುವಿಕೆ ಪ್ರಕರಣಗಳಲ್ಲಿಯೂ ಅವಕಾಶವಿದ್ದು, ವಿವಾಹ ವಿಚ್ಛೇಧನವನ್ನು ಇಲ್ಲಿ ಇತ್ಯರ್ಥಪಡಿಸಲಾಗದು ಎಂದರು.
     ನ್ಯಾಯಾಲಯದಲ್ಲಿ ಬಾಕಿ ಇರುವ ಯಾವುದೇ ತರಹದ ಸಿವಿಲ್ ಹಾಗೂ ರಾಜಿಯಾಗಬಹುದಾದ ಅಪರಾಧಿಕ ಪ್ರಕರಣಗಳು, ಚೆಕ್, ಬ್ಯಾಂಕ್ ಪ್ರಕರಣಗಳು ಮೋಟಾರು ವಾಹನ ಅಪಘಾತ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು ಇತ್ಯಾದಿಗಳನ್ನು ಇತ್ಯರ್ಥಪಡಿಸಲಾಗುವುದು. ಜನತಾ ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಪ್ರಕರಣಗಳಿಗೆ ಸಿವಿಲ್ ನ್ಯಾಯಾಲಯದಲ್ಲಿ ಇರುವ ಡಿಕ್ರಿಯಂತೆಯೇ ಮಾನ್ಯತೆ ದೊರೆಯಲಿದೆ. ಇದರ ವಿರುದ್ಧ ಮೇಲ್ಮನವಿಗೆ ಹೋಗಲು ಅವಕಾಶವಿರುವುದಿಲ್ಲ. ಅಲ್ಲದೆ, ನ್ಯಾಯಾಲಯದಲ್ಲಿ ಪಾವತಿಸಿರುವ ಕೋರ್ಟ್ ಫೀಯನ್ನು ಕಕ್ಷಿದಾರರಿಗೆ ಹಿಂದಿರುಗಿಸಲಾಗುವುದು ಎಂದರು.
     ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಪ್ರದಾನ ಹಿರಿಯ ದಿವಾನಿ ನ್ಯಾಯಾಧೀಶರಾದ ಬಿ.ದಶರಥ, ವಕೀಲರ ಸಂಘದ ಅಧ್ಯಕ್ಷ ಜಿ.ಕೆ.ಅನಿಲ್ ಕುಮಾರ್, ಪ್ರದಾನ ಕಾರ್ಯದರ್ಶಿ ದೇವರಾಜ್ ಉಪಸ್ಥಿತರಿದ್ದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link