ಚಿಕ್ಕನಾಯಕನ ಹಳ್ಳಿಯಲ್ಲಿ 77.08% ಮತದಾನ

ಚಿಕ್ಕನಾಯಕನಹಳ್ಳಿ

       ಕ್ಷೇತ್ರದಲ್ಲಿ ಮತದಾನವು ಮುಂಜಾನೆ 7ರಿಂದ ಸಂಜೆ 6ರವರೆಗೆ ಸುಗಮವಾಗಿ ನಡೆಯಿತು, ಸಂಜೆ 6ರ ವೇಳೆಗೆ ತಿಳಿದು ಬಂದ ಮಾಹಿತಿ ಪ್ರಕಾರ ಶೇ.77.08% ರಷ್ಟು ಮತದಾನ ತಾಲ್ಲೂಕಿನಲ್ಲಿ ನಡೆದಿದೆ.

      ವಿಧಾನಸಭಾ ಕ್ಷೇತ್ರದಲ್ಲಿ 1,63,968 ಮತದಾರರು ಮತ ಚಲಾಯಿಸಿದ್ದು 83,909 ಪುರುಷ ಮತದಾರರು ಹಾಗೂ 80,059 ಮಹಿಳಾ ಮತದಾರರು ಮತಚಲಾಯಿಸಿದ್ದಾರೆ.

       ಮತದಾನದ ಕೊನೆ ವೇಳೆಯಲ್ಲಿ ತಾಲ್ಲೂಕಿನ ಬಗ್ಗನಹಳ್ಳಿಯಲ್ಲಿ ಇವಿಯಂ ಮತಯಂತ್ರ ತೊಂದರೆಯಾಗಿ ಕೆಲಕಾಲ ಮತದಾರರಲ್ಲಿ ಹಾಗೂ ಚುನಾವಣಾ ಸಿಬ್ಬಂದಿಗಳಲ್ಲಿ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮತದಾನಕ್ಕೆ ತಡವಾಗಿ ಆಗಮಿಸಿದ 50ಕ್ಕೂ ಹೆಚ್ಚು ಮತದಾರರನ್ನು ಚುನಾವಣಾ ಸಿಬ್ಬಂದಿ ವಾಪಸ್ ಕಳುಹಿಸಿದರು.

      ಮತ ಚಲಾವಣೆಯು ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಯಿತು. 7 ಗಂಟೆಗೆ ಮಂದಗತಿಯಿಂದ ನಡೆದ ಮತದಾನ 10 ಗಂಟೆಯ ನಂತರ ಬಿರುಸು ಪಡೆಯಿತು. 12 ಗಂಟೆಯ ನಂತರ ಬಿಸಿಲಿನ ಜಳಕ್ಕೆ ಮತದಾರರು ಬೂತ್‍ಗಳಿಗೆ ತೆರಳಲು ಹಿಂದೇಟು ಹಾಕಿದರು. ಮಧ್ಯಾಹ್ನ 3 ಗಂಟೆಯ ನಂತರ ಮತದಾನ ಬಿರುಸುಗೊಂಡಿತ್ತು.

     ಮತ ಚಲಾಯಿಸಿದ ಗಣ್ಯರು : ಶಾಸಕ ಜೆ.ಸಿ.ಮಾಧುಸ್ವಾಮಿ ತಮ್ಮ ಕುಟುಂಬ ಸಮೇತ ಜೆ.ಸಿ.ಪುರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು ಪಟ್ಟಣದ ಕಾಳಮ್ಮನಗುಡಿ ಶಾಲೆಯ ಮತಗಟ್ಟೆಗೆ ದಂಪತಿ ಸಮೇತ ತೆರಳಿ ಮತ ಚಲಾಯಿಸಿದರು. ಕುಪ್ಪೂರಿನ ಮತಗಟ್ಟೆಯಲ್ಲಿ ಕುಪ್ಪೂರು ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮೀಜಿ, ತಮ್ಮಡಿಹಳ್ಳಿಯ ಡಾ.ಅಭಿನವಮಲ್ಲಿಕಾರ್ಜುನದೇಶೀಕೇಂದ್ರಸ್ವಾಮಿಜಿ ತಾಲ್ಲೂಕಿನ ಅಬುಜಿಹಳ್ಳಿ ಶಾಲಾ ಮತಗಟ್ಟೆಯಲ್ಲಿ, ಗೋಡೆಕೆರೆಯ

       ಸಿದ್ದರಾಮ ದೇಶೀ ಕೇಂದ್ರ ಸ್ವಾಮೀಜಿ ಹಾಗೂ ಮೃತ್ಯುಂಜಯ ದೇಶೀ ಕೇಂದ್ರ ಸ್ವಾಮೀಜಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತಚಲಾಯಿಸಿದರು.

ಸ್ವಯಂಸೇವಕರು :

    ಕಾಲೇಜು ವಿದ್ಯಾರ್ಥಿಗಳು ಪಟ್ಟಣದಲ್ಲಿ ಸ್ವಯಂಪ್ರೇರಿತವಾಗಿ ಹಿರಿಯ ವೃದ್ದರಿಗೆ ಮತಚಲಾಯಿಸಲು ಮಾರ್ಗದರ್ಶನ ಹಾಗೂ ಮತಚಲಾವಣೆಯ ನಂತರ ಅವರವರ ಮನೆಗಳಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಿದ್ದರು.

ಮತಚಲಾಯಿಸಿದ ಯುವ ಮತದಾರರು, ವಿದ್ಯಾವಂತರು :

     ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಯುವ ಮತದಾರರು ತಮ್ಮ ಮೊದಲಸಲ ಮತ ಚಲಾವಣೆ ಮಾಡಿ ಸಂತಸ ಪಟ್ಟರು. ದೂರದೂರುಗಳಿಗೆ ವಲಸೆ ಹೋಗಿರುವ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರುವುದು ಕಂಡುಬಂದಿತು.
ಮತದಾನ ನಡೆಯುವ ವೇಳೆ ಪಟ್ಟಣದ ವಿವಿದೆಡೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಜೆ.ಡಿ.ಎಸ್.ಅಭ್ಯರ್ಥಿ ಹೆಚ್.ಡಿ.ದೇವೇಗೌಡ ಆಗಮಿಸಿ ಮತದಾನದ ಪ್ರಕ್ರಿಯೆ ಬಗ್ಗೆ ಕಾರ್ಯಕರ್ತರಲ್ಲಿ ಚರ್ಚಿಸಿದರು. ಈ ವೇಳೆ ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು, ಕಾಂಗ್ರೆಸ್ ಮುಖಂಡ ಸಂತೋಷ್‍ಜಯಚಂದ್ರ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ