ರಸ್ತೆ ಬದಿ ನಿಲ್ಲಿಸಿದ್ದ ಖಾಸಗಿ ಬಸ್‍ಗೆ ಕಬ್ಬಿಣದ ಶೀಟ್ ಸಾಗಾಣಿಕಾ ಲಾರಿ ಡಿಕ್ಕಿ

ಮಿಡಿಗೇಶಿ

     ಡಿ. 17 ರಂದು ಪ್ರವಾಸದಿಂದ ಹಿಂದಿರುಗಿದ್ದ ಮಿಡಿಗೇಶಿಯ ಎಂ.ಇ.ಎಸ್ ಕಾನ್ವೆಂಟ್ ಆಂಗ್ಲಮಾಧ್ಯಮ ಶಾಲಾ ಮಕ್ಕಳನ್ನು ಇಳಿಸಿ, ರಾತ್ರಿ 2 ರಿಂದ 3 ಗಂಟೆಯ ಸಮಯದಲ್ಲಿ ಎಂ.ಎ.ಜಿ ಅಂಡ್ ಸನ್ಸ್ ಖಾಸಗಿ ಬಸ್ (ಕೆಎ 06 ಡಿ 5049) ಶಾಲೆಯ ಮುಂಭಾಗ ಮುಖ್ಯ ರಸ್ತೆಯನ್ನು ಬಿಟ್ಟು ಪಕ್ಕಕ್ಕೆ ನಿಲ್ಲಿಸಿ ಚಾಲಕ ಮಂಜಣ್ಣ ಮತ್ತು ಕ್ಲೀನರ್ ಶಾಹಿದ್ ಇಬ್ಬರೂ ನಿದ್ರೆಗೆ ಜಾರಿದ್ದರು. ಮಧುಗಿರಿ ಕಡೆಯಿಂದ ಎತ್ತಿನಹೊಳೆ ಕಾಮಗಾರಿ ಪೈಪ್‍ಗಳನ್ನು ತಯಾರಿಸುವ ಸ್ಥಳಕ್ಕೆ ಅರವತ್ತು ಟನ್ ತೂಕದ ಉಕ್ಕಿನ ಶೀಟ್ ಗಳನ್ನು ತುಂಬಿಕೊಂಡು ಬಂದ ಇಪ್ಪತ್ತೆರಡು ಚಕ್ರಗಳುಳ್ಳ ಲಾರಿಯು ನಿಂತಿದ್ದ ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದಿದೆ.

      ಆಗ ಚಾಲಕ ಮತ್ತು ಕ್ಲೀನರ್‍ಗೆ ಸಹ ಸಣ್ಣ ಪುಟ್ಟ ಪೆಟ್ಟು ಬಿದ್ದಿದ್ದು, ಡಿಕ್ಕಿ ಹೊಡೆದ ಲಾರಿ ಸುಮಾರು ಅರ್ಧ ಫರ್ಲಾಂಗ್ ದೂರ ಹೋಗಿ ನಿಂತಿದೆ. ಉಕ್ಕಿನ ಶೀಟುಗಳೆಲ್ಲಾ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದಿದ್ದವು. ಆ ವೇಳೆ ವಾಹನಗಳ ಓಡಾಟವಿಲ್ಲದ ಕಾರಣ ಯಾವುದೆ ಅನಾಹುತಗಳು ಆಗಿಲ್ಲ. ಸುದ್ದಿ ತಿಳಿದ ಮಿಡಿಗೇಶಿ ಠಾಣಾಧಿಕಾರಿ ಹನುಮಂತರಾಯಪ್ಪ ಹಾಗೂ ಸಿಬ್ಬಂದಿ ಕ್ರೇನ್ ತರಿಸಿ, ಶೀಟುಗಳನ್ನು ತೆಗೆಸಿ ರಸ್ತೆ ತೆರವುಗೊಳಿಸಿದ್ದಾರೆ. ಅಪಘಾತಕ್ಕೀಡಾದ ಲಾರಿ ಮತ್ತು ಬಸ್ಸನ್ನು ವಶಕ್ಕೆ ಪಡೆದು ಲಾರಿ ಚಾಲಕ ನವೀನ್‍ನನ್ನು ಬಂಧಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ