ಮಿಡಿಗೇಶಿ
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಗೆ ಸೇರಿದ ನಾಗಲಾಪುರ ಗ್ರಾಮದ ಗೋಮಾಳದಲ್ಲಿ ಅರಣ್ಯ ಇಲಾಖೆವತಿಯಿಂದ ನೀಲಗಿರಿ ಮರಗಳನ್ನು ಬೆಳೆಸಲಾಗಿದೆ. ಈ ನೀಲಗಿರಿ ಮರಗಳನ್ನು ಇದೇ ಗ್ರಾಮದ ಕೆಲವು ಕಿಡಿಗೇಡಿಗಳು ಕಡಿದು ನಾಶಪಡಿಸಿದ್ದರು. ಅಲ್ಲದೆ ಸದರಿ ಗೋಮಾಳವನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಶೇಂಗಾ, ಹೆಸರು ಇತ್ಯಾದಿ ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದರು. ಸಾವಿರಾರು ಲೋಡುಗಳಷ್ಟು ಮಣ್ಣನ್ನು ಹೊರಗಡೆ ಕೊಂಡೊಯ್ಯುತ್ತಿದ್ದರು.
ಅಲ್ಲಿಯೆ ಕಣಗಳು, ಕೃಷಿ ಹೊಂಡಗಳನ್ನು ನಿರ್ಮಿಸಿ, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸರ್ಕಾರದ ಲಕ್ಷಾಂತರ ರೂಪಾಯಿಯನ್ನು ಕೆಲವೇ ಕೆಲ ಗುತ್ತಿಗೆದಾರರು ತಿಂದು ತೇಗಿದ್ದಾರೆ. ಇವರಿಗೆ ಬೆಂಬಲವಾಗಿ ಕೃಷಿ ಇಲಾಖೆ, ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿಂತಿದ್ದಾರೆ. ಗೋಮಾಳದ ಭೂಮಿಯೆಂದು ತಿಳಿದಿದ್ದರೂ ಸಹ ರೈತರ ಕಣಗಳ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಮಾಡಿಸುವಲ್ಲಿ, ಸರ್ಕಾರಿ ಹಣ ಪಾವತಿಸುವಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ ಎಂದು ಪ್ರಜ್ಞಾವಂತ ನಾಗರಿಕರು ನೇರವಾಗಿ ಆರೋಪಿಸುತ್ತಿದ್ದಾರೆ. ಸದರಿ ಭೂಮಿಯ ಒತ್ತುವರಿ ಬಗ್ಗೆ ಪ್ರಜಾಪ್ರಗತಿಯಲ್ಲಿ ಹಲವಾರು ಬಾರಿ ಸುದ್ದಿಯು ಪ್ರಕಟವಾಗಿದೆ.
ಅ.21 ರಂದು `ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಗ್ರಾಮಸ್ಥರ ಒತ್ತಾಯ’ ಸುದ್ದಿ, ನ.3 ರಂದು `ಗೋಮಾಳ ಒತ್ತುವರಿ ಒಂದು ವರ್ಷ ಜೈಲು’ ಎಂಬ ಶೀರ್ಷಿಕೆಯಡಿಯಲ್ಲಿ ಹೊರಬಂದ ಸುದ್ದಿಗೆ ನಾಗಲಾಪುರ ಗ್ರಾಮದ ಜನತೆ ಎಚ್ಚೆತ್ತುಕೊಂಡು, ತಾಲ್ಲೂಕಿನ ದಂಡಾಧಿಕಾರಿ ನಂದೀಶ್, ಕಂದಾಯಾಧಿಕಾರಿ ವೇಣುಗೋಪಾಲ್, ಗ್ರಾಮ ಲೆಕ್ಕಿಗರಾದ ಕೆಂಪಯ್ಯರವರನ್ನು ಸ್ಥಳಕ್ಕೆ ಕರೆಯಿಸಿದ್ದರು. ಆಗ ಅಕ್ರಮ ಒತ್ತುವರಿ ಮಾಡಿಕೊಂಡಿರುವರ ಎಂಟು ಜನರ ಮೇಲೆ ತಹಸೀಲ್ದಾರ್ ನ. 1 ರಂದು ಮಿಡಿಗೇಶಿ ಪೋಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದರು.
ದೂರು ದಾಖಲಿಸಲ್ಪಟ್ಟವರ ವಿವರ :
1) ತಿಪ್ಪಣ್ಣ ಬಿನ್ ಬಜ್ಜಪ್ಪ 2) ಹನುಮಂತೆಗೌಡ ಬಿನ್ ದೊಡ್ಡಹನುಮಂತರಾಯಪ್ಪ 3) ಹನುಮಂತರಾಯಪ್ಪ ಬಿನ್ ಕಾಮಣ್ಣ 4) ನರಸಿಂಹಮೂರ್ತಿ ಬಿನ್ ನರಸಿಂಹಯ್ಯ 5) ಹೆಂಜಪ್ಪ ಬಿನ್ ಜೋಗಪ್ಪ 6) ಲಕ್ಷ್ಮಯ್ಯ ಬಿನ್ ಗೋವಿಂದಪ್ಪ 7) ವೆಂಕಟರಮಣಪ್ಪ ಬಿನ್ ರಾಮಯ್ಯ 8)ರಾಮರೆಡ್ಡಿ ಬಿನ್ ರಂಗಯ್ಯ. ಈ ಎಲ್ಲರೂ ನಾಗಲಾಪುರ ಗ್ರಾಮದ ವಾಸಿಗಳಾಗಿರುತ್ತಾರೆ.
ಮೇಲ್ಕಂಡವರು ಸರ್ವೆ ನಂ. 46, 47, 48 ಮತ್ತು 49 ರಲ್ಲಿ ಸರ್ಕಾರಿ ಗೋಮಾಳದ ಜಮೀನು ಉಳುಮೆ ಮಾಡಿ ಅತಿ ಕ್ರಮಿಸಿರುವರೆಂದು ಹಾಗೂ ಕ್ರಮ ಸಂಖ್ಯೆ 01 ರಲ್ಲಿ ಕಂಡ ತಿಪ್ಪಣ್ಣ ಬಿನ್ ಬಜ್ಜಪ್ಪ ಎಂಬುವರು ಅತಿ ಕ್ರಮಿಸಿರುವ ಪ್ರದೇಶದಲ್ಲಿ ಶೇಂಗಾ ಬೆಳೆ ಇಟ್ಟಿದ್ದು, ಸದರಿ ಬೆಳೆ ಕಟಾವಿನ ಹಂತದಲ್ಲಿರುವುದರಿಂದ ಬೆಳೆಯನ್ನು ನಿಯಮಾವಳಿಯನ್ವಯ ಸರ್ಕಾರದಿಂದ ವಿಲೇವಾರಿ ಮಾಡುವವರೆಗೆ ರಕ್ಷಿಸಲು ಮತ್ತು ಮೇಲ್ಕಂಡ ಒತ್ತುವರಿದಾರರ ವಿರುದ್ದ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 192 ಎ ನಂತೆ ಕ್ರಿಮಿನಲ್ ಮೊಕದ್ದಮೆಯನ್ನು ಮಿಡಿಗೇಶಿ ಪೋಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ