ಶಾಸನ ಸಭೆಯ ಗೌರವ ಹೆಚ್ಚಿಸುವಂತಹ ಅಭ್ಯರ್ಥಿ ಆಯ್ಕೆ ಅಗತ್ಯ :ಬಿ.ಎಲ್.ಶಂಕರ್

ಶಿರಾ:

    ಶಾಸನಸಭೆಗೆ ಅದರದೇ ಆದ ಮಹತ್ವವಿದೆ. ರಾಜ್ಯದ ಪ್ರಭಲ ಸಮಸ್ಯೆಗಳ ಬಗ್ಗೆ ಶಾಸನಸಭೆಯಲ್ಲಿ ಸರ್ಕಾರದ ಕಣ್ತೆರೆಸುವಂತಹ ಮತ್ತು ಸಭೆಯ ಗೌರವವನ್ನು ಹೆಚ್ಚಿಸುವಂತಹ ಅಭ್ಯರ್ಥಿ ಶಾಸಕರಾಗಿ ಆಯ್ಕೆಗೊಳ್ಳಬೇಕಿದ್ದು ಅದಕ್ಕೆ ಶಿರಾ ಉಪ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಸೂಕ್ತ ವ್ಯಕ್ತಿ ಎಂದು ಮಾಜಿ ಸಭಾಪತಿ ಹಾಗೂ ಕಾಂಗ್ರೆಸ್ ಪಕ್ಷದ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಬಿ.ಎಲ್.ಶಂಕರ್ ಹೇಳಿದರು.

    ನಗರದ ಕೆ.ಪಿ.ಸಿ.ಸಿ. ಮಾದ್ಯಮ, ಸಂವಹನ ಕಛೇರಿಯಲ್ಲಿ ಶನಿವಾರ ಪತ್ರಕರ್ತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ದೇಶದಲ್ಲಿ ಗುಣಮಟ್ಟದ ನಾಯಕತ್ವದ ಅಗತ್ಯವಿದೆ. ಇತ್ತೀಚೆಗೆ ಭಾವನಾತ್ಮಕ ರಾಜಕಾರಣ ಮುಂಚೂಣಿಗೆ ಬಂದಿದೆ. ಯಾವುದೇ ಸರ್ಕಾರಗಳಿಂದಾಗಲಿ ಬದುಕು ಕಟ್ಟುವ ಕೆಲಸ ಸುದೀರ್ಘವಾಗಿ ನಡೆಯಬೇಕು. ಸಮಾನತೆ, ಸಾಮಾಜಿಕ ನ್ಯಾಯ ಲಭ್ಯವಾಗಬೇಕಿದ್ದು ಶೋಷಣೆಯ ವಿರುದ್ಧ ಬದುಕು ಕಟ್ಟುವ ಕೆಲಸವಾಗಬೇಕು ಎಂದರು.

   ದೇಶದಲ್ಲಿ ಭಾವನಾತ್ಮಕವಾಗಿ ನಡೆದ ರಾಜಕಾರಣಗಳೇ ಹೆಚ್ಚಾಗಿದ್ದು ಇತ್ತೀಚೆಗೆ ಭಾವನಾತ್ಮಕ ರಾಜಕಾರಣದೊಟ್ಟಿಗೆ ಹಣದ ಅಮಿಷವೂ ಸೇರಿಕೊಂಡು ರಾಜಕಾರಣದ ದಿಕ್ಕೇ ಬದಲಾಗಿದೆ. ಏಳು ದಶಕಗಳ ಸುದೀರ್ಗ ಇತಿಹಾಸದಲ್ಲಿ ಮದ್ಯಮ ಪಕ್ಷ, ಎಡಪಂಕ್ತಿ, ಬಲಪಂಕ್ತೀಯ ಪಕ್ಷಗಳು ದೇಶದ ಆಡಳಿತ ನಡೆಸಿವೆ. ಈ ಎಲ್ಲದರ ಏಳುಬೀಳುಗಳ ನಡುವೆಯೂ ಕಾಂಗ್ರೆಸ್ ಪಕ್ಷ ಸಣ್ಣ, ಅತಿಸಣ್ಣ ಸಮುದಾಯಗಳೊಟ್ಟಿಗೆ ಜಾತಿಗಳ ಹಿನ್ನೆಲೆಯನ್ನು ಮರೆತು ದೇಶದ ಅಭಿವೃದ್ಧಿಗೆ ಕಟಿಬದ್ಧವಾಗಿದೆ ಎಂದರು.

   ಇತ್ತೀಚೆಗೆ ಚುನಾವಣೆಗಳು ಕೂಡಾ ಅರ್ಥ ಕಳೆದುಕೊಳ್ಳುತ್ತಿವೆ. ಪಕ್ಷಾಂತರ ಕಾಯಿದೆ ಇದ್ದರೂ ಇಲ್ಲದಂತಾಗಿದ್ದು ಪಕ್ಷಾಂತರದಿಂದಲೇ ರಾಜಕೀಯ ಏರುಪೇರುಗಳಿಗೆ ಪ್ರಭಲ ಕಾರಣವೂ ಆಗಿದೆ. ಪಕ್ಷಾಂತರವೆಂಬುದು ಅಪಾಯಕಾರಿ ಬೆಳವಣಿಗೆ ಎಂದು ಬಿ.ಎಲ್.ಶಂಕರ್ ಹೇಳಿದರು.

   ದೇಶದಲ್ಲಿ 1980ರ ನಂತರ ಹಾಗೂ 2020ರೊಳಗೆ ಜನತಾ ಪರಿವಾರವನ್ನು ಬಿಟ್ಟು ಹೋದವರೇ ಹೆಚ್ಚು. ಚರಂಣ್‍ಸಿಂಗ್, ಚಂದ್ರಶೇಖರ್, ಮುಲಾಯಾಮ್‍ಸಿಂಗ್ ಯಾದವ್, ರಾಮ ವಿಲಾಸ್ ಪಾಸ್ವಾನ್, ಬೀಜು ಪಾಟ್ನಾಯಕ್ ಹೀಗೆ ಹಲವು ಮಂದಿ ಜನತಾ ಪರಿವಾರದಿಂದ ಹೊರಗುಳಿದು ಪರಿವಾರ ಚೂರಾಯಿತು. ನಮ್ಮ ರಾಜ್ಯದಲ್ಲಿಯೂ ಜನತಾ ಪರಿವಾರ ಈ ಸ್ಥಿಗೆ ಬರಲು ಹಲವು ಮಂದಿಯ ಸ್ವ-ಪ್ರತಿಷ್ಟೆಯೂ ಕಾರಣವಾಯಿತು. 1977 ರ ಜನತಾ ಪರಿವಾರ ಬಿಟ್ಟು ಹೋದವರು ಅವರಿಗವರೇ ಪ್ರಶ್ನೆ ಹಾಕಿಕೊಳ್ಳಬೇಕಿದೆ ಎಂದು ಬಿ.ಎಲ್.ಶಂಕರ್ ಹಳೆಯ ರಾಜಕೀಯ ಮಜಲುಗಳನ್ನು ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಹಂಚಿಕೊಂಡರು.
ಮಾಜಿ ಶಾಸಕ ಷಡಕ್ಷರಿ, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಮೆಹಬೂಬ್‍ಖಾನ್, ನಗರ ಕಾಂಗೈ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾ. ಅಧ್ಯಕ್ಷ ನಟರಾಜ್ ಬರಗೂರು, ಹಲಗುಂಡೇಗೌಡ, ನಿಕೇತ್‍ಗೌಡ, ರಘು ದೊಡ್ಡೇರಿ, ಮಧುಸೂದನ್ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link