ಕೊರಟಗೆರೆ
ಕೊರೋನಾ ರೋಗ ಹರಡುವಿಕೆ ಭಯದ ನಡುವೆಯು ಎಸ್‍ಎಸ್‍ಎಲ್‍ಸಿಯ ಮೊದಲ ದಿನದ ಪರೀಕ್ಷೆಯನ್ನು ಕೊರಟಗೆರೆ ತಾಲ್ಲೂಕಿನ 2226 ವಿದ್ಯಾರ್ಥಿಗಳು ಬರೆದಿದ್ದಾರೆ. ಇದರಲ್ಲಿ 62 ವಿದ್ಯಾರ್ಥಿಗಳು ಮತ್ತೊಂದು ಪರೀಕ್ಷಾ ಕೇಂದ್ರದಿಂದ ವರ್ಗಾವಣೆ ಆದವರು. ಅಲ್ಲದೆ 88 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರುಹಾಜರಾಗಿದ್ದು, ಕಾರಣವೇ ಇಲ್ಲದಾಗಿದೆ.
ಕೊರಟಗೆರೆ ತಾಲೂಕಿನಲ್ಲಿ ಒಟ್ಟು 12 ಪರೀಕ್ಷಾ ಕೇಂದ್ರಗಳಿವೆ. ಪಟ್ಟಣದ ಪದವಿಪೂರ್ವ ಕಾಲೇಜು, ಕಾಳಿದಾಸ ಪ್ರೌಢಶಾಲೆ, ಬಾಲಕಿಯರ ಪ್ರೌಢಶಾಲೆ ಕೋಳಾಲ, ತೀತಾ, ಐ.ಕೆ.ಕಾಲನಿ, ಗೊಡ್ರಹಳ್ಳಿ, ಹೊಳವನಹಳ್ಳಿ, ಅಕ್ಕಿರಾಂಪುರ, ಬುಕ್ಕಾಪಟ್ಟಣ, ಮುಗ್ಗೊಂಡನಹಳ್ಳಿ ಮತ್ತು ತೋವಿನಕೆರೆ ಪ್ರೌಢಶಾಲೆಯಲ್ಲಿ 1076 ವಿದ್ಯಾರ್ಥಿಗಳು ದ್ವಿತೀಯ ಭಾಷೆಯ ಇಂಗ್ಲೀಷ್ ಪರೀಕ್ಷೆ ಬರೆದಿದ್ದಾರೆ.
12 ಪರೀಕ್ಷಾ ಕೇಂದ್ರಗಳಿಗೂ ಪ್ರತಿನಿತ್ಯ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಸುಗಮ ಸಂಚಾರಕ್ಕಾಗಿ 4 ಹೋಬಳಿಗಳಿಗೆ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಇದೆ. ಖಾಸಗಿ ಶಾಲೆಗಳ ಸಹಭಾಗಿತ್ವದಿಂದ ಶಿಕ್ಷಣಾ ಇಲಾಖೆಯು 12 ಮಾರ್ಗದಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳನ್ನು ಕರೆ ತರುವ ವ್ಯವಸ್ಥೆ ಮಾಡಿದ್ದಾರೆ.
ಕೊರಟಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ್ ಮಾತನಾಡಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ 3 ದಿನದ ಮುಂಚೆಯೇ ಪರೀಕ್ಷೆ ನಡೆಯುವ ಸ್ಥಳ ಮತ್ತು ಕೊಠಡಿಯ ಮಾಹಿತಿ ನೀಡಲಾಗಿದೆ. ಸಾಮಾಜಿಕ ಅಂತರ, ಸ್ಯಾನಿಟೈಸರ್ ಮತ್ತು ಮಾಸ್ಕ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಪರೀಕ್ಷೆಗೆ ಮುಂಚೆಯೇ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದೇವೆ. ಆರೋಗ್ಯ ಸಿಬ್ಬಂದಿ ಜೊತೆ ಸ್ಕೌಟ್ ಆ್ಯಂಡ್ ಗೈಡ್ಸ್ ವಿಭಾಗದಿಂದ ಸಾಮಾಜಿಕ ಅಂತರದ ನಿಯಮ ಪಾಲನೆಗೆ ಆದ್ಯತೆ ನೀಡಲಾಗಿದೆ. ದೇಹದ ಉಷ್ಣಾಂಶ ಹೆಚ್ಚಾಗಿರುವ ವಿದ್ಯಾರ್ಥಿಗಳ ಪರೀಕ್ಷೆಗಾಗಿ ಕೇಂದ್ರಕ್ಕೆ ಎರಡರಂತೆ ವಿಶೇಷ ಕೊಠಡಿಯನ್ನು ಮೀಸಲು ಇಡಲಾಗಿದೆ ಎಂದು ಮಾಹಿತಿ ನೀಡಿದರು.
ಸೋಂಕು ಭಯದ ವಾತಾವರಣದ ನಡುವೆಯು ಆತಂಕವಿಲ್ಲದೆ ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳು ದ್ವಿತೀಯ ಭಾಷೆಯ ಪರೀಕ್ಷೆ ಬರೆದಿದ್ದಾರೆ. ಕೊರಟಗೆರೆ ತಾಲ್ಲೂಕಿನ ಪರೀಕ್ಷಾ ಕೇಂದ್ರಗಳಿಗೆ ಮಧುಗಿರಿ ಡಿವೈಎಸ್ಪಿ ಪ್ರವೀಣ್, ತಹಸೀಲ್ದಾರ್ ಗೋವಿಂದರಾಜು, ಬಿಇಓ ಗಂಗಾಧರ್, ಸಿಪಿಐ ನದಾಫ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.