ಹರಿಹರದಲ್ಲಿ ಶೇ.74.12ರಷ್ಟು ಮತದಾನ

ಹರಿಹರ:

        ಲೋಕಸಭೆ ಚುನಾವಣೆಗೆ ಮಂಗಳವಾರ ನಡೆದ ಮತದಾನ ಪ್ರಕ್ರಿಯೆ ತಾಲ್ಲೂಕಿನಲ್ಲಿ ಸಂಪೂರ್ಣ ಶಾಂತಿಯುತವಾಗಿ ನಡೆದಿದ್ದು, ಶೇ.74.12 ರಷ್ಟು ಮತದಾನವಾಗಿದೆ. ಬೆಳಗ್ಗೆ 7 ರಿಂದಲೆ ಮತದಾರರು ಆಯಾ ಮತಗಟ್ಟೆ ಮುಂದೆ ಸಾಲುಗಟ್ಟಿ ನಿಂತು ಮತದಾನ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಬೆಳಿಗ್ಗೆ ಸ್ವಲ್ಪ ನೀರಸವಾಗಿ ಆರಂಭವಾದ ಮತದಾನ ಬಿಸಿಲೇರುತ್ತಿದ್ದಂತೆ ಬಿರುಸು ಪಡೆದುಕೊಂಡಿತು. 11ರಿಂದ ಮಧ್ಯಾಹ್ನ 1ರವರೆಗೆ ಹೆಚ್ಚಿನ ಮತದಾನ ನಡೆಯಿತು.

        ಬೆಳಿಗ್ಗೆ 7 ರಿಂದ 9 ರವರೆಗೆ ಶೇ.7.64 ರಷ್ಟು, 11ರ ವೇಳೆಗೆ ಶೇ.21.19 ರಷ್ಟು ಮತದಾನವಾದರೆ, ಮಧ್ಯಾಹ್ನ 1ರ ವೇಳೆಗೆ ಶೇ.36.10 ರಷ್ಟು, 3ರ ವೇಳೆಗೆ ಶೇ.53.63, ಸಂಜೆ 5ಕ್ಕೆ 68.10, ಸಂಜೆ 6ಕ್ಕೆ 74.12ರಷ್ಟು ಮತದಾನವಾಯಿತು. 103181 ಪುರುಷರು, 102344 ಮಹಿಳೆಯರು, 17 ತೃತೀಯ ಲಿಂಗದವರು ಸೇರಿ ಒಟ್ಟು 205541 ಮತದಾರರ ಪೈಕಿ 80087 ಪುರುಷ, 74213 ಮಹಿಳಾ, ಓರ್ವ ಇತರೆ ಸೇರಿ ಒಟ್ಟು 154301 ಮತದಾರರು ತಮ್ಮ ಹಕ್ಕು ಚಲಾಯಿಸಿದಂತಾಗಿದೆ.

        ಕೆಲ ವಾರ್ಡ್‍ಗಳಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಮತದಾನ ಮಾಡಲು ಆಗಮಿಸುತ್ತಿದ್ದ ಮತದಾರರನ್ನು ಕೊನೆ ಕ್ಷಣದ ಪ್ರಚಾರ ಮಾಡುವ ವಿಷಯದಲ್ಲಿ ಪರಸ್ಪರ ಪಕ್ಷಗಳ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆದವಾದರೂ ಸ್ಥಳದಲ್ಲಿ ಹಾಜರಿದ್ದ ಪೊಲೀಸರು ಹಾಗೂ ಮುಖಂಡರು ಸಮಾಧಾನ ಪಡಿಸಿ ಶಾಂತತೆ ಕಾಪಾಡಿದರು. ಮತದಾನ ಕೇಂದ್ರದಿಂದ 300 ಮೀಟರ್ ದೂರ ಇರುವಂತೆ ಪಕ್ಷಗಳ ಕಾರ್ಯಕರ್ತರನ್ನು ಕಳಿಸುವ ಕಾರ್ಯ ಪೊಲೀಸರಿಂದ ಆಗಾಗ್ಗೆ ನಡೆಯುತ್ತಿತ್ತು.

        ಆಯೋಗದ ಕಟ್ಟುನಿಟ್ಟಿನ ನಿರ್ಬಂಧದ ನಡುವೆಯೂ ಅಲ್ಲಲ್ಲಿ ಬಿಜೆಪಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಾರ್ಯಕರ್ತರು ಮತದಾರರಿಗೆ ಮತಗಟ್ಟೆಗೆ ತೆರಳಲು ಆಟೋ, ಕಾರು ವ್ಯವಸ್ಥೆ ಮಾಡಿದ್ದರು. ಮತದಾರರ ಯಾದಿಯಲ್ಲಿ ಮತದಾರರ ಫೋಟೋ ಸಮೇತ ಮಾಹಿತಿ ಇರುವುದು ಹಾಗೂ ಬಹುತೇಕ ಮತದಾರರು ಫೋಟೋದೊಂದಿಗಿನ ಒಂದಿಲ್ಲಾ ಒಂದು ಗುರುತು ಪತ್ರ ತೋರಿಸುತ್ತಿದ್ದರಿಂದ ಯಾವ ಮತಗಟ್ಟೆಯಲ್ಲೂ ಫ್ರಾಕ್ಸಿ ಮತದಾನ ನಡೆದ ಬಗ್ಗೆ ವರದಿಯಾಗಿಲ್ಲ.

ಬಸ್ಸಿಗೆ ಪರದಾಟ

         ರಾಜ್ಯ ಸಾರಿಗೆ ಸಂಸ್ಥೆಯ ಬಹುತೇಕ ಬಸ್ಸುಗಳನ್ನು ಚುನಾವಣೆ ಕಾರ್ಯಕ್ಕೆ ಬಳಸಿಕೊಂಡಿರುವುದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ಪ್ರಯಾಣಿಕರಲ್ಲಿ ಮತದಾನಕ್ಕೆಂದು ಸ್ವಗ್ರಾಮಕ್ಕೆ ತೆರಳುತ್ತಿದ್ದವರೆ ಅಧಿಕವಾಗಿದ್ದರು.

         ನಗರದ ಜಿಲ್ಲಾ ಪಂಚಾಯತ್ ಉಪ ವಿಭಾಗದ ಮತಗಟ್ಟೆ ಸಂಖ್ಯೆ 46 ರಲ್ಲಿ ಮತಯಂತ್ರ ದೋಷ ಕಂಡು ಬಂದಿದ್ದರಿಂದ ಮುಕ್ಕಾಲು ಗಂಟೆ ತಡವಾಗಿ ಮತದಾನ ಆರಂಭವಾಯಿತು. ಅಣಕು ಮತದಾನದ ವೇಳೆ ಸರಿಯಾಗಿ ಕಾರ್ಯ ನಿರ್ವಹಿಸಿದ ಮತಯಂತ್ರ, 7ಗಂಟೆಗೆ ಮತದಾನ ಆರಂಭಿಸುವ ವೇಳೆಗಾಗಲೆ ಸ್ಥಗಿತಗೊಂಡಿತ್ತು. ನಂತರ ಹೊಸ ಮತಯಂತ್ರ ತರಿಸಿ 7.45ಕ್ಕೆ ಮತದಾನ ಪ್ರಕ್ರಿಯೆ ಆರಂಭಿಸಲಾಯಿತು.

       ತಾಲ್ಲೂಕಿನ ಹನಗವಾಡಿ ಗ್ರಾಮದ ಮತಗಟ್ಟೆ ಸಂಖ್ಯೆ 103ರಲ್ಲೂ ಮತಯಂತ್ರ ಕೈಕೊಟ್ಟ ಕಾರಣ ಒಂದು ಗಂಟೆ ತಡವಾಗಿ ಮತದಾನ ಆರಂಭಿಸಲಾಯಿತು. ಸೋಮವಾರ ಮತಗಟ್ಟೆ ಅಧಿಕಾರಿಗಳಿಗೆ ವಿತರಿಸುವಾಗ ಪರಿಶೀಲಿಸಿ, ಸರಿಯಾಗಿ ಕಾರ್ಯ ನಿರ್ವಹಿಸುವುದನ್ನು ಖಚಿತಪಡಿಸಿಕೊಂಡು ನೀಡಲಾಗಿದ್ದ ಮತಯಂತ್ರ ಬೆಳಿಗ್ಗೆ 6ಕ್ಕೆ ಅಣಕು ಮತದಾನ ಮಾಡುವಾಗಲೆ ಸ್ತಬ್ದವಾಗಿತ್ತು.
6-30ರ ವೇಳೆಗೆ ಸ್ಥಳಕ್ಕೆ ಬೆಲ್ ಕಂಪನಿಯ ಇಂಜಿನಿಯರ್ ಬಂದು ದುರಸ್ತಿಪಡಿಸಲು ಪ್ರಯತ್ನಿಸಿದರೂ ಫಲ ನೀಡದ ಕಾರಣ ಕೊನೆಗೆ ನಗರದ ಸೇಂಟ್ ಮೇರೀಸ್ ಕಾನ್ವೆಂಟ್ ಶಾಲೆಯ ಮಸ್ಟರಿಂಗ್ ಕೇಂದ್ರದಿಂದ ಬದಲಿ ಮತಯಂತ್ರ ತಂದು ಬೆಳಿಗ್ಗೆ 8ಕ್ಕೆ ಮತದಾನ ಆರಂಭಿಸಲಾಯಿತು.

        ಬೆಳಿಗ್ಗೆ ಬೇಗ ಬಂದು ಮತ ಚಾಲಾಯಿಸಿ ತಮ್ಮ ಕೆಲಸ ಕಾರ್ಯಗಳಿಗೆ ತೆರಳಲೆಂದು ಬಂದಿದ್ದ ನೂರಾರು ಜನ ಮತದಾರರು ಮತಗಟ್ಟೆ ಎದುರು 1 ಗಂಟೆಗೂ ಅಧಿಕ ಕಾಲ ಉಪಹಾರವನ್ನೂ ಸೇವಿಸದೆ ಕಾಯುತ್ತಾ ನಿಲ್ಲಬೇಕಾಯಿತು. ತಾಲ್ಲೂಕಿನ ವಿವಿದೆಡೆ 4 ಮತಗಟ್ಟೆಗಳಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ 1 ಕಂಟ್ರೂಲ್ ಯುನಿಟ್, 2 ಬ್ಯಾಲೆಟ್ ಯುನಿಟ್, 4 ವಿವಿ ಪ್ಯಾಟ್ ಬದಲಿಸಲಾಯಿತು ಎಂದು ತಹಶೀಲ್ದಾರ್ ಯು.ನಾಗರಾಜ್ ಹೇಳಿದರು.

        ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ: ನಗರ ಹಾಗೂ ತಾಲ್ಲೂಕಿನ ವಿವಿಧ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರ ಚೀಟಿಗಳನ್ನು ವಿತರಿಸಿಲ್ಲವೆಂದು ಗೊಂದಲ ಸೃಷ್ಟಿಯಾಯಿತು. ಇದಲ್ಲದೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ನೂರಾರು ಮತದಾರರು ಮತದಾನದಿಂದ ವಂಚಿತವಾಗಿದ್ದು ಸಂಬಂಧ ಪಟ್ಟ ಅಧಿಕಾರಿಗೆ ದೂರವಾಣಿ ಸಲಹೆ ಪಡೆದರು ಯಾವುದೆ ಪ್ರಯೋಜನವಾಗಲಿಲ್ಲ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದವರು ಏಕಾಏಕಿ ತಮ್ಮ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆ ಆಗಿದ್ದು ಏಕೆಂದು ಆಕ್ರೋಶ ವ್ಯಕ್ತಪಡಿಸಿದರು. ನಗರದ ಮೂರ್ಕಲ್ ಕಾಂಪೌಂಡ್‍ನ ಮತಗಟ್ಟೆ ಸಂಖ್ಯೆ 28ರಲ್ಲಿ ನೂರಕ್ಕೂ ಹೆಚ್ಚು ಮತದಾರರ ಹೆಸರು ಕೈಬಿಡಲಾಗಿದೆ ಎಂದು ಬಿಜೆಪಿ ಕಾರ್ಯಕರ್ತ ಚಂದನ್ ಮೂರ್ಕಲ್ ಆರೋಪಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap