ನೊಂದ ಮಹಿಳೆಗೆ ಸಿಗದ ಗುಣಮಟ್ಟದ ಸ್ಪಂದನೆ

ದಾವಣಗೆರೆ:

   ನೊಂದ ಮಹಿಳೆಯರು ಮತ್ತು ಮಕ್ಕಳಿಗೆ ಇಲಾಖೆಯಲ್ಲಿ ಗುಣಮಟ್ಟದ ಸ್ಪಂದನೆ ದೊರೆಯುತ್ತಿಲ್ಲ. ಹೀಗಾಗಿ ನಮಗೆ ವೈಕ್ತಿಕವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯಶೈಲಿ ತೃಪ್ತಿಕರವಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಬೇಸರ ವ್ಯಕ್ತಪಡಿಸಿದರು.

  ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವುಗಳ ಸಹಯೋಗದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗಾಗಿ “ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಹೊಸ ಜೆ.ಜೆ(ಮಕ್ಕಳ ನ್ಯಾಯ) ಕಾಯ್ದೆ”ಯ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಮಹಿಳೆಯರು ಮತ್ತು ಮಕ್ಕಳು ನೊಂದು ಪೊಲೀಸ್ ಠಾಣೆಗಳಿಗೆ ಬಂದಾಗ ಅವರ ಜತೆಯಲ್ಲಿ ಹೇಗೆ ವರ್ತಿಸಬೇಕು. ಹೇಗೆ ಸ್ಪಂದಿಸಬೇಕೆಂಬುದಾಗಿ ಹಲವು ಬಾರಿ ತರಬೇತಿ ನೀಡಲಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಹೀಗಾಗಿ ಅವರಿಗೆ ಎಷ್ಟೇ ತರಬೇತಿ ನೀಡಿದರೂ ಕಲ್ಲು ಬಂಡೆಯ ಮೇಲೆ ನೀರು ಹೋಯ್ದಂತೆ ಆಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

   ಇನ್ನೂ ಮೇಲಾದರೂ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುವ ಮೂಲಕ ಸರ್ಕಾರ ಹಾಗೂ ಕಾನೂನುಗಳು ತಮ್ಮ ಪರವಾಗಿವೆ ಎಂಬ ವಿಶ್ವಾಸ ಮೂಡಿಸಿ, ಸುರಕ್ಷತಾ ಭಾವನೆ ಮೂಡಿಸಬೇಕು ಎಂದು ತಾಕೀತು ಮಾಡಿದರು.

   ನೀವು ಎಫ್‍ಐಆರ್ ಹಾಕಿದ ತಕ್ಷಣವೇ ನೊಂದ ಮಹಿಳೆಯರ ಸಮಸ್ಯೆ ಬಗೆಹರಿಯುವುದಿಲ್ಲ. ಪ್ರಕರಣ ಇತ್ಯರ್ಥವಾಗುವ ವರೆಗೂ ಮನೆಯಲ್ಲಿ ಕಿರುಕುಳ ಅನುಭವಿಸುತ್ತಲೇ ಇರುತ್ತಾರೆ. ಹೀಗಾಗಿ ಕಾನೂನುಗಳಾದರೂ ನಮ್ಮ ಪರವಾಗಿವೆ ಎಂಬ ಸುಕ್ಷತಾ ಭಾವ ಅವರಲ್ಲಿ ಮೂಡಿಸುವಂತಾಗಬೇಕು ಎಂದರು.

   ನೋಂದ ಮಹಿಳೆಯರೇ ಹೆಚ್ಚಾಗಿ ಭೇಟಿ ನೀಡುವ ಮಹಿಳಾ ಠಾಣೆ ಇರುವ ಕಾಂಪೌಂಡ್‍ನಲ್ಲಿ ಡಿವೈಎಸ್‍ಪಿ, ಸಿಪಿಐ, ಬಡಾವಣೆ ಪೊಲೀಸ್ ಠಾಣೆ ಇರುವುದರಿಂದ ಇಲ್ಲಿ ದಿನಕ್ಕೆ 200ರಿಂದ 300 ಜನ ಭೇಟಿ ನೀಡುತ್ತಾರೆ ಹೀಗಾಗಿ ಅಲ್ಲಿ ಪುರುಷರ ಮತ್ತು ಮಹಿಳೆಯರ ಪ್ರತ್ಯೇಕ ಶೌಚಾಲಯ ನಿರ್ಮಿಸಬೇಕಾಗಿದೆ. ಅಲ್ಲದೆ, ನೊಂದ ಮಹಿಳೆಯರು ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಗಳಿಗಾಗಿ ಪ್ರತ್ಯೇಕ ಎರಡು ವಿಶ್ರಾಂತಿ ಕೊಠಡಿ ನಿರ್ಮಿಸಲು ಚಿಂತನೆ ನಡೆಸಿದೆ ಎಂದರು.

    ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಬಾಲ್ಯ ವಿವಾಹಗಳನ್ನು ಎಷ್ಟೇ ತಡೆದರೂ, ಎಷ್ಟೇ ಜಾಗೃತಿ ಮೂಡಿಸಿದರೂ ಮತ್ತೂ ಅಲ್ಲೊಂದು, ಇಲ್ಲೊಂದು ಬಾಲ್ಯವಿವಾಹ ನಡೆಯುತ್ತಲೆ ಇವೆ. ಇದನ್ನು ತಡೆಯುವುದು ಬರೀ ಅಧಿಕಾರಿಗಳ ಜವಾಬ್ದಾರಿ ಮಾತ್ರವಿಲ್ಲ. ಸಾರ್ವಜನಿಕರ ಸಹಕಾರವೂ ಮುಖ್ಯವಾಗಿದೆ. ಹೀಗಾಗಿ ಬಾಲ್ಯ ವಿವಾಹಗಳು ಎಲ್ಲೇ ನಡೆಯುತ್ತಿದ್ದರೂ ಸಾರ್ವಜನಿಕರು ಆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆಯಬೇಕೆಂದು ಕಿವಿಮಾತು ಹೇಳಿದರು.

   ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಅತಿಹೆಚ್ಚು ದೌರ್ಜನ್ಯ ನಡೆಯುತ್ತಿವೆ. ಅದರಲ್ಲೂ ನಮ್ಮ ಜಿಲ್ಲೆಯಲ್ಲಿಯೇ ಮಗು ಮಾರಾಟ ಪ್ರಕರಣ ನಡೆದಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಹೀಗಾಗಿ ಮಕ್ಕಳ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಠಿಣ ಶಿಕ್ಷೆ ನೀಡಿದರೆ, ಮಕ್ಕಳ ಮಾರಾಟ ಪ್ರಕರಣ ತಡೆಯಬಹುದು. ಇದಾಗಬೇಕಾದರೆ, ನೀವು (ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು) ಸರಿಯಾಗಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಬೇಕೆಂದು ಸಲಹೆ ನೀಡಿದರು.ಕೆಲವರು ಬಡತನಕ್ಕಾಗಿ ಮಕ್ಕಳು ಮಾರುತ್ತೇವೆ ಎನ್ನುತ್ತಾರೆ.

   ಆದರೆ, ಬಡತನ ಶಾಪವಲ್ಲ, ಅದು ಜೀವನದ ಪಾಠ ಕಲಿಸುವ ವರ ಎಂಬುದಾಗಿ ಅರಿತು ಮೇಲೆ ಬರಲು ಪ್ರಯತ್ನಿಸಬೇಕು ಎಂದ ಅವರು, ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಎಲ್ಲರೂ ಸಾಮೂಹಿಕವಾಗಿ ಪ್ರಯತ್ನಿಸಬೇಕೆಂದು ಕರೆ ನೀಡಿದರು.

    ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಾವೇರಿ ಪೊಲೀಸ್ ಇಲಾಖೆಯ ಮಲ್ಲಪ್ಪ ಜಲಗಾರ್, 2015ರ ನವೀಕೃತ ಹೊಸÀ ಜೆ.ಜೆ ಕಾಯ್ದೆ ಬಗ್ಗೆ ವಿಷಯ ಮಂಡನೆ ಮಾಡಿ ಬಾಲ್ಯ ವಿವಾಹ, ಬಾಲ ಅಪರಾಧಗಳು, ಬಾಲ ನ್ಯಾಯ ವ್ಯವಸ್ಥೆಗಳು, ಪೋಷಣೆ ಮತ್ತು ರಕ್ಷಣೆ ಬೇಕಾದ ಮಕ್ಕಳು, ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿ ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕ ಕಲಂ-107, ಮಕ್ಕಳ ನ್ಯಾಯ ಮಂಡಳಿ, ಮಕ್ಕಳ ಪ್ರಕರಣ ನಿರ್ವಹಣೆಯಲ್ಲಿ ಗಮನಿಸಬೇಕಾದ ದಾಖಲೆಗಳು ಸೇರಿದಂತೆ ಇತರೆ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

    ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್ ಕೆ.ಎಚ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ವೈ.ರಾಮಾ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಸವರಾಜಯ್ಯ ಸ್ವಾಗತಿಸಿದರು. ಶೃತಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link