ಪಂಚೇಂದ್ರಿಯಗಳ ಮೇಲೆ ಹತೋಟಿ ಇಟ್ಟುಕೊಳ್ಳಲಾರದ ವ್ಯಕ್ತಿಯ ವ್ಯಕ್ತಿತ್ವ ವಿಕಾಸವಾಗಲಾರದು – ಪಂಡಿತಾರಾಧ್ಯ

ಹೊಸದುರ್ಗ

   ಪಂಚೇಂದ್ರಿಯಗಳ ಮೇಲೆ ಹತೋಟಿ ಇಟ್ಟುಕೊಳ್ಳಲಾರದ ವ್ಯಕ್ತಿಯ ವ್ಯಕ್ತಿತ್ವ ವಿಕಾಸವಾಗಲಾರದು. ನೈತಿಕ ಅಧಃಪತನಕ್ಕೆ ಇಂದ್ರಿಯಗಳ ಮೇಲೆ ಹತೋಟಿ ಇಲ್ಲದಿರುವುದೇ ಕಾರಣ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಿಸಿದರು.ತಾಲ್ಲೂಕಿನ ಸಾಣೇಹಳ್ಳಿಯ ಶಿವಕುಮಾರ ರಂಗಮಂದಿರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಹೊಸದುರ್ಗ ಶಾಖೆ ಆಯೋಜಿಸಿದ್ದ ಶಿಕ್ಷಕರ ಕಬ್ಸ್, ಬುಲ್ ಬುಲ್ಸ್, ಸ್ಕೌಟ್ಸ್ ಮತ್ತು ಗೈಡ್ಸ್‍ನ ಏಳು ದಿನಗಳ ಮೂಲ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

     ಇಂದು ಶಿಕ್ಷಕರಿಗೆ ಸರಕಾರ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದೆ. ತರಬೇತಿಗಳಿಗೆ ಕಾಟಾಚಾರಕ್ಕೆ ಹಾಜರಾಗದೆ; ಶ್ರದ್ಧೆ, ಆಸಕ್ತಿಯಿಂದ ಹಾಜರಾಗಬೇಕು. ಇಲ್ಲಿ ಕಲಿತದ್ದನ್ನು ತಮ್ಮ ಬದುಕಿನಲ್ಲಿ ಮೊದಲು ಅಳವಡಿಸಿಕೊಂಡರೆ ವಿದ್ಯಾರ್ಥಿಗಳಿಗೆ ಹೇಳುವ, ತಿದ್ದುವ ಅರ್ಹತೆ ಬರುವುದು. ಶಿಕ್ಷಕರು ಆತ್ಮವಂಚನೆ ಮಾಡಿಕೊಳ್ಳದೆ ವಿದ್ಯಾರ್ಥಿಗಳಿಗೆ, ಇಲಾಖೆಗೆ, ಸಮಾಜಕ್ಕೆ ನ್ಯಾಯವೊದಗಿಸುವ ಪ್ರಯತ್ನ ಮಾಡಬೇಕು. ಇಲ್ಲಿಂದ ಮರಳಿದ ಶಿಕ್ಷಕರು ತಮ್ಮ ತಮ್ಮ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಕಬ್ಸ್ ಘಟಕಗಳನ್ನು ಆರಂಭಿಸಿ ಮಕ್ಕಳಿಗೆ ತರಬೇತಿ ನೀಡಿ ಆ ಮಕ್ಕಳನ್ನು ಸಾಣೇಹಳ್ಳಿಗೆ ಕರೆತಂದು ಅವರ ಚಟುವಟಿಕೆಗಳನ್ನು ಪ್ರದರ್ಶಿಸುವುದಾದರೆ ಆ ಖರ್ಚು-ವೆಚ್ಚಗಳನ್ನೆಲ್ಲ ಮಠದಿಂದ ಭರಿಸಲಾಗುವುದು ಎಂದರು.

       ಬಿಇಒ ಎಲ್ ಜಯಪ್ಪ ಮಾತನಾಡಿ, ಶಿಕ್ಷಕರು ದೇಶಕ್ಕೆ ಬೇಕಾದ ಅಗತ್ಯ ಮಾನವ ಸಂಪನ್ಮೂಲವನ್ನು ತಯಾರು ಮಾಡುವ ಮಹತ್ಕಾರ್ಯ ಮಾಡುತ್ತಿದ್ದಾರೆ. ಶಿಕ್ಷಕರು ಕೇವಲ ಪಠ್ಯಕ್ಕೆ ಸೀಮಿತವಾಗದೆ ಮಕ್ಕಳನ್ನು ಸ್ವಾವಲಂಭನೆ, ವ್ಯಕ್ತಿತ್ವ ವಿಕಾಸ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸುವಂತೆ ಸಮರ್ಥವಾಗಿ ತರಬೇತುಗೊಳಿಸಬೇಕು. ಶಿಕ್ಷಕರು ಇಂಥ ಶಿಬಿರಗಳ ಸದುಪಯೋಗ ಮಾಡಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಪ್ರಯತ್ನ ಮಾಡಬೇಕು ಎಂದರು.

       ಜಿಲ್ಲಾ ಸ್ಕೌಟ್ಸ್ ಆಯುಕ್ತರಾದ ಸುನಿತಾ ಮಲ್ಲಿಕಾರ್ಜುನ ಮಾತನಾಡಿ, ಹಿಂದೆ ಸಾಣೇಹಳ್ಳಿ ತುಕ್ಕು ಹಿಡಿದ ಆಯುಧಗಳಿಗೆ ಸಾಣೇ ಹಿಡಿಯುತ್ತಿತ್ತು. ಇಂದು ಪಂಡಿತಾರಾಧ್ಯ ಶ್ರೀಗಳ ನೇತೃತ್ವದಲ್ಲಿ ತುಕ್ಕು ಹಿಡಿದ ಜನರ ಮನಸ್ಸಿಗೆ ಸಾಣೇ ಹಿಡಿಯುವ ಕೆಲಸ ಮಾಡುತ್ತಿದೆ. ಜೀವನದಲ್ಲಿ ಸಮಯಪ್ರಜ್ಞೆ ಮತ್ತು ಶಿಸ್ತು ಬಹಳ ಮುಖ್ಯ. ಇಂಥ ತರಬೇತಿಗಳು ನಮ್ಮಲ್ಲಿ ಸಮಯಪ್ರಜ್ಞೆ ಮತ್ತು ಶಿಸ್ತನ್ನು ಮೂಡಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಚಿತ್ರದುರ್ಗ ಜಿಲ್ಲೆಯ ಮಕ್ಕಳು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂತೆ ಶಿಕ್ಷಕರು ತರಬೇತುಗೊಳಿಸಲಿ ಎಂದರು.

      ಸ್ಥಳೀಯ ಸ್ಕೌಟ್ಸ್ ಅಧ್ಯಕ್ಷ ಲವಕುಮಾರ್ ಮಾತನಾಡಿ ಸಾಣೇಹಳ್ಳಿ ಸಣ್ಣ ಹಳ್ಳಿಯಾಗಿದ್ದರೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ಇಲ್ಲಿಯ ಪರಿಸರ, ಸಮಯಪ್ರಜ್ಞೆ, ಶಿಸ್ತು ಇಂಥ ತರಬೇತಿಗಳನ್ನು ನಡೆಸಲು ಬಹಳ ಸೂಕ್ತವಾಗಿದೆ. ಶಿಕ್ಷಕರು ತರಬೇತಿಯ ಸದುಪಯೋಗಪಡಿಸಿಕೊಂಡು ಮಕ್ಕಳಲ್ಲಿ ದೇಶಪ್ರೇಮ ಮತ್ತು ವೃತ್ತಿಪರತೆಯನ್ನು ಬೆಳೆಸುವಲ್ಲಿ ಸೂಕ್ತ ಶ್ರಮವಹಿಸಬೇಕು ಎಂದರು.ಆರಂಭದಲ್ಲಿ ಸಂಗೀತ ಶಿಕ್ಷಕ ಹೆಚ್ ಎಸ್ ನಾಗರಾಜ್ ವಚನಪ್ರಾರ್ಥನೆ ಮಾಡಿದರು. ಸ್ಕೌಟ್ಸ್ ಸ್ಥಳೀಯ ಕಾರ್ಯದರ್ಶಿ ಯೋಗರಾಜ್ ಸ್ವಾಗತಿಸಿದರೆ ಶಿಬಿರದ ನಾಯಕ ಚಂದ್ರಪ್ರಕಾಶ್ ಪ್ರಾಸ್ತಾವಿಕ ಮಾತನಾಡಿದರು.

     ವೇದಿಕೆಯ ಮೇಲೆ ಸ್ಕೌಟ್ ಸಂಸ್ಥೆಯ ಸ್ಥಳೀಯ ಪದಾಧಿಕಾರಿಗಳು ಮತ್ತು ತರಬೇತುದಾರರಾದ ಬಿ ಪಿ ಓಂಕಾರಪ್ಪ, ಚಂದ್ರಶೇಖರ್, ಹುಸೇನ್, ಪವಾರ್, ಓಂಕಾರಪ್ಪ, ಜಯಸಿಂಹ, ರವಿಕುಮಾರ್, ಗುರುಮೂರ್ತಿ ಮೊದಲಾದವರು ಉಪಸ್ಥಿತರಿದ್ದರು. ಸುಮಾರು 95 ಜನ ಶಿಕ್ಷಕರು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap