ಚಾಲಕರ ಅಜಾಗರೂಕತೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚು : ಗೋಪಾಲಕೃಷ್ಣ ಗೌಡರ್

ದಾವಣಗೆರೆ 

     ಚಾಲಕ ಅಜಾಗರೂಕತೆಯಿಂದಲೇ ಹೆಚ್ಚು ರಸ್ತೆ ಅಪಘಾತಗಳಲ್ಲಿ ಸಾವು ಸಂಭವಿಸುತ್ತಿದ್ದು, ಸಂಚಾರಿ ನಿಯಮಗಳನ್ನು ಪಾಲಿಸುವುದು ತುರ್ತಾಗಿದೆ ಎಂದು ಡಿವೈಎಸ್‍ಪಿ ಗೋಪಾಲಕೃಷ್ಣ ಗೌಡರ್ ಹೇಳಿದರು.ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಆರ್‍ಟಿಓ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ 30 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2016 ರಿಂದ 2018 ರ ವರೆಗೆ ನಡೆದ ರಸ್ತೆ ಅಪಘಾತಗಳಲ್ಲಿ ಅಂಕಿ ಅಂಶಗಳ ಪ್ರಕಾರ 824 ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಚಾಲಕರ ಅಜಾಗರೂಕತೆಯೇ ಮೂಲ ಕಾರಣವೆಂದರು.

       ಜಿಲ್ಲೆಯಲ್ಲಿ ನಮ್ಮ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ಮೂರು ವರ್ಷಕ್ಕೆ 824 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳಿಂದ ಸಾವನ್ನಪ್ಪಿರಬಹುದು ಎಂದರು.ಜಿಲ್ಲೆಯಲ್ಲಿ 2016 ರಲ್ಲಿ 895 ಅಪಘಾತ ಪ್ರಕರಣ, 2017 ರಲ್ಲಿ 897, 2018 ರಲ್ಲಿ 853 ಪ್ರಕರಣ ದಾಖಲಾಗಿವೆ. ಸರಾಸರಿ ವರ್ಷಕ್ಕೆ 1500 ಅಪಘಾತ ಪ್ರಕರಣಗಳು ಬೆಳಕಿಗೆ ಬರುತ್ತಿವೆ, ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಈ ಅಪಘಾತಗಳನ್ನು ತಡೆಯಲು ಸಾಧ್ಯವಿಲ್ಲ. ಇದಕ್ಕೆಲ್ಲಾ ರಸ್ತೆ ಸಂಚಾರ ನಿಯಮಗಳ ಪಾಲನೆ ಮತ್ತು ಜಾಗರೂಕತೆಯೇ ಮದ್ದು ಎಂದರು.

        18 ವರ್ಷದೊಳಗಿನ ಮಕ್ಕಳಿಗೆ, ವಾಹನ ಚಾಲನೆ ಪರವಾನಗಿ(ಡಿಎಲ್) ಹೊಂದಿಲ್ಲದ ಮಕ್ಕಳಿಗೆ ವಾಹನಗಳನ್ನು ಚಲಾಯಿಸಲು ನೀಡಬಾರದು ಎಂಬ ನಿಯಮವಿದ್ದರೂ ಹಿರಿಯರು/ಮಾಲೀಕರ ಅಸಡ್ಡೆಯಿಂದ ಮಕ್ಕಳು ಬಲಿಯಾಗುತ್ತಿದ್ದಾರೆ. ರಸ್ತೆಯಲ್ಲಿ ವೇಗದ ಮಿತಿ, ರಸ್ತೆ ತಿರುವುಗಳಲ್ಲಿ ಓವರ್‍ಟೇಕಿಂಗ್, ರಸ್ತೆ ಸಂಚಾರಿ ಫಲಕಗಳನ್ನು ಗಮನಿಸದೇ ವಾಹನ ಚಾಲನೆ, ಕುಡಿತ ಇತ್ಯಾದಿಗಳಿಂದ ದೂರವಿರಬೇಕು. ವಾಹನ ಚಾಲನೆ ವೇಳೆ ಹೆಲ್ಮೆಟ್ ಬಳಕೆ, ಸೀಟ್ ಬೆಲ್ಟ್ ಧರಿಸುವುದು ವೇಗದ ಮಿತಿ ಕುರಿತು ತಮ್ಮ ಪೋಷಕರಿಗೆ ಜಾಗೃತಿ ಮೂಡಿಸಬೇಕು.

         ಶಾಲಾ ಮಕ್ಕಳಿಗೆ ಈ ರಸ್ತೆ ಸಂಚಾರಿ ನಿಯಮಗಳ ಕುರಿತು ಮುಂದಿನ ದಿನಗಳಲ್ಲಿ ಪಠ್ಯ ಪುಸ್ತಕಗಳಲ್ಲಿ ಬರಬೇಕಿದೆ ಎಂದು ಆಶಿಸಿದರು.

          ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ಲಕ್ಷೀಕಾಂತ್ ಬಿ ನಲವಾರ್ ಮಾತನಾಡಿ, ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಮೂಲ ಉದ್ದೇಶ ಅಪಘಾತಗಳ ಸಂಖ್ಯೆಗಳನ್ನು ಕಡಿಮೆ ಮಾಡುವುದಾಗಿದೆ. ದೇಶದಲ್ಲಿ ಪ್ರತಿವರ್ಷ 5 ಲಕ್ಷ ಅಪಘಾತಗಳು ಸಂಭವಿಸುತ್ತಿವೆ. ಅದರಲ್ಲಿ 1 ಲಕ್ಷಕಿಂತ ಹೆಚ್ಚು ಜನರು ಅಪಘಾತಗಳಲ್ಲಿ ಮರಣ ಹೊಂದುತ್ತಿದ್ದಾರೆ.

          ಈ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದೇಶವ್ಯಾಪಿ ರಸ್ತೆ ಸುರಕ್ಷತೆ ಕುರಿತು ಕಾರ್ಯಕ್ರಮ ಹಮ್ಮಿಕೊಂಡು ಪ್ರತಿವರ್ಷ ಶೇ. 10 ಕಡಿಮೆ ಮಾಡುವ ಗುರಿಹೊಂದಿದೆ. ಒಟ್ಟು ನಡೆಯುವ ಅಪಘಾತಗಳಲ್ಲಿ ಶೇ. 98 ರಷ್ಟು ಚಾಲಕರ ಅಜಾಗರೂಕತೆಯಿಂದಲೇ ಎಂಬುದು ಸಾಬೀತಾಗಿದೆ.

           ಉಳಿದ ಶೇ.2 ಮಾತ್ರ ವಾಹನ ದೋಷಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಅಪಘಾತ ಮಾಡಿದ ಚಾಲಕರಿಗೆ ದಂಡ ಮತ್ತು ಅವರ ಡಿಎಲ್ ಗಳನ್ನು 3 ರಿಂದ 6 ತಿಂಗಳ ವರೆಗೆ ರದ್ದು ಪಡಿಸಲಾಗುವುದು. ಇದರ ಸಲುವಾಗಿ ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಪಾಲಿಸಿದರೆ ಮಾತ್ರ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು.

           ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಫ್‍ಉಲ್ಲಾ ಮಾತನಾಡಿ, ಪ್ರಸ್ತುತ ಈ ಪ್ರಮಾಣದಲ್ಲಿ ಅಪಘಾತಗಳು ನಡೆಯುತ್ತಿರುವುದಕ್ಕೆ ಜಾಗೃತಿ ಅಭಾವವೇ ಕಾರಣ. ಮಕ್ಕಳು, ಪೋಷಕರು ರಸ್ತೆ ನಿಯಮ ಉಲ್ಲಂಘಿಸವಾಗ ಅವರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಹೇಳಬೇಕು. ರಾತ್ರಿ 11 ರ ನಂತರ ವಾಹನ ಚಲಾವಣೆ ಮಾಡದಿರುವುದು ಒಳಿತು ಎಂದು ಸಲಹೆ ನೀಡಿದರು.

           ಎಸ್‍ಬಿಎಸ್ ನಗರದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಯ ಜ್ಞಾನೇಶ್ವರ್ ಮಾತನಾಡಿ, ಪ್ರತಿಯೊಬ್ಬರು ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಇತರೆ ರಾಷ್ಟ್ರಗಳಲ್ಲಿ ರಸ್ತೆ ನಿಯಮಗಳನ್ನು ಪಾಲಿಸುವಂತೆ ನಮ್ಮ ದೇಶದಲ್ಲಿ ಪಾಲಿಸಬೇಕು. ಶಾಲಾ ಮಕ್ಕಳು ರಸ್ತೆ ದಾಟುವಾಗ ಎಚ್ಚರಿಂದ ರಸ್ತೆ ನಿಯಮಗಳನ್ನು ಪಾಲಿಸಿ ಸಾಗಬೇಕು, ಇದಕ್ಕೆ ಮೊದಲು ಪೋಷಕರು ಮತ್ತು ಶಿಕ್ಷಕರು ರಸ್ತೆಯಲ್ಲಿ ಚಲಿಸುವಾಗ ಪಾಲಿಸಬೇಕಾದ ಕರ್ತವ್ಯಗಳನ್ನು ಮಕ್ಕಳಿಗೆ ಮನದಟ್ಟು ಮಾಡಬೇಕು ಎಂದು ತಿಳಿಸಿದರು.

            ಕಾರ್ಯಕ್ರಮದಲ್ಲಿ ಮೋಟಾರ್ ವಾಹನ ನಿರೀಕ್ಷಕರಾದ ಮಲ್ಲೇಶಪ್ಪ, ಸಾರಿಗೆ ಕಚೇರಿಯ ಕೆ. ವಾಸುದೇವ್ ಎಸ್‍ಬಿಎಸ್ ನಗರದ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಬಸ್, ಲಾರಿ ಮತ್ತು ಆಟೋ ಚಾಲಕರು, ಬಸ್, ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು, ಸಾರಿಗೆ ಇಲಾಖೆಯ ವಿವಿಧ ಸಿಬ್ಬಂದಿಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link
Powered by Social Snap