ತುಮಕೂರು
“ತುಮಕೂರು ನಗರದ 3 ನೇ ವಾರ್ಡ್ ವ್ಯಾಪ್ತಿಯ ಶಿರಾಗೇಟ್‍ನ 150 ಅಡಿ ರಸ್ತೆಯಲ್ಲಿ ಟೆಂಡರ್ ಆಗದೆ, ಕಾರ್ಯಾದೇಶ ವಿಲ್ಲದೆ 70 ಲಕ್ಷ ರೂ. ಮೊತ್ತದ ಕಾಮಗಾರಿಯನ್ನು ಈ ಹಿಂದೆ ಮಾಡಲಾಗಿದೆ” ಎಂಬ ಗಂಭೀರ ಆರೋಪವನ್ನು ತುಮಕೂರು ಮಹಾನಗರ ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (3 ನೇ ವಾರ್ಡ್- ಅರಳಿಮರದ ಪಾಳ್ಯ) ಮಾಡಿದ್ದಾರೆ.ತುಮಕೂರು ಮಹಾನಗರ ಪಾಲಿಕೆಯ ಇತ್ತೀಚಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಮಾತನಾಡಿ ರುವುದಾಗಿ ತಿಳಿಸಿರುವ ಅವರು, “ಇದು ಹೇಗೆ ಸಾಧ್ಯವಾಗಿದೆ? ಇದಕ್ಕೆ ಯಾರ್ಯಾರು ಕಾರಣರು? ಇದರ ಬಿಲ್ ಹೇಗೆ ಮಂಜೂರಾಗುತ್ತದೆ?” ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
“ಶಿರಾಗೇಟ್‍ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಅಧಿಕೃತ ಆದೇಶವಿಲ್ಲದೆ ಹಳೆಯ ಮನೆಗಳನ್ನು ತೆರವು ಮಾಡಲಾಗಿದೆ. ಇಷ್ಟಬಂದಂತೆ ಕಾಮಗಾರಿಗಳನ್ನು ಈ ಹಿಂದೆ ಕೈಗೊಳ್ಳಲಾಗಿದೆ. ಸಿಟಿ ಕ್ಲಬ್ ರಸ್ತೆಯಲ್ಲಿ ಕಳಪೆ ಕಾಮಗಾರಿ ಮಾಡಲಾಗಿದ್ದು, ಕೇವಲ 3 ತಿಂಗಳುಗಳಲ್ಲೇ ರಸ್ತೆ ಹಾಳಾಗಿ ಗುರುತೇ ಸಿಗದಂತಾಗಿದೆ. ರಸ್ತೆ ಮಧ್ಯ ವಿದ್ಯುತ್ ಕಂಬವಿದ್ದರೂ ಅದನ್ನು ತೆಗೆಸದೆ, ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದು ಆ ರಸ್ತೆಯೂ ಈಗಾಗಲೇ ಹಾಳಾಗಿದೆ. ಶಿರಾಗೇಟ್ ರಸ್ತೆಯ ಅಭಿವೃದ್ಧಿಗಾಗಿ ಒಮ್ಮೆ 85 ಲಕ್ಷ ರೂ. ಹಾಗೂ ಇನ್ನೊಮ್ಮೆ 70 ಲಕ್ಷ ರೂ. ವೆಚ್ಚ ಮಾಡಲಾಗಿದ್ದು, ಆ ವೆಚ್ಚಕ್ಕನುಗುಣವಾಗಿ ಏನೇನು ಕಾಮಗಾರಿ ಮಾಡಲಾಗಿದೆಯೆಂಬುದೇ ಗೋಚರಿಸುತ್ತಿಲ್ಲ” ಎಂದು ಲಕ್ಷ್ಮೀನರಸಿಂಹರಾಜು ಪಟ್ಟಿ ಮಾಡಿದ್ದಾರೆ.
`ಕಾಮಗಾರಿಯ ಹೆಸರೇ ಒಂದು ಕಡೆ, ಕಾಮಗಾರಿ ನಡೆದಿರುವುದೇ ಒಂದು ಕಡೆ. ಈ ರೀತಿ ಹಲವು ಬದಲಾವಣೆಗಳು ಆಗಿವೆ ಹಾಗೂ ಅನೇಕ ಕಾಮಗಾರಿಗಳು ಕಳಪೆಯಾಗಿ ನಡೆದಿವೆ” ಎಂದು ಹೇಳಿದ್ದಾರೆ.”ಇಂತಹ ಹಲವು ಪ್ರಕರಣಗಳಿದ್ದು, ಇದಕ್ಕಾಗಿ ಈ ಕಾಮಗಾರಿಗಳು ನಡೆದ ಸಂದರ್ಭದಲ್ಲಿದ್ದ ಜೂನಿಯರ್ ಇಂಜಿನಿಯರ್ ಅವರ ವಿರುದ್ಧ ತನಿಖೆ ಆಗಬೇಕು” ಎಂದು ಒತ್ತಾಯಿಸಿದ್ದಾರೆ.
“ಪಾಲಿಕೆಯ ಸಭೆಯಲ್ಲಿ ಈ ಬಗ್ಗೆ ನಾನು ದಿನಪೂರ್ತಿ ಚರ್ಚಿಸಿದ್ದೇನೆ. ದಾಖಲೆಗಳನ್ನು ಮುಂದಿಟ್ಟಿ ಸಭೆಯ ಗಮನ ಸೆಳೆದಿದ್ದೇನೆ. ಸಭೆಯ ನಡವಳಿಯೂ ಹೊರಬಂದಿದೆ. ಇನ್ನೂ ಸ್ವಲ್ಪದಿನ ಕಾದು ನೋಡುತ್ತೇನೆ. ಬಳಿಕ ಅನುಪಾಲನಾ ವರದಿಯನ್ನು ಕೇಳುತ್ತೇನೆ” ಎಂದು ಲಕ್ಷ್ಮೀನರಸಿಂಹರಾಜು ತಿಳಿಸಿದ್ದಾರೆ.
ಸ್ಥಾಯಿ ಸಮಿತಿಗೆ ರವಾನೆ
ಶಿರಾಗೇಟ್‍ನ ಐ.ಡಿ.ಎಸ್.ಎಂ.ಟಿ. ಲೇಔಟ್ ಮತ್ತು ಮಳಿಗೆಗಳ ಬಗ್ಗೆ ಚರ್ಚಿಸಲು ಇದೇ ಸಾಮಾನ್ಯ ಸಭೆಗೆ ಲಕ್ಷ್ಮೀನರಸಿಂಹರಾಜು ವಿಷಯ (26/2) ಮಂಡಿಸಿದ್ದರು. ಆದರೆ ಸಾಮಾನ್ಯ ಸಭೆಯ ಬದಲು ಮೊದಲಿಗೆ ಹಣಕಾಸು ಮತ್ತು ತೆರಿಗೆ ನಿರ್ವಹರಣೆ ಸ್ಥಾಯಿ ಸಮಿತಿ ಸಭೆಯಲ್ಲೇ ಈ ಬಗ್ಗೆ ಸಂಪೂರ್ಣವಾಗಿ ಚರ್ಚಿಸಲು ತೀರ್ಮಾನಿಸಿರುವ ಅಚ್ಚರಿಯ ಬೆಳವಣಿಗೆಯೂ ನಡೆದಿದೆ. ಈ ಸ್ಥಾಯಿ ಸಮಿತಿಯ ಮುಂದಿನ ಸಭೆಯಲ್ಲಿ ಈ ವಿಷಯವು ಚರ್ಚೆಗೊಳ್ಳಲಿದ್ದು, ಹಲವು ಅಚ್ಚರಿಯ ಸಂಗತಿಗಳು ಬೆಳಕಿಗೆ ಬರುವ ನಿರೀಕ್ಷೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ