1059 ಕೋಟಿ ರೂ. ವೆಚ್ಚದಲ್ಲಿ 74 ಕಾಮಗಾರಿ

ದಾವಣಗೆರೆ:

    ಕೇಂದ್ರ ಸರ್ಕಾರದ ಸ್ಮಾರ್ಟ್‍ಸಿಟಿ ಯೋಜನೆಗೆ ಮೊದಲ ಹಂತದಲ್ಲೇ ಆಯ್ಕೆಯಾಗಿರುವ ದಾವಣಗೆರೆಯಲ್ಲಿ ಈ ವರೆಗೂ 1059.92 ಕೋಟಿ ರೂ. ವೆಚ್ಚದಲ್ಲಿ 74 ಕಾಮಗಾರಿಗಳನ್ನು ರೂಪಿಸಲಾಗಿದೆ ಎಂದು ದಾವಣಗೆರೆ ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಅರ್ಶದ್ ಷರೀಫ್ ತಿಳಿಸಿದ್ದಾರೆ.

   ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ನಗರ ಸ್ಮಾರ್ಟ್‍ಸಿಟಿ ಯೋಜನೆಗೆ ಆಯ್ಕೆಯಾಗಿ, ಇಂದಿಗೆ ನಾಲ್ಕು ವರ್ಷ ಕಳೆದಿದ್ದು, 5.88 ಕೋಟಿ ರೂ. ವೆಚ್ಚದಲ್ಲಿ 12 ಕಾಮಗಾರಿಗಳು ಪೂರ್ಣಗೊಂಡಿದ್ದರೆ, 549.06 ಕೋಟಿ ರೂ. ವೆಚ್ಚದಲ್ಲಿ 41 ಕಾಮಗಾರಿಗಳು ಪ್ರಗತಿಯಲ್ಲಿವೆ. 161.73 ಕೋಟಿ ರೂ. ವೆಚ್ಚದ 9 ಕಾಮಗಾರಿಗಳು ಟೆಂಡರ್ ಹಂತದಲ್ಲಿದ್ದು, ರೂ.353.25 ಕೋಟಿ ರೂ. ವೆಚ್ಚದ 12 ಕಾಮಗಾರಿಗಳು ಕ್ರಿಯಾ ಯೋಜನೆಯ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.

     ಮೊದಲ ಹಂತದಲ್ಲಿ 1.39 ಕೋಟಿ ರೂ. ವೆಚ್ಚದಲ್ಲಿ 9 ಪಾರ್ಕ್‍ಗಳು ಹಾಗೂ ಎರಡನೇ ಹಂತದಲ್ಲಿ 37 ಪಾರ್ಕ್‍ಗಳನ್ನು ಆಯ್ಕೆ ಮಾಡಿಕೊಂಡು, ಪಾರ್ಕ್‍ಗಳಲ್ಲಿ ಇ-ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. 1 ರಿಂದ 10ರ ವರೆಗಿನ ನಾಣ್ಯ ಹಾಕಿದರೆ ಇ-ಶೌಚಾಲಯ ಬಾಗಿಲು ತೆರಯುತ್ತದೆ. ಪ್ರತಿ 5 ಜನರ ಉಪಯೋಗದ ನಂತರ ಸ್ವಯಂ ಚಾಲಿತವಾಗಿ ಒಳಗಡೆ ಫ್ಲೋರ್‍ನ್ನು ಸ್ವಚ್ಛಗೊಳಿಸುತ್ತದೆ ಎಂದರು.

      3.58 ಕೋಟಿ ರೂ.ಗಳಲ್ಲಿ ನಗರದ 52 ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಸ್ಮಾರ್ಟ್ ಬಸ್ ಶೆಲ್ಟರ್‍ಗಳನ್ನು ನಿರ್ಮಿಸಲಾಗುತ್ತಿದ್ದು, ಎಲ್ಲಾ ಬಸ್‍ಗಳಿಗೆ ಜಿಪಿಎಸ್ ಅಳವಡಿಸಿ ಬಸ್ ಬರುವ ಸಮಯನ್ನು ಪ್ರದರ್ಶಿಸುವಂತೆ ಎಲ್‍ಇಡಿ ಫಲಕಗಳನ್ನು ಅಳವಡಿಸಲಾಗುವುದು.

      25.41 ಕೋಟಿ ರೂ. ವೆಚ್ಚದಲ್ಲಿ ಹಳೇ ಬಸ್ ನಿಲ್ದಾಣದ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, 21420.74 ಚ.ಮೀ. ವಿಸ್ತೀರ್ಣದಲ್ಲಿ ಕೆಳ ಮಹಡಿಯಲ್ಲಿ 92 ನಾಲ್ಕು ಚಕ್ರದ ವಾಹನ ಮತ್ತು 122 ದ್ವಿಚಕ್ರ ವಾಹನ ನಿಲುಗಡೆ ಹಾಗೂ ನೆಲ ಮಹಡಿಯಲ್ಲಿ 12 ಬಸ್ ನಿಲ್ಲುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ನಿಲ್ದಾಣದಲ್ಲಿ ಅಂಗಡಿಗಳು, ನಿರ್ವಹಣಾ ಕೊಠಡಿ, ಶೌಚಾಲಯ, ಸ್ನಾನದ ಕೊಠಡಿ, ರ್ಯಾಂಪ್, ಪ್ರಯಾಣಿಕರಿಗೆ ಆಸನದ ವ್ಯವಸ್ಥೆ, ಕುಡಿಯುವ ನೀರು, ಲಿಫ್ಟ್, ಬಸ್ ಸಂಚಾರದ ಫಲಕಗಳು ಹಾಗೂ ಭದ್ರತೆಗಾಗಿ ಸಿ.ಸಿ ಟಿವಿ ಅಳವಡಿಸಲಾಗುವುದು ಎಂದು ಅವರು ವಿವರಿಸಿದರು.

      ನಗರದಲ್ಲಿ ಸಾರ್ವಜನಿಕರಿಗೆ ಪರಿಸರ ಸ್ನೇಹಿ ಮತ್ತು ಸುರಕ್ಷತೆ ಸಂಚಾರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 9.90 ಕೋಟಿ ರೂ. ವೆಚ್ಚದಲ್ಲಿ ಸಾರ್ವಜನಿಕ ಬೈಸಿಕಲ್ ಷೇರಿಂಗ್ ಸಿಸ್ಟಮ್ ಅಳವಡಿಸಲಾಗುವುದು. 20 ಡಾಕಿಂಗ್ ಸ್ಟೇಷನ್ಸ್‍ಗಳಿದ್ದು, 100 ವಿದ್ಯುತ್ ಚಾಲಿತ ಮತ್ತು 100 ಸಾಮಾನ್ಯ ಬೈಸಿಕಲ್ ವ್ಯವಸ್ಥೆ ಮಾಡಲಾಗುವುದು. ಈ ಕಾಮಗಾರಿಗೆ ಈಗಾಗಲೇ ಗುತ್ತಿಗೆ ನೀಡಲಾಗಿದ್ದು, ಮುಂದಿನ 15 ರಿಂದ 20 ದಿನಗಳಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂದರು.

       ಪರಿಸರ ಮಾಲಿನ್ಯವನ್ನು ತಗ್ಗಿಸುವ ಉದ್ದೇಶದಿಂದ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಆಧುನಿಕ ತಂತ್ರಜ್ಞಾನವುಳ್ಳ ಬ್ಯಾಟರಿ ಚಾಲಿತ 80 ಆಟೋಗಳನ್ನು ಸ್ಥಳೀಯರಿಗೆ (60:40) ಸಬ್ಸಿಡಿ ಆಧಾರದಲ್ಲಿ ನೀಡಲಾಗುವುದು. ಈಗಾಗಲೇ ನಾಲ್ವರು ಮುಂದೆ ಬಂದಿದ್ದು, ಕೆಲವೇ ದಿನಗಳಲ್ಲಿ ಆಟೋಗಳನ್ನು ವಿತರಿಸಲಾಗುವುದು. ಮಹಿಳೆಯರಿಗೆ ಶೇ.75 ರಷ್ಟು ಸಬ್ಸಿಯಡಿಯಲ್ಲಿ ನೀಡಲಿದ್ದೇವೆ ಎಂದರು.

       ದಾವಣಗೆರೆ ನಗರಕ್ಕೆ 24*7 ಕುಡಿಯುವ ನೀರು ಒದಗಿಸಲು ತುಂಗಾಭದ್ರ ನದಿಯ ರಾಜನಹಳ್ಳಿ ಜಾಕ್‍ವೆಲ್ ಬಳಿಯಲ್ಲಿ 550 ಮೀ ಉದ್ದದ ಹಾಗೂ 2.5 ಮೀ ಅಗಲದ 76.11 ಕೋಟಿ ರೂ. ವೆಚ್ಚದಲ್ಲಿ ಬಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲಾಗುವುದು. ಈ ಅಣೆಕಟ್ಟಿನಲ್ಲಿ 0.2 ಟಿಎಂಸಿ ನೀರು ಶೇಖರಣೆ ಮತ್ತು 50+5 ಸ್ವಯಂ ಚಾಲಿತ ಗೇಟ್ ನಿರ್ಮಾಣವಾಗಲಿದ್ದು, ಈ ಕಾಮಗಾರಿ ಒಂದರೆಡು ತಿಂಗಳಿನಲ್ಲಿ ಆರಂಭವಾಗಲಿದೆ ಎಂದು ಹೇಳಿದರು.

       ಎಂಟು ಸರ್ಕಾರಿ ಕಚೇರಿಗಳ ಮೇಲ್ಚಾವಣಿಯಲ್ಲಿ 2.21 ಕೋಟಿ ರೂ. ವೆಚ್ಚದಲ್ಲಿ ಸೋಲಾರ್ ಪ್ಯಾನಲ್ಸ್ ಅಳವಡಿಕೆ ಮಾಡಿ ಸೌರ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. ಇದರಿಂದ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಉಳಿತಾಯ ಮತ್ತು ಬೆಸ್ಕಾಂ ಇಲಾಖೆಗೆ ಪ್ರತಿ ಯೂನಿಟ್‍ಗೆ ಪಾವತಿಸುತ್ತಿದ್ದ ರೂ. 8.50 ಬದಲಿಗೆ ಪ್ರತಿ ಯೂನಿಟ್‍ಗೆ 5.90 ರೂ.ಗಳನ್ನು 25 ವರ್ಷಗಳವರೆಗೆ ಪಾವತಿಸಲು ನಿಗದಿಯಾಗಿದೆ. ಹೆಚ್ಚುವರಿಯಾಗಿರುವ ವಿದ್ಯುಚ್ಛಕ್ತಿಯನ್ನು ಬೆಸ್ಕಾಂ ಇಲಾಖೆಗೆ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.

         ನಗರದ 10 ಸರ್ಕಾರಿ ಕಚೇರಿಗಳ ಆವರಣಗಳಲ್ಲಿ 2.42 ಕೋಟಿ ವೆಚ್ಚದಲ್ಲಿ ಡಿಸ್‍ಪ್ಲೇ ಬೋರ್ಡ್‍ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಮಾಹಿತಿ, ಹವಾಮಾನ ವರದಿ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ಹಲವು ಮಾಹಿತಿಗಳನ್ನು ನೇರ ಪ್ರಸಾರ ಮತ್ತು 19 ಸರ್ಕಾರಿ ಶಾಲೆಗಳಲ್ಲಿ 2.57 ಕೋಟಿ ವೆಚ್ಚದಲ್ಲಿ ಗಣಕಯಂತ್ರದ ಲ್ಯಾಬ್‍ಗಳನ್ನು ಒದಗಿಸಿ ಡಿಜಿಟಲ್ ತರಗತಿಗಳನ್ನು ಸ್ಥಾಪಿಸಲಾಗುವುದು ಎಂದರು.

       ಸುದ್ದಿಗೋಷ್ಠಿಯಲ್ಲಿ ಸ್ಮಾರ್ಟ್ ಸಿಟಿ ಮುಖ್ಯ ಅಭಿಯಂತರ ಸತೀಶ್, ಮುಖ್ಯ ಹಣಕಾಸು ಅಧಿಕಾರಿ ಪ್ರಭಾವತಿ, ಟೀಮ್ ಲೀಡರ್ ಶ್ರೀನಾಥ್‍ರೆಡ್ಡಿ, ಜನರಲ್ ಮ್ಯಾನೇಜರ್ ಚಂದ್ರಶೇಖರ್, ಕಾರ್ಯಪಾಲಕ ಅಭಿಯಂತರ ಗುರಪಾದಯ್ಯ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link