ದಾವಣಗೆರೆ:
ಜ್ಞಾನದ ಮೂಲಕ ಗಳಿಸಿದ ಚಿನ್ನದ ಪದಕಕ್ಕೆ 10 ಕೆಜಿ ಬಂಗಾರಕ್ಕಿಂತಲೂ ಹೆಚ್ಚು ಬೆಲೆ (ಖರೇ, ಖರೇ ವಜನ್) ಇದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರತಿಪಾದಿಸಿದರು.ನಗರದ ದೇವರಾಜ ಅರಸು ಬಡಾವಣೆಯ ಲಯನ್ಸ್ ಕ್ಲಬ್ನಲ್ಲಿ ಗುರುವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಸ್ವಚ್ಛ ಭಾರತ ಮಿಷನ್ ಹಾಗೂ ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ 27ನೆ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾನು ವಿದ್ಯಾರ್ಥಿಯಾಗಿದ್ದಾಗ ಎರಡು ಚಿನ್ನದ ಪದಕ ಪಡೆದಿದ್ದ. ಆಗ ಕೆಲವರು ಅವನ್ನು ಹಿಡಿದು ಇವು ನಾಲ್ಕಾಣೆ ತೂಕವೂ ಇಲ್ಲ. ಅಲ್ಲದೇ, ಇವುಗಳನ್ನು ಒರೆ ಹಚ್ಚಿ ನೋಡಿದರೆ ಚಿನ್ನವೇ ಇರುವುದಿಲ್ಲ ಎಂಬುದಾಗಿ ಆಡಿಕೊಂಡಿದ್ದರು. ಆದರೆ, ಜ್ಞಾನದ ಮೂಲಕ ಗಳಿಸಿದ ಚಿನ್ನದ ಪದಕ 10 ಕೆಜಿ ಬಂಗಾರಕ್ಕಿಂತಲೂ ಹೆಚ್ಚು ಬೆಲೆ ಹೊಂದಿರುತ್ತದೆ ಎಂದರು.
ವಿದ್ಯಾರ್ಥಿಗಳಲ್ಲಿ ಯಾವುದೇ ಕಾರಣಕ್ಕೂ ಜ್ಞಾನದ ದಾಹ ತೀರಬಾರದು. ಜ್ಞಾನದ ಬೆನ್ನು ಹತ್ತುವ ಉತ್ಸಾಹ, ಹುಮ್ಮಸು ಸದಾ ಇರಬೇಕು. ಸತತ ಪರಿಶ್ರಮದ ಮೂಲಕ ಜ್ಞಾನವನ್ನು ಸಂಪಾದಿಸಿದರೆ ಹತ್ತು ಐಎಎಸ್, ನಾಲ್ಕು ಐಪಿಎಸ್ ಪರೀಕ್ಷೆಗಳನ್ನು ಪಾಸ್ ಮಾಡಬಹುದು ಎಂದು ನುಡಿದರು.
ಗಳಿಸಿದ ಜ್ಞಾನ, ಸಂಪತ್ತು ಹಾಗೂ ಅನುಭವವನ್ನು ಸಮಾಜಕ್ಕಾಗಿ ಬಳಸದೆ ಹೋದರೆ, ಬಳಕೆ ಮಾಡದೇ ಇಟ್ಟಿರುವ ಲೋಹಕ್ಕೆ ತುಕ್ಕು ಹಿಡಿದಂತೆ, ಹಾಳಾಗಿ ಹೋಗಲಿವೆ. ಆದ್ದರಿಂದ ಗಳಿಸಿದ ಜ್ಞಾನ, ಸಂಪತ್ತು ಹಾಗೂ ಅನುಭವವನ್ನು ಸಮಾಜದ ಒಳತಿಗಾಗಿ ಬಳಕೆ ಮಾಡಬೇಕೆಂದು ಕಿವಿಮಾತು ಹೇಳಿದರು.
ವಿಜ್ಞಾನ ಮಾನವೀಯ ಮೌಲ್ಯಗಳೊಂದಿಗೆ ಇರಬೇಕು. ನೀವು ವಿಜ್ಞಾನದಲ್ಲಿ ಪಡೆದ ಜ್ಞಾನವನ್ನು ಸಮಾಜಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಆವಿಷ್ಕಾರಕ್ಕೆ ಬಳಸಿಕೊಳ್ಳಬೇಕು ಎಂದ ಅವರು, ಇಲ್ಲಿ ಭಾಗವಹಿಸಿರುವ ಮಕ್ಕಳು ರಾಷ್ಟ್ರ ಮಟ್ಟಕ್ಕೆ ಹೋಗಿ, ಬಹುಮಾನ ಪಡೆದು ದಾವಣಗೆರೆ ಜಿಲ್ಲೆಯ ಹೆಸರು ಮತ್ತಷ್ಟು ಹೊಳೆಯುವಂತೆ ಮಾಡಬೇಕೆಂದು ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಬಿ.ಇ.ರಂಗಸ್ವಾಮಿ ಮಾತನಾಡಿ, ಈ ವರ್ಷ ‘ಸ್ವಚ್ಛ ಹಸಿರು-ಸುಂದರ ರಾಷ್ಟ್ರಕ್ಕಾಗಿ ವಿಜ್ಞಾನ ಆವಿಷ್ಕಾರ’ ಎಂಬ ಉದ್ಘೋಷ ನೀಡಿರುವುದು ಯುವ ವಿಜ್ಞಾನಿಗಳು ಸ್ವಚ್ಛತೆ ಹಾಗೂ ಪರಿಸರಕ್ಕಾಗಿ ಅನ್ವೇಷಣೆ, ಸಂಶೋಧನೆ ನಡೆಸಲಿ ಎಂಬ ಕಾರಣಕ್ಕಾಗಿ. ವಿಕಲಚೆತನರಿಗೆ, ಹಿರಿಯ ನಾಗರೀಕರಿಗೆ ಯಾವ ರೀತಿಯಲ್ಲಿ ಸಹಕಾರ ಮಾಡಬಹುದೆಂಬ ಆಲೋಚನೆಯನ್ನು ಇಟ್ಟುಕೊಂಡು ಈಗಾಗಲೇ 50 ಜನ ಯುವ ವಿಜ್ಞಾನಿಗಳು ಅನ್ವೇಷಣೆ ನಡೆಸಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಜ್ಞಾನದ ಮಟ್ಟವು ಹೆಚ್ಚುತ್ತಿದೆ. ಆದರೆ, ಆ ಜ್ಞಾನ ಸಮಾಜಕ್ಕೆ ಉಪಯೋಗವಾಗುವ ಆನ್ವೇಷಣೆಗೆ ಬಳಕೆಯಾಗಬೇಕು. ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿರುಚಿ ಬೆಳೆಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇನ್ಸ್ಪೈರ್ ಅವಾರ್ಡ್ ಸಹ ನೀಡುತ್ತಿದ್ದು, ಬರುವ ವರ್ಷ ಈ ಅವಾರ್ಡ್ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ವಿಜ್ಞಾನ ವಿಷಯ ಪರಿವೀಕ್ಷಕಿ ಆರ್.ಬಿ.ವಸಂತಕುಮಾರಿ ಮಾತನಾಡಿ, ಇಂದು ಮನುಷ್ಯ ಭೋಗದ ಹಾಗೂ ವೈಭವದ ಬದುಕಿಗಾಗಿ ಪರಿಸರವನ್ನು ವಿನಾಶಕ್ಕೆ ತೆಗೆದುಕೊಂಡು ಹೋಗುತ್ತಿದ್ದಾನೆ. ಹೀಗಾಗಿ ಪರಿಸರಕ್ಕೆ ಪೂರಕವಾಗು ನಿಟ್ಟಿನಲ್ಲಿ ಆವಿಷ್ಕಾರ ನಡೆಸಬೇಕಾದ ಅವಶ್ಯಕತೆ ಇದೆ. ಹೀಗಾಗಿ ವಿಜ್ಞಾನಿಗಳು ಮೂಲ ವಿಜ್ಞಾನವನ್ನು ಕಲಿತು ಹೊಸ ಸಂಶೋಧನೆ, ಆವಿಷ್ಕಾರ ನಡೆಸಿ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ವೈ.ಬಿ.ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಯುವ ವಿಜ್ಞಾನಿ ಪ್ರಶಸ್ತಿ ವಿಜೇತೆ ಎಚ್.ಎಂ.ಜ್ಯೋತ್ಸ್ನಾ, ಎಂ.ಎನ್. ಮುಷ್ಟೂರಪ್ಪ, ಜಿ.ನಾಗನೂರು, ಎ.ಎಸ್.ಮೃತ್ಯುಂಜಯ, ಬೆಳ್ಳೂಡಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಪರಿಷತ್ ಜಿಲ್ಲಾ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
