ದಿಬ್ಬೂರು ವಸತಿ ಸಂಕೀರ್ಣ: 75 ಮನೆ ಅಕ್ರಮ ಮಾರಾಟ!

ತುಮಕೂರು
   ತುಮಕೂರು ನಗರದ ದಿಬ್ಬೂರಿನಲ್ಲಿ ನಿರ್ಮಿಸಲಾಗಿರುವ 1,200 ಆಶ್ರಯ ಮನೆಗಳ ಸಂಕೀರ್ಣದಲ್ಲಿ ಈವರೆಗೆ 75 ಮನೆಗಳು ಅಕ್ರಮವಾಗಿ ಮಾರಾಟ ಆಗಿರುವ ಆಘಾತಕಾರಿ ಸಂಗತಿ ಇದೀಗ ಬಹಿರಂಗಗೊಂಡಿದೆ.
 
    ಗುರುವಾರ ನಡೆದ ತುಮಕೂರು ಮಹಾನಗರ ಪಾಲಿಕೆಯ ಮುಂದುವರೆದ 5 ನೇ ದಿನದ ಸಾಮಾನ್ಯಸಭೆಯಲ್ಲಿ ಬಿಜೆಪಿಯ ಬಿ.ಜಿ.ವೀಣಾ  ಅವರ ಪ್ರಶ್ನೆಗೆ ಉತ್ತರಿಸುತ್ತ, ಸ್ವತಃ ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಲಿಯ ಅಧಿಕಾರಿಯೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
    ದಿಬ್ಬೂರು ವಸತಿ ಸಂಕೀರ್ಣದ ಬಗ್ಗೆ ಬಿ.ಜಿ.ವೀಣಾ ಪ್ರಶ್ನಿಸಿದರು. ಇದಕ್ಕೆ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಲಿಯ ಅಧಿಕಾರಿ ಶಂಕರ್ ಎಂಬುವವರು ಉತ್ತರಿಸುತ್ತ, 1200 ಮನೆಗಳನ್ನು ಪಾಲಿಕೆ ನೀಡಿದ ಪಟ್ಟಿ ಆಧರಿಸಿ ಜಿಲ್ಲಾಧಿಕಾರಿಗಳು ಫಲಾನುಭವಿಯನ್ನು ಆಯ್ಕೆ ಮಾಡಿದ್ದಾರೆ. ಅದರಂತೆ ಮನೆಗಳು ಹಂಚಿಕೆ ಆಗಿವೆ. ಸದರಿ ವಸತಿ ಸಂಕೀರ್ಣ ನಿರ್ಮಾಣ ಗೊಂಡ ಒಂದು ವರ್ಷ ಹಂಚಿಕೆ ಆಗದೆ ಖಾಲಿ ಉಳಿದ ಪರಿಣಾಮ, ಸದರಿ ಕಟ್ಟಡದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಿವೆ. ಕಿಟಕಿ, ಗಾಜು, ಬಾಗಿಲು ಇತ್ಯಾದಿ ಕಳುವಾಗಿವೆ.
    ಕೆಲವೆಡೆ ಒಡೆದುಹೋಗಿವೆ. ವಿದ್ಯುತ್ ಸಂಪರ್ಕದಲ್ಲೂ ಸಮಸ್ಯೆ ಆಗಿದೆ ಎಂದು ಸಮಜಾಯಿಷಿ ಕೊಟ್ಟರು.ಇದಕ್ಕೆ ವೀಣಾ ಮತ್ತು ಜೆಡಿಎಸ್‍ನ ಶ್ರೀನಿವಾಸಮೂರ್ತಿ ತೀವ್ರವಾಗಿ ಆಕ್ಷೇಪಿಸಿದರು. ನಾವು ನಿರ್ಮಿಸುವ ನಮ್ಮ ಮನೆಗಳು ಹತ್ತಿಪ್ಪತ್ತು ವರ್ಷಗಳು ಕಳೆದರೂ ಚೆನ್ನಾಗಿರುತ್ತವೆ. ಆದರೆ ಈ ವಸತಿ ಸಂಕೀರ್ಣ ಮಾತ್ರ ಕಟ್ಟಿದ 2 ವರ್ಷಗಳಲ್ಲೇ ಸಮಸ್ಯೆಗೆ ಸಿಲುಕಿತೆಂದರೆ ಏನರ್ಥ? ಎಂದು ಪ್ರಶ್ನಿಸಿದಾಗ ಸದರಿ ಅಧಿಕಾರಿ ನಿರುತ್ತರರಾದರು. 
   ಮತ್ತೆ ಮಾತು ಮುಂದುವರೆಸಿದ ಬಿ.ಜಿ.ವೀಣಾ, ಈ ವಸತಿ ಸಂಕೀರ್ಣದಲ್ಲಿ ಮೂಲಸೌಕರ್ಯವೇ ಸರಿಯಾಗಿಲ್ಲ. ಅದಿಲ್ಲದೆಯೇ ಮನೆಗಳ ಹಂಚಿಕೆ ಆಗಿದೆ. ಕುಡಿಯುವ ನೀರು ಸಮರ್ಪಕವಾಗಿಲ್ಲ. ಒಳಚರಂಡಿ ವ್ಯವಸ್ಥೆ ಅಸಮರ್ಪಕವಾಗಿದ್ದು, ದಿನವೂ ಅನೈರ್ಮಲ್ಯದ ಸಮಸ್ಯೆ ತಲೆಯೆತ್ತುತ್ತಿದೆ. ದಿನವೂ ಇಲ್ಲಿನ ನಿವಾಸಿಗಳು ಒಂದಲ್ಲ ಒಂದು ಸಮಸ್ಯೆಯಿಂದಾಗಿ ಜಗಳವಾಡುವಂತಾಗುತ್ತಿದೆ ಎಂದು ವಿವರಿಸಿದರು.
     ಯಾವುದೇ ಕಾರಣಕ್ಕೂ ಈ ವಸತಿ ಸಂಕೀರ್ಣದಲ್ಲಿ ಮೂಲ ಸೌಕರ್ಯಗಳು ಪೂರ್ಣಪ್ರಮಾಣದಲ್ಲಿ ಸಿದ್ಧವಾಗುವವರೆಗೂ, ವಸತಿ ಸಂಕೀರ್ಣವನ್ನು ಮಹಾನಗರ ಪಾಲಿಕೆಯು ತನ್ನ ಸುಪರ್ದಿಗೆ ಪಡೆದುಕೊಳ್ಳಬಾರದು ಎಂದು ಸಹ ಅವರು ಒತ್ತಾಯಿಸಿದರು. ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದ ಮಂಡಲಿಯ ಸದರಿ ಅಧಿಕಾರಿ, ಈ ವಸತಿ ಸಂಕೀರ್ಣದಲ್ಲಿ ಮನೆ ಹಂಚಿಕೆಯಾದ ಫಲಾನುಭವಿಗಳೇ ವಾಸವಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮತ್ತು ಪಾಲಿಕೆಯ ನಲ್ಮ್ ಸಿಬ್ಬಂದಿ ಸಮೀಕ್ಷೆ ಮಾಡುತ್ತಿದ್ದಾರೆ.
   ಆ ಸಮೀಕ್ಷೆಯು ಪ್ರಸ್ತುತ ಶೇ.50 ರಷ್ಟು ಪೂರ್ಣಗೊಂಡಿದೆ. ಇಷ್ಟರಲ್ಲೇ ಸುಮಾರು 75 ಫಲಾನುಭವಿಗಳು ತಮ್ಮ ಮನೆಗಳನ್ನು ಅಕ್ರಮವಾಗಿ ಮಾರಿಕೊಂಡಿದ್ದಾರೆಂಬ ಸಂಗತಿ ಬೆಳಕಿಗೆ ಬಂದಿದೆ. ಸಮೀಕ್ಷೆಯು ಪೂರ್ಣಗೊಂಡ ಬಳಿಕ ಈ ಬಗೆಗಿನ ಸ್ಪಷ್ಟ ಚಿತ್ರ ಸಿಗಲಿದೆ ಎಂದು ಸಮಜಾಯಿಷಿ ಕೊಟ್ಟರು.
    ಮಧ್ಯ ಪ್ರವೇಶಿಸಿದ ಬಿ.ಜಿ. ವೀಣಾ, ತೀರಾ ಇತ್ತೀಚೆಗೂ ಇಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಈ ವಾರ್ಡ್‍ನ ಸದಸ್ಯೆಯಾಗಿರುವ ತಮ್ಮ ಗಮನಕ್ಕೇ ಈ ವಿಷಯ ಬಂದಿಲ್ಲ ಎಂದು ಆಕ್ಷೇಪಿಸಿದರು. ಪಾಲಿಕೆಯ ಪ್ರಭಾರ ಆಯುಕ್ತ ಯೋಗಾನಂದ್ ಉತ್ತರ ನೀಡುತ್ತ, ಮನೆ ಹಂಚಿಕೆ ಆಗುವಾಗ ಅದನ್ನು ಸಂಬಂಧಿಸಿದ ಸದಸ್ಯರ ಗಮನಕ್ಕೆ ತರಬೇಕು. ಮೂಲಸೌಕರ್ಯ ಇಲ್ಲದೆ ಅದನ್ನು ಪಾಲಿಕೆಗೆ ಹಸ್ತಾಂತರ ಮಾಡಿಕೊಳ್ಳುವಂತಿಲ್ಲ ಎಂದಾಗ ಸದಸ್ಯರು ಒಪ್ಪಿಗೆ ಸೂಚಿಸಿದ್ದು, ಅದರಂತೆಯೇ ನಿರ್ಣಯಿಸಲಾಯಿತು. 
    ಕಸಾಯಿ ಖಾನೆ ಅಗತ್ಯಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂಗ್ರೆಸ್‍ನ ಸೈಯದ್ ನಯಾಜ್ ಮಾತನಾಡಿ ತುಮಕೂರು ನಗರದ ಲೇಬರ್ ಕಾಲೋನಿ ಬಳಿ ಇರುವ ಜಾಗದಲ್ಲಿ ಒಂದು ಕಸಾಯಿ ಖಾನೆ ನಿರ್ಮಿಸಬೇಕು. ಇದರಿಂದ ಮಾಂಸಾಹಾರಿಗಳಿಗೆ ಅನುಕೂಲವಾಗುತ್ತದೆ ಎಂಬ ಬೇಡಿಕೆಯನ್ನು ಮುಂದಿಟ್ಟರು. ನಗರದಲ್ಲಿರುವ ಎಲ್ಲ ಮಾಂಸದ ಅಂಗಡಿಗಳನ್ನೂ ಒಂದೇ ಕಡೆ ಇರುವಂತೆ ಮಾಡಬೇಕೆಂದೂ ಹೇಳಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ಈಗಿನ ನಿಯಮಾವಳಿ ಪ್ರಕಾರ ಇದನ್ನು ಊರಿನ ಒಳಗೆ ನಿರ್ಮಿಸಲು ಅವಕಾಶವಿಲ್ಲ. ಜೊತೆಗೆ ಇದರ ತ್ಯಾಜ್ಯ ನಿರ್ವಹಣೆಯೇ ಬೇರೆ ರೀತಿಯಾಗಿರುವು ದರಿಂದ ಇದನ್ನು ಬೇರೆ ಕಡೆಯೇ ಸ್ಥಾಪಿಸಬೇಕಾಗುತ್ತದೆ. ಪ್ರಸ್ತುತ ಕೋರಾ ಬಳಿ ಇದಕ್ಕಾಗಿ ಜಿಲ್ಲಾಧಿಕಾರಿಗಳು ಸ್ಥಳಾವಕಾಶ ನಿಗದಿಪಡಿಸಿದ್ದು, ಅಲ್ಲಿ ಅತ್ಯಾಧುನಿಕ ಕಸಾಯಿ ಖಾನೆ ನಿರ್ಮಿಸಲು ವರದಿ ಸಲ್ಲಿಸುವಂತೆ ಹೈದರಾಬಾದ್‍ನ ಸರ್ಕಾರಿ ಸ್ವಾಮ್ಯದ ಕೇಂದ್ರಕ್ಕೆ ಪಾಲಿಕೆ ವತಿಯಿಂದ ಮನವಿಯನ್ನು ಈಗಾಗಲೇ ಸಲ್ಲಿಸಲಾಗಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap