ಸ್ಮಾರ್ಟ್ ಸಿಟಿ :32 ಲಕ್ಷ ರೂ. ವೆಚ್ಚದಲ್ಲಿ `ತೂಗು ಕಸದ ಬುಟ್ಟಿ’ ಯೋಜನೆ

ತುಮಕೂರು

     ವಿಶೇಷ ವರದಿ (ಆರ್.ಎಸ್.ಅಯ್ಯರ್)

      `ಸ್ಮಾರ್ಟ್ ಸಿಟಿ’ಯತ್ತ ಹೆಜ್ಜೆ ಇರಿಸತೊಡಗಿರುವ ತುಮಕೂರು ನಗರದಲ್ಲಿ ಇದೀಗ ಹೊಸ ಪರಿಕಲ್ಪನೆಯ “ತೂಗು ಕಸದ ಬುಟ್ಟಿ”ಗಳು ಕಾಣತೊಡಗಿವೆ. `ಸ್ಮಾರ್ಟ್‍ಸಿಟಿ’ ವ್ಯಾಪ್ತಿ ಪ್ರದೇಶದ ರಸ್ತೆಗಳ ಬದಿಯಲ್ಲಿ ಈಗ ಇವು ಅಳವಡಿಸಲ್ಪಡುತ್ತಿವೆ. ಕುತೂಹಲದಿಂದ ಎಲ್ಲರೂ ಅದರತ್ತ ಗಮನಿಸತೊಡಗಿದ್ದಾರೆ.

       ತುಮಕೂರು ನಗರದಲ್ಲಿ ಪ್ರತಿನಿತ್ಯ ಸುಮಾರು 120 ಟನ್‍ಗಳಷ್ಟು ಪ್ರಮಾಣದ ಕಸ ಉತ್ಪತ್ತಿಯಾಗುತ್ತಿದೆ. ಅಷ್ಟೂ ಕಸ ಪರಿಪೂರ್ಣವಾಗಿ ವಿಲೇವಾರಿ ಆಗದೆ, ರಸ್ತೆ ಬದಿ ಅಲ್ಲಲ್ಲಿ ನಗರಕ್ಕೆ ಕಪ್ಪುಚುಕ್ಕೆಯಂತೆ ಉಳಿಯುತ್ತಿದೆ. ಇದನ್ನು ನಿವಾರಿಸುವ ಸಲುವಾಗಿ ಹೆಚ್ಚು ಕಸ ಬೀಳುವ ಸ್ಥಳಗಳನ್ನು `ಬ್ಲಾಕ್ ಸ್ಪಾಟ್’ ಎಂದು ಗುರುತಿಸಲಾಗಿದೆ. ಅಲ್ಲಿ ಸಂಗ್ರಹಗೊಳ್ಳುವ ಕಸವನ್ನು ಸ್ಮಾರ್ಟ್ ವಿಧಾನದಲ್ಲಿ ಸಂಗ್ರಹಿಸಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಕಂಪನಿಯು ತುಮಕೂರು ಮಹಾನಗರ ಪಾಲಿಕೆಯ ಸಹಕಾರದೊಡನೆ ಈ ರೀತಿಯ “ತೂಗು ಕಸದ ಬುಟ್ಟಿ” ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ನಗರವನ್ನು ಕಸಮುಕ್ತಗೊಳಿಸಿ, ಸ್ವಚ್ಛತೆಯ ನಗರವಾಗಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿ, ಹೊಸ ಹೆಜ್ಜೆ ಇರಿಸಲಾಗುತ್ತಿದೆ.

ಏನಿದು `ತೂಗು ಕಸದ ಬುಟ್ಟಿ’?

       “ತೂಗು ಕಸದ ಬುಟ್ಟಿ”ಯನ್ನು ಗುಣಮಟ್ಟದ ಎಂ.ಎಸ್.ಸ್ಟೀಲ್ ವಸ್ತುವಿನಿಂದ ತಯಾರಿಸಲಾಗಿದೆ. ಇದು ಮಳೆ ಮತ್ತು ಉಷ್ಣತೆ ನಿರೋಧಕವಾಗಿದೆ. ಹೀಗಾಗಿ ಇದು ತುಕ್ಕು ಹಿಡಿಯುವುದಿಲ್ಲ. ಇದರಲ್ಲಿ ಹಸಿ ಕಸ ಮತ್ತು ಒಣ ಕಸಕ್ಕೆ ಮೀಸಲಾದ ಎರಡು ಪ್ರತ್ಯೇಕ ಬುಟ್ಟಿಗಳಿರುತ್ತವೆ. ಪ್ರತಿ ಬುಟ್ಟಿಯೂ 50 ಲೀಟರ್‍ನಷ್ಟು ಕಸ ಸಂಗ್ರಹಣಾ ಸಾಮರ್ಥ್ಯ ಹೊಂದಿರುತ್ತದೆ. ಎರಡೂ ಬುಟ್ಟಿಗಳು ತುಂಬಿದರೆ ಒಟ್ಟು 100 ಲೀಟರ್‍ನಷ್ಟು ಕಸ ಸಂಗ್ರಹವಾದಂತಾಗಲಿದೆ. ಇವುಗಳನ್ನು ಸ್ಟೀಲ್ ಪಟ್ಟಿಯೊಂದರ ಮೂಲಕ ನೆಲಕ್ಕೆ ಕಾಂಕ್ರಿಟ್ ಹಾಕಿ ಅಳವಡಿಸಲಾಗಿದೆ. ಇದರಲ್ಲಿ ಸಂಗ್ರಹವಾಗುವ ಕಸವನ್ನು ಸಲೀಸಾಗಿ ಸಾಗಿಸಲು ಅನುಕೂಲವಾಗುವಂತೆ ಇದರ ಒಟ್ಟಾರೆ ವಿನ್ಯಾಸ ಮಾಡಲಾಗಿದೆ ಎನ್ನುತ್ತಿವೆ ಮೂಲಗಳು.

160 ಸ್ಥಳಗಳಲ್ಲಿ ಬರಲಿದೆ `ಬುಟ್ಟಿ’

          ನಗರದ ಸ್ಮಾರ್ಟ್‍ಸಿಟಿ ವ್ಯಾಪ್ತಿಯ ವಿವಿಧ ಬಡಾವಣೆಗಳ ರಸ್ತೆ ಬದಿ, ಸರ್ಕಾರಿ ಕಚೇರಿ ಬಳಿ, ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣ ಬಳಿ ಹೀಗೆ ಒಟ್ಟಾರೆ ನಗರದಲ್ಲಿ ಈಗಾಗಲೆ ಪಾಲಿಕೆ ಮತ್ತು ಸ್ಮಾರ್ಟ್‍ಸಿಟಿ ವತಿಯಿಂದ ಗುರುತಿಸಲಾಗಿರುವ ಒಟ್ಟು 160 ಸ್ಥಳಗಳಲ್ಲಿ ಇಂತಹ “ತೂಗು ಕಸದ ಬುಟ್ಟಿ”ಯನ್ನು ಅಳವಡಿಸಲು ಉz್ದÉೀಶಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಈವರೆಗೆ 48 ಸ್ಥಳಗಳಲ್ಲಿ ಇದನ್ನು ಅಳವಡಿಸಲಾಗಿದೆ.

40 ಕಡೆ ಸಂಚಾರಿ ಕಂಟೈನರ್

         ಸಣ್ಣ ಪ್ರಮಾಣದ ಕಸ ಸಂಗ್ರಹಕ್ಕೆ “ತೂಗು ಕಸದ ಬುಟ್ಟಿ” ನೆರವಾದರೆ, ದೊಡ್ಡ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಕಸ ಸಂಗ್ರಹಕ್ಕೆ “ರೋಲ್ ಆನ್ ಕಂಟೈನರ್”ಗಳನ್ನು ವ್ಯವಸ್ಥೆಗೊಳಿಸಲು ಯೋಜಿಸಲಾಗಿದೆ. ದೊಡ್ಡ-ದೊಡ್ಡ ಸಭೆ-ಸಮಾರಂಭಗಳು ನಡೆಯುವ ಸ್ಥಳಗಳಲ್ಲಿ, ಆಹಾರ ಪದಾರ್ಥಗಳನ್ನು ಮಾರುವ (ಫುಡ್ ಸ್ಟ್ರೀಟ್ ಇತ್ಯಾದಿ) ಸ್ಥಳಗಳಲ್ಲಿ ಇಂತಹ ಸಂಚಾರಿ ಕಂಟೈನರ್‍ಗಳನ್ನು ತಂದು ನಿಲ್ಲಿಸಬಹುದು. ಪ್ರತಿ ಕಂಟೈನರ್ 1100 ಲೀಟರ್ ಕಸ ಸಂಗ್ರಹದ ಸಾಮರ್ಥ್ಯ ಹೊಂದಿರುತ್ತದೆ. ಆಯಾ ಸ್ಥಳದಲ್ಲಿ ಉತ್ಪತ್ತಿಯಾಗುವ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಒಯ್ಯಲು ಇದು ಸಹಕಾರಿಯಾಗಲಿದೆ. ನಗರದ ಒಟ್ಟು 40 ಸ್ಥಳಗಳಲ್ಲಿ ಇಂತಹ ಸಂಚಾರಿ ಕಂಟೈನರ್‍ಗಳನ್ನಿಟ್ಟು, ಸ್ವಚ್ಛತೆ ಕಾಪಾಡುವ ಗುರಿ ಹೊಂದಲಾಗಿದೆ. ಇವೆಲ್ಲದರ ನಿರ್ವಹಣೆಯನ್ನು ತುಮಕೂರು ಮಹಾನಗರ ಪಾಲಿಕೆ ಮಾಡಲಿದೆ.

32 ಲಕ್ಷ ರೂ. ವೆಚ್ಚದ ಯೋಜನೆ

          ನಗರದ ಸ್ವಚ್ಛತೆಯ ರಕ್ಷಣೆಗಾಗಿ ಈ ರೀತಿ 160 “ತೂಗು ಕಸದ ಬುಟ್ಟಿ” ಅಳವಡಿಕೆಗೆ, 40 ಸಂಚಾರಿ ಕಂಟೈನರ್ ವ್ಯವಸ್ಥೆಗೆ ಮತ್ತು ನಗರದ ಒಟ್ಟು 40 ನಿಗದಿತ ಸ್ಥಳಗಳಲ್ಲಿ ಕಸದ ಬುಟ್ಟಿ ಬಗ್ಗೆ ಅರಿವು ಮೂಡಿಸಲು/ ಮಾಹಿತಿ ನೀಡಲು ನಾಮಫಲಕಗಳ ಅಳವಡಿಕೆಗೆ ಒಟ್ಟು 32 ಲಕ್ಷ ರೂ.ಗಳನ್ನು ಮೀಸಲಿರಿಸಿ ಈ ಯೋಜನೆಯನ್ನು ಸ್ಮಾರ್ಟ್‍ಸಿಟಿ ಕಂಪನಿ ರೂಪಿಸಿದೆ.

          ಪ್ರತಿಯೊಂದು “ತೂಗು ಕಸದ ಬುಟ್ಟಿ”ಯ ಘಟಕಕ್ಕೆ 12,000 ರೂ. ಹಾಗೂ ಪ್ರತಿ ಸಂಚಾರಿ ಕಂಟೈನರ್‍ಗೆ 24,000 ರೂ. ವೆಚ್ಚ ಆಗಲಿದೆ. ಮಹಾರಾಷ್ಟ್ರದ ನಾಗಪುರದಲ್ಲಿ ಈ “ತೂಗು ಕಸದ ಬುಟ್ಟಿ” ತಯಾರಾಗಿದೆ. ಮಂಗಳೂರಿನ ಮಾಸ್ಕೋ ಕನ್ಸ್‍ಟ್ರಕ್ಷನ್ಸ್ ಎಂಬ ಸಂಸ್ಥೆಯು ಈ ಯೋಜನೆಯ ಗುತ್ತಿಗೆ ಪಡೆದಿದ್ದು, ಶೀಘ್ರದಲ್ಲೇ ಈ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರಲಿದೆ ಎಂದು ಮೂಲಗಳು ಹೇಳುತ್ತವೆ.

        “ತೂಗು ಕಸದ ಬುಟ್ಟಿ”ಗಳನ್ನು ಸ್ಮಾರ್ಟ್‍ಸಿಟಿ ಕಂಪನಿಯು ವ್ಯವಸ್ಥೆ ಮಾಡುತ್ತಿದೆ. ಇದರೊಂದಿಗೆ ಸಂಚಾರಿ ಕಂಟೈನರ್‍ಗಳನ್ನೂ ಒದಗಿಸಿಕೊಡಲಿದೆ. ಇವುಗಳ ನಿರ್ವಹಣೆಯ ಜವಾಬ್ದಾರಿಯು ತುಮಕೂರು ಮಹಾನಗರ ಪಾಲಿಕೆಯ ಮೇಲಿರುತ್ತದೆ. ಸಾರ್ವಜನಿಕರೂ ಎಲ್ಲೆಂದರಲ್ಲಿ ಕಸವನ್ನು ಎಸೆಯದೆ ಈ ಆಧುನಿಕ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ ಎಂಬುದು ಸ್ಮಾರ್ಟ್‍ಸಿಟಿ ಕಂಪನಿಯ ಅಭಿಪ್ರಾಯವಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link