ಬೆಂಗಳೂರು:
ರಾಜ್ಯದ ಪ್ರಸಿದ್ಧ ಏಳು ನರ್ಸಿಂಗ್ ಕಾಲೇಜುಗಳು ಈಗ ಮಾನ್ಯತೆ ಕಳೆದು ಕೊಳ್ಳುವ ಭೀತಿ ಎದುರಿಸುತ್ತಿವೆ ಎಂದು ತಿಳಿದು ಬಂದಿದೆ, ಈ ಸಂಬಂಧ ಕಾಲೇಜುಗಳಿಗೆ ಸಾರ್ವಜನಿಕ ನೋಟಿಸ್ ನೀಡಲಾಗಿದೆ.
ನಕಲಿ ಅಂಕಪಟ್ಟಿ ವಿತರಣೆ ಹಗರಣದಲ್ಲಿ ಸಿಲುಕಿಕೊಂಡಿರುವ ಈ ಏಳು ನರ್ಸಿಂಗ್ ಹಾಗೂ ಅನ್ವಯಿಕ ವಿಜ್ಞಾನ ಕೋರ್ಸ್ ಕಾಲೇಜುಗಳಿಗೆ ಯಾವುದೇ ಕಾರಣಕ್ಕೂ ಮಾನ್ಯತೆ ನವೀಕರಿಸುವುದಿಲ್ಲ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಸಚ್ಚಿದಾನಂದ ಹೇಳಿದ್ದಾರೆ.
”ಬೆಥೆಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಬೆತ್ ಕಾಲೇಜ್ ಆಫ್ ಫಿಜಿಯೋಥೆರಪಿ, ಹಾಸ್‌ಮ್ಯಾಟ್ ಕಾಲೇಜ್ ಆಫ್ ನರ್ಸಿಂಗ್, ಹಾಸ್‌ಮ್ಯಾಟ್ ಕಾಲೇಜ್ ಆಫ್ ಫಿಜಿಯೋಥೆರಪಿ ಮತ್ತು ಶಿಕ್ಷಣ ಸಂಸ್ಥೆಗಳು, ಗಾಯತ್ರಿದೇವಿ ಕಾಲೇಜ್ ಆಫ್ ನರ್ಸಿಂಗ್, ಪಾನ್ ಏಷಿಯಾ ಕಾಲೇಜ್ ಆಫ್ ನರ್ಸಿಂಗ್ ಕಾಲೇಜುಗಳು ನಕಲಿ ಅಂಕಪಟ್ಟಿ ಹಗರಣದಲ್ಲಿ ಸಿಲುಕಿವೆ ಎಂದು ತಿಳಿದು ಬಂದಿದೆ. ಈ ಕಾಲೇಜುಗಳಿಗೆ ನೋಟಿಸ್ ನೀಡಲಾಗಿದ್ದು, ಮಾನ್ಯತೆ ನವೀಕರಣ ಮಾಡದೇ ಇರಲು ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.