ಅವಹೇಳನಕಾರಿ ಪೋಸ್ಟರ್‌ ಪ್ರದರ್ಶನ : 8 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು :ಭಾಸ್ಕರ್ ರಾವ್

ಬೆಂಗಳೂರು

    ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಹಿಂದೂ ಧಾರ್ಮಿಕ ಭಾವನೆ ಕೆರಳಿಸುವ ಅವಹೇಳನಕಾರಿ ಪೋಸ್ಟರ್‌ಗಳನ್ನು ಪ್ರದರ್ಶಿಸಿದ್ದ 8 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ಅವರು ತಿಳಿಸಿದ್ದಾರೆ

    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಕಲಾಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ವಿದ್ಯಾರ್ಥಿ ಒಂದು ಗುಂಪು ಹಿಂದುತ್ವ ಧಾರ್ಮಿಕ ಭಾವನೆಗಳನ್ನು ಅವಾಚ್ಯ ಪೋಸ್ಟರ್ ಪ್ರದರ್ಶಿಸುವ ಮೂಲಕ ಅವಹೇಳನಕಾರಿಯಾಗಿ ಬಿಂಬಿಸಿತ್ತು. ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

   ಈ ಸಂಬಂಧ ತನಿಖೆ ನಡೆಸಿ ಚರ್ಮದ ಅವಹೇಳನೆ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಹಿನ್ನೆಲೆ ಅಂದಾಜು 8 ವಿದ್ಯಾರ್ಥಿಗಳ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಾಗಿದೆ.ಪ್ರತಿಭಟನೆ ನಂತರ ಕಾಲೇಜು ಆವರಣ ಬಿಟ್ಟು ತೆರಳದೆ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲರಾದ ನೀಲಮತಿ ಪ್ರತ್ಯೇಕ ದೂರು ನೀಡಿದ್ದಾರೆ. ಅಕ್ರಮ ಕೂಟ ರಚಿಸಿ, ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ್ದಾರೆ ಎಂದು ವಿವರಿಸಿದ್ದಾರೆ.

   ಕ್ರೈಸ್ತ ಕಾಲೇಜು, ಸೆಂಟ್ರಲ್ ಕಾಲೇಜು, ಸೇರಿದಂತೆ ವಿವಿಧ ಕಾಲೇಜುಗಳ 25 ರಿಂದ 30 ವಿದ್ಯಾರ್ಥಿಗಳು ಸರ್ಕಾರಿ ಕಲಾಕಾಲೇಜು ಆವರಣದಲ್ಲಿ ಜಮಾವಣೆಯಾಗಿದ್ದರು. ಈ ವೇಳೆ ನಿಷೇಧಾಜ್ಞೆ ಜಾರಿಯಲ್ಲಿತ್ತು. ಗುಂಪುಗೂಡದಂತೆ ಹಾಗೂ ಕಾಲೇಜು ಆವರಣಬಿಟ್ಟು ತೆರಳುವಂತೆ ಸೂಚಿಸಿದರು.ಉಲ್ಲಂಘಿಸಿದ ವಿದ್ಯಾರ್ಥಿಗಳು ಆವರಣದಲ್ಲಿಯೇ ಮುಂದುವರಿದಿದ್ದರು.

   ಹೀಗಾಗಿ ಸರೋವರ್, ಗೌತಮ್ ರಾಜ್, ಅಮೃತ, ಮಲ್ಲಿಕಾರ್ಜುನ್, ಅಮೂಲ್ಯ, ಆಂಡ್ರಿಯಾ, ರಾಜಗೋಪಾಲ್, ಮತ್ತಿತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ವಿದ್ಯಾರ್ಥಿಗಳ ವಿರುದ್ಧ ಐಪಿಸಿ ಸೆಕ್ಷನ್-188 (ಸಾರ್ವಜನಿಕ ಅಧಿಕಾರಿಗಳ ಆದೇಶ ಉಲ್ಲಂಘನೆ 153ಎ (ಧರ್ಮ, ಜನಾಂಗ, ಭಾಷೆ ಮುಂತಾದವುಗಳ ಆಧಾರದಲ್ಲಿ ಎರಡು ಗುಂಪುಗಳ ನಡುವಿನ ವೈರತ್ವ ಸೃಷ್ಟಿ), 295ಎ ಉದ್ದೇಶ ಪೂರ್ವಕ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಂತರ ಕ್ರಮ ಕೈಗೊಳ್ಳಲಾಗುವುದು ಈ ಸಂಬಂಧ ಯಾರನ್ನು ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ