ಕೊರೊನಾ ನಿಯಂತ್ರಣಕ್ಕೆ 84 ಕೋಟಿ ರೂ. ಬಿಡುಗಡೆ : ಆರ್ ಅಶೋಕ್

ಬೆಂಗಳೂರು

   ಕೊರೊನಾ ವೈರಸ್ ನಿಯಂತ್ರಣ ಕ್ರಮಗಳಿಗೆ ಕಂದಾಯ ಇಲಾಖೆ ಮೊದಲ ಹಂತದಲ್ಲಿ 84 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವರಾದ ಆಶೋಕ್ ಹೇಳಿದ್ದಾರೆ.

   ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಕೇಂದ್ರ ಸರ್ಕಾರ ಜನಸಂಖ್ಯೆ ಆಧರಿಸಿ ರಾಜ್ಯ ಸರ್ಕಾರಕ್ಕೆ ಎಸ್‍ಜಿಆರೆಫ್ ಅಡಿ ಈ ವರ್ಷ 334 ಕೋಟಿ ರೂ. ಬಿಡುಗಡೆ ಮಾಡಿದೆ. ಅದರಲ್ಲಿ ಶೇ.25ರಷ್ಟನ್ನು ಅಂದರೆ 84 ಕೋಟಿ ರೂ.ಗಳನ್ನು ಕೊರೊನಾ ನಿಯಂತ್ರಣಕ್ಕೆ ಹಾಗೂ ಈ ಮೊತ್ತದಲ್ಲಿ ಶೇ.10ರಷ್ಟನ್ನು ವೈದ್ಯಕೀಯ ಸಲಕರಣೆ ಖರೀದಿಗೆ ಸೂಚಿಸಲಾಗಿದೆ.

   ವೈದ್ಯಕೀಯ, ಪೊಲೀಸ್ ಹಾಗೂ ಅಗ್ನಿಶಾಮಕ ದಳಕ್ಕೆ ಹಣ ವ್ಯಯಿಸಲಾಗುತ್ತಿದ್ದು, ತುರ್ತಾಗಿ ಎಲ್ಲ ಜಿಲ್ಲಾಧಿಕಾರಿಗಳಿಗೆ ತಾವು ಪತ್ರ ಬರೆದು ಅಗತ್ಯತೆಗೆ ಅನುಸಾರ ಅನುದಾನ ಬಳಕೆಗೆ ತಿಳಿಸುವುದಾಗಿ ಹೇಳಿದರು. ಸ್ಥಳೀಯ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದ್ದು, ಈ ಕುರಿತಂತೆ ಕೂಡಲೇ ಮುಖ್ಯಮಂತ್ರಿ, ಆರೋಗ್ಯ ಸಚಿವರ ಜತೆ ಸಭೆ ನಡೆಸಿ ಅನುದಾನವನ್ನು ಯಾವ ರೀತಿ ಖರ್ಚು ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.

   ಸದ್ಯಕ್ಕೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಹಣಕಾಸಿನ ತೊಂದರೆ ಇಲ್ಲ. ಕೇಂದ್ರ ನೀಡಿರುವ ಅನುದಾನದಲ್ಲಿ ಶೇ.25ರಷ್ಟು ಹಣದ ಬಳಕೆಗೆ ಅವಕಾಶ ನೀಡಿದೆ. ಇನ್ನು ಮುಂದಿನ 30 ದಿನಗಳ ನಂತರ ಮತ್ತೊಂದು ಆದೇಶ ಬರುವ ನಿರೀಕ್ಷೆ ಇದೆ. ಆಗ ಇನ್ನಷ್ಟು ಅನುದಾನ ಬಳಕೆಗೆ ಸಲಹೆ ನೀಡುವ ಸಾಧ್ಯತೆ ಇದೆ ಎಂದರು.

   ಬಂಧನಕ್ಕೆ ಆದೇಶ: ಕೊರೊನಾ ಸಂದರ್ಭದಲ್ಲಿ ತುರ್ತು ಅಗತ್ಯಗಳಿಗೆ ಬಳಸುವ ಸ್ಯಾನಿಟೈಸರ್, ಮಾಸ್ಕ್ ಹಾಗೂ ಕ್ರಿಮಿನಾಶಕ ದ್ರಾವಣಗಳ ಕೃತಕ ಅಭಾವ ಸೃಷ್ಟಿಸಿ ದುಬಾರಿ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಸಚಿವ ಆರ್.ಅಶೊಕ್ ತಿಳಿಸಿದರು.

   ತಾವು ಇತ್ತೀಚೆಗೆ ಯುಗಾದಿ ಹಬ್ಬಕ್ಕೆಂದು ಬಟ್ಟೆ ಖರೀದಿಗೆ ಹೋಗಿದ್ದಾಗ ಅಂಗಡಿಯಲ್ಲಿ ಸ್ಯಾನಿಟೈಸರ್ ಇಡಲಾಗಿದ್ದು, ಅದರ ಬೆಲೆ 400ರೂ. ಎಂದು ಅಂಗಡಿ ಮಾಲೀಕ ತಮ್ಮ ಅಳಲು ತೋಡಿಕೊಂಡಿದ್ದರು. ಈ ರೀತಿ ದುಬಾರಿ ದರ ನಿಗದಿ ಮಾಡಿ ವಂಚಿಸುವ ಬಗ್ಗೆ ಪರಿಶೀಲಿಸಿ ಸಂದರ್ಭಾನುಸಾರ ದಾಳಿ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಹೇಳಿದರು.

   ವಿಧಾನಸಭೆ ಅಧಿವೇಶನ ಮುಂದೂಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸರ್ಕಾರವೇ ಅಧಿವೇಶನ ಮುಂದೂಡಿದೆ. ಜನ ಮತ್ತಷ್ಟು ಆತಂಕಕ್ಕೆ ಒಳಗಾಗುತ್ತಾರೆ. ಆದರೂ ಸ್ಪೀಕರ್ ಕಾಗೇರಿ ಜತೆ ಚರ್ಚಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap