ಬೆಂಗಳೂರು
ಕನಸುಗಳನ್ನು ಹೊತ್ತು ಹೊಸ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬರುತ್ತಿದ್ದ ಬಂಟ್ವಾಳದ ಯುವಕ ಭಾನುವಾರ ತಡರಾತ್ರಿ ಹಾಸನದ ಬಳಿ ನಡೆದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಅಪಘಾತದ ದೃಶ್ಯಾವಳಿಗಳು ಬೆಚ್ಚಿಬೀಳಿಸುವಂತಿದೆ.
ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಅಭಿಷೇಕ್(29) ಅವರಿಗೆ ಬೆಂಗಳೂರಿನ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಸಿಕ್ಕಿತ್ತು. ಹೀಗಾಗಿ ಅವರು ಭಾನುವಾರ ರಾತ್ರಿ ಮಾಣಿಯಿಂದ ಸಾರಿಗೆ ಬಸ್ ಹತ್ತಿದ್ದರು. ಬೆಳೀಗ್ಗೆ ಹೊಸ ಕೆಲಸಕ್ಕೆ ಹೋಗುವ ಖುಷಿಯಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಆದರೆ ದುರಾದೃಷ್ಟವಶಾತ್ ತಡರಾತ್ರಿ ಅವರು ಜಿಲ್ಲೆಯ ಚನ್ನರಾಯಪಟ್ಟಣದ ಹಿರೀಸಾವೆ ಗ್ರಾಮದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿಯೇ ಅಭಿಷೇಕ್ ಕುಟುಂಬ ನೆಲೆಸಿತ್ತು. ಆದರೆ ಸಂಬಂಧಿಯ ಮದುವೆಗೆಂದು ಅಭಿಷೇಕ್ ಹಾಗೂ ಅವರ ಕುಟುಂಬ ಮಾಣಿಗೆ ತೆರೆಳಿತ್ತು. ಹೀಗೆ ಮದುವೆ ಮುಗಿಸಿಕೊಂಡು ಅಭಿಷೇಕ್ ಹಾಗೂ ಅವರ ತಮ್ಮ ಬೆಂಗಳೂರಿಗೆ ವಾಪಸ್ ಬರುತ್ತಿದ್ದರು. ಈ ವೇಳೆ ಬಸ್ ಅಪಘಾತಕ್ಕೀಡಾಗಿ ಅಭಿಷೇಕ್ ಸ್ಥಳದಲ್ಲೇ ಸಾವನ್ನಪ್ಪಿದರು. ಅವರ ತಮ್ಮ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಂಗಳೂರು ಕಡೆಯಿಂದ ಬೆಂಗಳೂರಿನ ಕಡೆಗೆ ಸಾರಿಗೆ ಬಸ್ಸು ವೇಗದಿಂದ ಬರುತ್ತಿತ್ತು. ಈ ವೇಳೆ ಹಿರಿಸಾವೆ ಗ್ರಾಮದ ಬಸ್ ನಿಲ್ದಾಣದ ಬಳಿ ಇನ್ನೋವಾ ಕಾರು, ಬಸ್ ಎದುರು ಬಂದು ನಿಂತಿರುವುದನ್ನು ಕಂಡ ಬಸ್ ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾರೆ. ಆದರೆ ಸಾಕಷ್ಟು ವೇಗದಲ್ಲಿ ಬರುತ್ತಿದ್ದ ಬಸ್ ಬ್ರೇಕ್ ಹಾಕಿದ ರಭಸಕ್ಕೆ ಒಮ್ಮೆಲೆ ಪಲ್ಟಿಯಾಗಿದೆ.
ಅಪಘಾತದ ಭೀಕರತೆಯ ಸಿಸಿಟಿವಿ ದೃಶ್ಯಾವಳಿಗಳು ಭಯಹುಟ್ಟಿಸುವಂತಿದೆ.ತಡರಾತ್ರಿ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಒಟ್ಟು 46 ಮಂದಿ ಪ್ರಯಾಣಿಕರು ಬಸ್ಸಿನಲ್ಲಿ ಇದ್ದರು. ಸದ್ಯ ಗಾಯಾಳುಗಳನ್ನು ಚಿಕಿತ್ಸೆ ನೀಡಿ ಪರ್ಯಾಯ ವ್ಯವಸ್ಥೆಯೊಂದಿಗೆ ಕಳಹಿಸಿಕೊಡಲಾಗಿದೆ. ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
