ಕುಡಿಯುವ ನೀರು ಒದಗಿಸಲು ಕಂಟ್ರೋಲ್ ರೂಂ ತೆರೆಯಲು ಮುಖ್ಯ ಕಾರ್ಯದರ್ಶಿ ಆದೇಶ..!!!

ಬೆಂಗಳೂರು

       ರಾಜ್ಯ ಎದುರಿಸುತ್ತಿರುವ ಬರಗಾಲದ ಪರಿಸ್ಥಿತಿಯನ್ನು ಸಮರೋಪಾದಿಯಲ್ಲಿ ಎದುರಿಸಬೇಕು ಮತ್ತು ಕುಡಿಯುವ ನೀರು ಒದಗಿಸಲು ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಕಂಟ್ರೋಲ್‍ರೂಂಗಳನ್ನು ಎಲ್ಲ ಜಿಲ್ಲೆಗಳಲ್ಲಿ ಪ್ರಾರಂಭಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶಿಸಿದ್ದಾರೆ.

      ವಿಧಾನಸೌಧದ ಸಮಿತಿ ಕೊಠಡಿಯಲ್ಲಿಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಸುಧೀರ್ಘ ಮಾತುಕತೆ ನಡೆಸಿದ ಅವರು ಈ ಆದೇಶ ನೀಡಿದ್ದಾರೆ.

       ರಾಜ್ಯದಲ್ಲಿ ಆವರಿಸಿರುವ ಬರಗಾಲದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಡಿಯುವ ನೀರು,ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು.ಒಂದು ವೇಳೆ ಯಾವುದೇ ಪ್ರದೇಶದಲ್ಲಿ ಕುಡಿಯುವ ನೀರಿನ ಕೊರತೆಯಾಗುತ್ತಿದೆ ಎಂಬುದು ಸರ್ಕಾರದ ಗಮನಕ್ಕೆ ಬಂದರೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು,ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೇ ಹೊಣೆಗಾರರಾಗಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

       ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಗಣನೀಯ ಪ್ರಮಾಣದ ನೀರಿದ್ದು ಮೈಸೂರಿನ ಕೆ.ಆರ್.ಎಸ್.ಜಲಾಶಯವೂ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿರುವ ನೀರಿನ ಸಂಗ್ರಹದಿಂದ ಜೂನ್ ಅಂತ್ಯದವರೆಗೂ ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂದು ಅವರು ವಿವರ ನೀಡಿದರು.

      ಆದರೆ ಪ್ರಮುಖ ಜಲಾಶಯಗಳಿಲ್ಲದ,ಜಲಾಶಯಗಳಿದ್ದರೂ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಬೋರ್‍ವೆಲ್‍ಗಳನ್ನು ಅವಲಂಬಿಸುವುದು ಅನಿವಾರ್ಯವಾಗುತ್ತದೆ.ಹೀಗಾಗಿ ಅಗತ್ಯವಿರುವೆಡೆ ಬೋರ್‍ವೆಲ್‍ಗಳನ್ನು ದುರಸ್ಥಿ ಮಾಡಿಸಿ,ಹೂಳು ತುಂಬಿದ್ದರೆ ತ್ವರಿತವಾಗಿ ಅದನ್ನು ತೆಗೆಸಿ.

        ಹಾಗೆಯೇ ಸರ್ಕಾರಿ ಬೋರ್‍ವೆಲ್‍ಗಳಿದ್ದರೂ ಸಮರ್ಪಕ ಪ್ರಮಾಣದಲ್ಲಿ ಕುಡಿಯುವ ನೀರು ಪೂರೈಕೆ ಮಾಡಲು ಅನುಕೂಲವಾಗುವಂತೆ ಖಾಸಗಿ ಬೋರ್‍ವೆಲ್‍ಗಳನ್ನು ಖರೀದಿ ಮಾಡಿ,ಸಮಸ್ಯೆ ನಿವಾರಣೆಯಾಗುವಂತೆ ನೋಡಿಕೊಳ್ಳಿ ಎಂದು ಅವರು ಆದೇಶಿಸಿದರು.

        ಪರಿಸ್ಥಿತಿ ತೀರಾ ಹದಗೆಟ್ಟ ಕಡೆ ಯಾವ ಮೂಲೆಯಿಂದಲಾದರೂ ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಿ,ಬೋರ್‍ವೆಲ್ ನೀರು ಸಿಗದಿದ್ದರೆ,ಮೇಲ್ಮೈ ಜಲಮೂಲಗಳಿಂದ ನೀರು ಪಡೆದು ಒದಗಿಸಿ.ಹಾಗೆಯೇ ಜಾನುವಾರುಗಳಿಗೆ ಅಗತ್ಯವಾಗುವಂತೆ ಎಲ್ಲೆಲ್ಲ ಅಗತ್ಯವಾಗುವಂತೆ ಗೋಶಾಲೆ ನಿರ್ಮಿಸಿ.ಯಾವ ರೈತರ ಬಳಿ ಹೆಚ್ಚುವರಿ ಮೇವು ಇದೆಯೋ?ಅದನ್ನು ಅವರಿಂದ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳಿ.

       ಹಾಗೆಯೇ ಕುಡಿಯುವ ನೀರು ಒದಗಿಸುವ ವಿಷಯದಲ್ಲಿ ಗೋಶಾಲೆಗಳಿಗೆ ಅಂಟಿಕೊಂಡಂತೆ ಬಂಡುಗಳನ್ನು ನಿರ್ಮಿಸಿ ಅಲ್ಲಿ ಕುಡಿಯುವ ನೀರು ಸದಾ ಕಾಲ ಜಾನುವಾರುಗಳಿಗೆ ಸಿಗುವಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.ರಾಜ್ಯದಲ್ಲಿ ಬೇಸಿಗೆ ಝಳ ಹೆಚ್ಚಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ನೋಡಿಕೊಳ್ಳಬೇಕು.ಹೀಗಾಗಿ ನಿಮ್ಮ ನಿಮ್ಮ ಜಿಲ್ಲಾ ವ್ಯಾಪ್ತಿಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಿ.ಹಾಗೆಯೇ ಜನಸಾಮಾನ್ಯರಿಗೆ ತುರ್ತು ಚಿಕಿತ್ಸೆ ಲಭ್ಯವಾಗುವಂತೆ ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲ, ಖಾಸಗಿ ಆಸ್ಪತ್ರೆಗಳೂ ನೋಡಿಕೊಳ್ಳಬೇಕು.ಈ ಎಲ್ಲ ಜವಾಬ್ದಾರಿ ನಿಮ್ಮದು ಎಂದು ವಿವರಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap