ಹೆತ್ತ ತಂದೆ-ತಾಯಿ ಸೇರಿ 8 ಜನರ ಬಂಧನ

ದಾವಣಗೆರೆ:

    ಹೆಣ್ಣು ಮಗುವನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಮಹಿಳಾ ಠಾಣೆ ಪೊಲೀಸರು ಮಗುವಿನ ತಂದೆ-ತಾಯಿ ಸೇರಿದಂತೆ ಎಂಟು ಜನರನ್ನು ಬಂಧಿಸಿ, ಮಾರಾಟವಾಗಿದ್ದ 13 ತಿಂಗಳ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

   ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಗು ಮಾರಾಟ ಮಾಡಿದ ತಾಯಿ ಕವಿತಾ, ತಂದೆ ಮಂಜುನಾಥ್, ಮಗು ಖರೀದಿಸಿದ್ದ ರಾಣೆಬೆನ್ನೂರು ನಿವಾಸಿ ದ್ರಾಕ್ಷಾಯಿಣಿ, ಈಕೆಯ ಪತಿ ಸಿದ್ದು ಹಾಗೂ ಮಧ್ಯವರ್ತಿಗಳಾದ ರವಿ ಅಲಿಯಾಸ್ ರವೀಂದ್ರ, ಕರಿಬಸಪ್ಪ, ಚಿತ್ರಮ್ಮ(ಎಸ್.ಎಸ್.ಆಸ್ಪತ್ರೆ ಆಯಾ), ಕಮಲಮ್ಮ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಘಟನೆಯ ವಿವರ:

   ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಕೆ.ಸಿ.ಬಸವರಾಜಯ್ಯ ಅವರಿಗೆ ಡಾನ್ ಬಾಸ್ಕೋ ಬಾಲಕಾರ್ಮಿಕ ಮಿಷನ್‍ನ ಮಕ್ಕಳ ಸಹಾಯವಾಣಿಗೆ 2019ರ ಡಿಸೆಂಬರ್ 26ರಂದು ವ್ಯಕ್ತಿಯೊಬ್ಬರು ಅನಾಮಧೇಯ ಕರೆ ಮಾಡಿ ದಾವಣಗೆರೆಯ ಅಂಬೇಡ್ಕರ್ ನಗರದ ನಿವಾಸಿ ಕವಿತಾ ಮಂಜುನಾಥ್ ದಂಪತಿ ತಮ್ಮ 4ನೇ ಹೆಣ್ಣು ಮಗುವಾದ 13 ತಿಂಗಳಿನ ಸಾನ್ವಿ ಎಂಬ ಮಗುವನ್ನು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಕರೆಯನ್ನು ಆಧರಿಸಿ ಮಕ್ಕಳ ಸಹಾಯವಾಣಿಯ ಪ್ರಶಾಂತ್ ವಿ ಬೆಳ್ಳುಳ್ಳಿ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಮಗು ಮಾರಾಟ ಆಗಿರುವುದರು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಪತ್ತೆ ಹಚ್ಚಲು ಜ.8ರಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಪತ್ರ ನೀಡಿದ್ದರು.

   ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತರಾದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಕವಿತಾ ಚಂದ್ರಶೇಖರ್ ದಂಪತಿ ಮನೆಗೆ ಹಾಗೂ ಸಂಬಂಧಪಟ್ಟ ಅಂಗನವಾಡಿಗೆ ಭೇಟಿ ನೀಡಿ ದಾಖಲೆ ಸಂಗ್ರಹಿಸಲು ಮಕ್ಕಳ ರಕ್ಷಣಾಧಿಕಾರಿ(ಅಸಾಂಸ್ಥಿಕ) ಚಂದ್ರಶೇಖರ್ ಕೆ.ಎನ್ ಹಾಗೂ ಆಪ್ತ ಸಮಾಲೋಚಕ ಕಿರಣಕುಮಾರ್ ವೈ ಅವರನ್ನು ಕಳುಹಿಸಿದ್ದರು. ಇವರು ಭೇಟಿ ನೀಡಿದ ಸಂದರ್ಭದಲ್ಲಿ ಮಾರಾಟವಾಗಿದ್ದ ಮಗುವಿನ ತಂದೆ ಮಂಜುನಾಥ್ ಸಿಕ್ಕಿ, ತಮಗೆ ನಾಲ್ಕು ಜನ ಹೆಣ್ಣು ಮಕ್ಕಳಾಗಿದ್ದರು.

  ಈ ಪೈಕಿ ಕಿರಿಯ ಮಗಳು ಸಾನ್ವಿ ಎಂಬುವಳನ್ನು 2019ರ ಜೂನ್ 9 ರಂದು ರಾಣೆಬೆನ್ನೂರಿನ ದ್ರಾಕ್ಷಾಯಣಮ್ಮ ಸಿದ್ದು ದಂಪತಿಗೆ, ರಾಣೇಬೆನ್ನೂರಿನ ರವಿ, ಕರಿಬಸಪ್ಪ ಮತ್ತು ದಾವಣಗೆರೆಯ ಎಸ್.ಎಸ್.ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡುತ್ತಿರುವ ಚಿತ್ರಮ್ಮ, ಕಮಲಮ್ಮ ಅವರುಗಳ ಸಮಕ್ಷಮದಲ್ಲಿ 25 ಸಾವಿರ ರೂ.ಗೆ ಮಾರಾಟ ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣ ಘಟಕದ ಅಧಿಕಾರಿ ಕೆ.ಸಿ. ಬಸವರಾಜಯ್ಯ ಮಹಿಳಾ ಠಾಣೆಯಲ್ಲಿ ನೆನ್ನೆ ದೂರು ದಾಖಲಿಸಿದ್ದರು ಎಂದು ಅವರು ವಿವರಿಸಿದರು.

   ಈ ಆರೋಪಿಗಳ ಪತ್ತೆಗೆ ಮಹಿಳಾ ಠಾಣೆಯ ಸಿಪಿಐ ನಾಗಮ್ಮ, ಪಿಎಸ್‍ಐ ಮಾಳವ್ವ ಹಾಗೂ ಸಿಬ್ಬಂದಿಗಳಾದ ಪರಶುರಾಮ, ಪ್ರಸನ್ನಕುಮಾರ್, ರೇಣುಕಮ್ಮ, ಜಂಷಿದಾ ಖಾನಂ, ಕವಿತಾ, ಶಿವಲಿಂಗಮ್ಮ ಬಾಗೇವಾಡಿ, ಛಾಯಾ, ಕವಿತಾ ಟಿ.ಎಸ್. ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡವು ಮಗು ಮಾರಾಟ ಜಾಲದಲ್ಲಿ ಭಾಗಿಯಾಗಿದ್ದ ಎಲ್ಲಾ 8 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಈ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‍ಪಿ ರಾಜೀವ್ ಎಂ, ಸಿಪಿಐ ನಾಗಮ್ಮ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap