ಈರುಳ್ಳಿ ಬೆಲೆ ದುಪ್ಪಟ್ಟು ಏರಿಕೆ: ಗ್ರಾಹಕರ ಪರದಾಟ

ತುರುವೇಕೆರೆ

    ಈರುಳ್ಳಿ ಬೆಲೆ ದಿಢೀರನೆ ಎರಿಕೆಯಿಂದಾಗಿ ಗ್ರಾಹಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇದುವರೆವಿಗೂ 100 ರೂ.ಗೆ 5 ಕೆ.ಜಿ.ಯಂತೆ ಮಾರಾಟವಾಗುತ್ತಿದ್ದ ಈರುಳ್ಳಿ ಇದೀಗ ದಿಢೀರನೆ ಕೆ.ಜಿ. 100-120 ರೂ.ಗೆ ಬೆಲೆ ಏರಿಕೆಯಾಗಿದೆ. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಪ್ರವಾಹ ಮತ್ತು ಭಾರಿ ಮಳೆಯಿಂದ ರೈತ ಬೆಳೆದಿದ್ದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು, ಅದರ ಹೊಡೆತ ಈರುಳ್ಳಿ ಖರೀದಿದಾರರ ಮೇಲೆ ಬಿದ್ದಿದೆ.

     ಇದೀಗ 100 ರಿಂದ 120 ರೂ.ಗೆ ಏರಿಕೆಯಾದ ಈರುಳ್ಳಿಯನ್ನು ಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಇತ್ತ ಕೊರೋನಾ ಹಿನ್ನಲೆಯಲ್ಲಿ ಕೆಲಸವಿಲ್ಲದೆ ಕೈ ಕಟ್ಟಿ ಕುಳಿತಿರುವ ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಬೀದಿಬದಿ ವ್ಯಾಪಾರಿಗಳು ವಾಹನ ಚಾಲಕರು, ಸೇರಿದಂತೆ ಸಾಮಾನ್ಯ ವರ್ಗದ ಜನತೆ ಜೀವನ ಸಾಗಿಸಲು ಹರಸಾಹಸ ಪಡುತ್ತಿರುವ ಈ ದಿನಗಳಲ್ಲಿ ಈರುಳ್ಳಿ ಬೆಲೆ ನೂರರ ಗಡಿ ದಾಟಿರುವುದು ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ. ಇತ್ತ ಹೋಟೇಲ್ ಗಳಲ್ಲಿ ಸಹ ಈರುಳ್ಳಿ ಬೆಲೆ ಏರಿಕೆಯಿಂದ ಈರುಳ್ಳಿ ದೋಸೆ ದೊರೆಯುವುದಿಲ್ಲ ಎಂಬ ನಾಮಫಲಕ ಹಾಕುವಂತ ಪರಿಸ್ಥಿತಿ ಬಂದೊದಗಿದೆ.

    ಈ ವಾರದಲ್ಲಿ ಆಯುಧ ಪೂಜೆ, ವಿಜಯದಶಮಿ ಹಬ್ಬ ಬರಲಿದ್ದು, ಮನೆಗಳಲ್ಲಿ ಗೃಹೋಪಯೋಗಿ ವಸ್ತುಗಳು, ವಾಹನ, ಕೃಷಿ ಉಪಕರಣಗಳು ಸೇರಿದಂತೆ ದಿನಬಳಕೆ ವಸ್ತುಗಳನ್ನು ಪೂಜಿಸಿ ಶಾಂತಿ ಮಾಡುವ ಸಲುವಾಗಿ ಕುರಿ, ಕೋಳಿ, ಮೇಕೆ ಬಲಿ ಕೊಟ್ಟ ಪ್ರಾಣಿಗಳ ಮಾಂಸವನ್ನು ಈ ಭಾಗದ ಜನತೆ ಹೆಚ್ಚಾಗಿ ಬಳಸುವರು. ಇಂತಹ ಸಂದರ್ಭದಲ್ಲಿ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಅಡುಗೆಗೆ ಕಡ್ಡಾಯವಾಗಿ ಬಳಸುವ ಈರುಳ್ಳಿಗೆ ಇದೀಗ ಬೇಡಿಕೆ ಜಾಸ್ತಿಯಾಗಿ ಹಬ್ಬದ ವೇಳೆಗೆ ಈರುಳ್ಳಿ ಬೆಲೆ ಕೆ.ಜಿ.ಗೆ 130 ರಿಂದ 150ರೂ. ದಾಟಿದರೂ ಆಶ್ಚರ್ಯ ಪಡುವಂತಿಲ್ಲ ಎಂದು ಈರುಳ್ಳಿ ಮಾರಾಟಗಾರ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

     ಈರುಳ್ಳಿ ಸಗಟು ವ್ಯಾಪಾರಿ ಸಬ್ರೇಶ್ ಮಾತನಾಡಿ, ಅತಿವೃಷ್ಟಿಯಿಂದ ಉತ್ತರ ಕರ್ನಾಟಕದಲ್ಲಿ ಈರುಳ್ಳಿ ಕೊಳೆತು ಬೆಳೆ ನಾಶವಾಗಿದೆ. ಮಹಾರಾಷ್ಟ್ರದಿಂದ ಹೆಚ್ಚು ಬರುತ್ತಿದ್ದ ಈರುಳ್ಳಿ ಅಲ್ಲಿಯೂ ಮಳೆ ಹಾವಳಿಯಿಂದ ನಷ್ಟವಾಗಿರುವುದು ಈರುಳ್ಳಿ ಬೆಲೆ ಏರಿಕೆಗೆ ಕಾರಣವಾಗಿದೆ. ಇದೀಗ ಬಿಜಾಪುರದಲ್ಲೇ ಕ್ವಿಂಟಾಲ್‍ಗೆ 9000 ರೂ.ನಂತೆ ಕೊಂಡು ತಂದು ಮಾರಾಟ ಮಾಡುತ್ತಿದ್ದೇವೆ. ಬೆಲೆ ಏರಿಕೆಯಿಂದ ಈರುಳ್ಳಿ ವ್ಯಾಪಾರ ಕಡಿಮೆಯಾಗಿದ್ದು ಇದೀಗ ತಂದಿರುವ ಈರುಳ್ಳಿ ಒಂದು ವೇಳೆ ವ್ಯಾಪಾರವಾಗದೆ ಹಾಗೆ ಉಳಿದರೆ ಈರುಳ್ಳಿ ಹಾಳಾಗಿ ಹಾಕಿದ ಬಂಡವಾಳವೂ ಕೈಕಚ್ಚಬಹುದೆಂಬ ಅತಂಕವಿದೆ ಎಂದರು.

    ಪ್ರತಿವರ್ಷ ಆಯುಧಪೂಜಾ ಸಮಯದಲ್ಲಿ ಹೂವು ಹಣ್ಣಿನ ಬೆಲೆ ಮಾತ್ರ ಗಗನಕ್ಕೇರಿದ್ದರೆ ಈ ಬಾರಿ ಅವುಗಳ ಬೆಲೆ ಇಳಿಕೆಯಾಗಿದೆ. ಅದೇ ಈರುಳ್ಳಿ ಬೆಲೆ 120 ರೂ. ಬೆಲೆ ಏರಿಕೆಯಿಂದ ಗ್ರಾಹಕ ಕೊಳ್ಳಲು ಹಿಂದು ಮುಂದು ಯೋಚಿಸುವಂತೆ ಮಾಡಿದೆ. ಅದರಲ್ಲೂ ಈ ಬಾರಿ ಕೊರೋನಾ ದಿಂದ ಕಂಗೆಟ್ಟಿರುವ ಬಡ ವರ್ಗದ ಜನತೆಗೆ ಬೆಲೆ ಏರಿಕೆಯಿಂದ ಕಂಗಾಲಾಗುವಂತೆ ಮಾಡಿದೆ ಎಂದು ಗ್ರಾಹಕ ಕಲ್ಲೇಶ್ ತಿಳಿಸಿದರು.ಒಟ್ಟಿನಲ್ಲಿ ಇದುವರೆವಿಗೂ ಈರುಳ್ಳಿ ಕೊಯ್ಯುವಾಗ ಮಾತ್ರ ಕಣ್ಣಲ್ಲಿ ನೀರು ಬರುತ್ತಿತ್ತು. ಆದರೀಗ ಗ್ರಾಹಕರು ಈರುಳ್ಳಿ ಕೊಳ್ಳುವಾಗಲೆ ಕಣ್ಣಲ್ಲಿ ನೀರು ಬರುವಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap