ಗುಬ್ಬಿ
ಹೇಮಾವತಿ ನಾಲೆಯಿಂದ ತುಮಕೂರು, ಹಾಸನ ಮತ್ತು ಮಂಡ್ಯ ಜಿಲ್ಲೆಯ ಬಹುತೇಕ ಎಲ್ಲಾ ಕೆರೆಗಳನ್ನು ಭರ್ತಿಮಾಡಲಾಗುವುದು. ಈಗಾಗಲೆ ಮೂರು ಜಿಲ್ಲೆಗಳ ಕೆರೆಗಳಿಗೆ ಸಮರ್ಪಕವಾಗಿ ಯಾವುದೇ ರೀತಿಯ ತಾರತಮ್ಯ ಮಾಡದೆ ನೀರನ್ನು ನಿಯಮಾನುಸಾರ ಬಿಡುಗಡೆ ಮಾಡಲಾಗಿದೆ. ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದ್ದು ಮುಂದಿನ ದಿನಗಳಲ್ಲಿ ಉಳಿದ ಕೆರೆಗಳನ್ನು ಭರ್ತಿಮಾಡಲಾಗುವುದೆಂದು ಎಂದು ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾವಿನಹಳ್ಳಿ ಕೆರೆಗೆ ಬಾಗಿನ ಅರ್ಪಿಸುವ ಗಂಗಾಪೂಜೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೀರಾವರಿ ಯೋಜನೆ ಅನುಷ್ಠಾನ ಹಾಗೂ ಅಂತರ್ಜಲ ವೃದ್ಧಿಯ ಹಿನ್ನಲೆಯಲ್ಲಿ ಎಲ್ಲಾ ಕೆರೆಗಳು ಅಭಿವೃದ್ಧಿಗೆ ಚಿಂತನೆ ನಡೆಸಿ ಕೆರೆಯ ಹೂಳು ತೆಗೆಯಲು ಪ್ರತಿ ಶಾಸಕರಿಗೆ 25 ಲಕ್ಷ ರೂಗಳ ಅನುದಾನವನ್ನು ಮೊದಲ ಹಂತದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಹೇಮಾವತಿ ನಾಲೆ 0 ಯಿಂದ 70 ನೇ ಕಿ.ಮೀ.ವರೆಗೆ 480 ಕೋಟಿ ವೆಚ್ಚದಲ್ಲಿ ಅಗಲೀಕರಣಗೊಳಿಸಲು ಈಗಾಗಲೆ ಟೆಂಡರ್ ಕರೆಯಾಗಿದೆ. 70 ಕಿ.ಮೀ.ನಿಂದ 166 ಕಿ.ಮೀ.ವರೆಗೆ ನಾಲೆಯನ್ನು ಅಗಲೀಕರಣ ಮಾಡಲು 609 ಕೋಟಿ ಹಣ ಬಿಡುಗಡೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಎರಡೂ ಕಾಮಗಾರಿಗಳನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದರಿಂದ ನಾಲೆಯಲ್ಲಿ ಹರಿಯುವ ನೀರಿನ ಪ್ರಮಾಣ ಹೆಚ್ಚಲಿದ್ದು ಜಿಲ್ಲೆಯ ಬಹುತೇಕ ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಲಿವೆ. ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ ಅವರು, ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಮತ್ತು ಬಿಕ್ಕೆಗುಡ್ಡ ಭಾಗದ ಕೆರೆಗಳಿಗೂ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಎತ್ತಿನ ಹೊಳೆ ನಾಲೆಯಿಂದ ಜಿಲ್ಲೆಯ ಗುಬ್ಬಿ, ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ಭಾಗದ ಕೆರೆಗಳಿಗೆ ನೀರು ಹರಿಸಿಕೊಳ್ಳಲು ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ನೆರೆ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಿದ ಹಿನ್ನಲೆಯಲ್ಲಿ 7 ಸಾವಿರ ಕೋಟಿ ರೂಗಳನ್ನು ಪರಿಹಾರಕ್ಕೆ ವಿನಿಯೋಗಿಸ ಲಾಯಿತು. ಆ ಕಾರಣ ವಿಳಂಬವಾದ ಅಭಿವೃದ್ಧಿ ಕಾರ್ಯಗಳಿಗೆ ಚುರುಕಿನ ಚಾಲನೆ ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆಗೆ ಒಳಪಡುವ ಎಲ್ಲಾ ಕೆರೆಗಳಲ್ಲೂ ಹೂಳು ತೆಗೆಯಲಾಗುವುದು ಎಂದು ತಿಳಿಸಿದ ಅವರು, ಕೆರೆಯಲ್ಲಿ ಬೆಳೆದ ಜಾಲಿಮರಗಳನ್ನು ತೆಗೆಯಲು ಎರಡನೇ ಹಂತದಲ್ಲಿ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ರೈತರು ಜಾಲಿಮರಗಳನ್ನು ಬಳಸಿಕೊಳ್ಳುವ ಜೊತೆಗೆ ಕೆರೆಯ ಮಣ್ಣು ತಮ್ಮ ಜಮೀನುಗಳಿಗೆ ಬಳಸಿಕೊಳ್ಳಲು ಅನುವು ಮಾಡಲಾಗಿದೆ.
ಅಂತರ್ಜಲ ವೃದ್ಧಿಯ ಜೊತೆಗೆ ಕೆರೆಗಳ ಒತ್ತುವರಿ ತೆರವು ಕಾರ್ಯಕ್ಕೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿ ತುಮಕೂರು ಜಿಲ್ಲೆಯ ನನ್ನ ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿ ಮೂಲಕ ಕೆರೆ ಒತ್ತುವರಿ ತೆರುವು ಮಾಡಲಾಗುತ್ತದೆ ಎಂದ ಅವರು, ಎತ್ತಿನಹೊಳೆ ಯೋಜನೆಯಲ್ಲಿ ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ಗುಬ್ಬಿ ತಾಲ್ಲೂಕಿಗೆ ಹೆಚ್ಚಿನ ಅನ್ಯಾಯವಾಗುತ್ತಿದೆ. ಈ ಭಾಗಕ್ಕೆ ಹೆಚ್ಚಿನ ನೀರು ಬಳಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಒಂದು ವರ್ಷ ಕಾಲ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಬ್ರೇಕ್ ಹಾಕಿದ್ದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೂಡಾ ಪ್ರಶ್ನಿಸಿದ್ದರು.
ಆದರೂ ನನ್ನ ಜಿಲ್ಲೆಯ ರೈತರ ಹಿತ ಕಾಯಲು ಸಚಿವ ಸ್ಥಾನ ವಾಪಸ್ ಪಡೆಯಲು ತಾಕೀತು ಮಾಡಿ ಮೂರು ತಾಲ್ಲೂಕಿಗೆ ಹೆಚ್ಚಿನ ನೀರು ಹರಿಸಲಾಗುವುದು. ಹೇಮೆ ಕಾಣದ ಕೆರೆಗಳಿಗೆ ಎತ್ತಿನಹೊಳೆ ನೀರು ಬರಲಿದೆ ಎಂದರು.ಸಿ.ಎಸ್.ಪುರ ಕೆರೆಗೆ ನೀರು ಹರಿಸಲು ಸೂಚಿಸಲಾಗಿದೆ. ಈ ಹೋಬಳಿಯ ಎಲ್ಲಾ ಕೆರೆಗಳಿಗೂ ಹರಿದ ಹೇಮೆ ರೈತರಲ್ಲಿ ಮಂದಹಾಸ ತಂದಿದೆ. ಈ ಬಾರಿ ಹೇಮಾವತಿ ಸಮೃದ್ಧವಾಗಿ ಹರಿಯುತ್ತಿದೆ. ಇಂದಿಗೂ ಡ್ಯಾಂನಲ್ಲಿ 31.6 ಟಿಎಂಸಿ ನೀರು ಇದೆ. ಡಿಸೆಂಬರ್ ಮಾಹೆಯ ಅಂತ್ಯದವರೆಗೆ ಜಿಲ್ಲೆಗೆ ಹರಿಯುವ ನೀರು ಬಹುತೇಕ ಕೆರೆಗಳನ್ನು ತುಂಬಿಕೊಳ್ಳಲಿದೆ.
ಆದರೂ ಕೆಲ ಭಾಗಕ್ಕೆ ನೀರು ಹರಿಸಲು ಸಾಧ್ಯವಾಗಿಲ್ಲ. ಗುಬ್ಬಿ ತಾಲ್ಲೂಕಿನ ಬಿಕ್ಕೆಗುಡ್ಡ, ಹಾಗಲವಾಡಿ ಭಾಗಕ್ಕೆ ಹೇಮೆ ನೀರು ನೀಡಲಾಗಿಲ್ಲ. ಈ ಭಾಗಕ್ಕೆ ಎತ್ತಿನಹೊಳೆ ನೀರು ಬರುವಂತೆ ಮಾಡಲಾಗುವುದು. ಗೂಳೂರು ಹೆಬ್ಬೂರು ಭಾಗಕ್ಕೂ ಹೇಮೆ ಹರಿಯಬೇಕಿದೆ. ಈ ಜೊತೆಗೆ ಕೋರಾ, ಹೆಬ್ಬಾಕ, ದೇವರಾಯಪಟ್ಟಣ ಮೂಲಕ ಸಿದ್ದಗಂಗಾ ಮಠ, ಮರಳೂರು ಕೆರೆ ಹೀಗೆ ಅನೇಕ ಕೆರೆಗಳಿಗೆ ನೀರು ಹರಿಸಬೇಕಿದೆ.
ಈ ಜೊತೆಗೆ ಅತಿ ದೊಡ್ಡ ಕೆರೆಯಾದ ಕಡಬ ಕೆರೆಗೆ ಹೇಮೆ ಹರಿಸಲೇಬೇಕಿದೆ. ಇಲ್ಲಿಂದ ಎಚ್‍ಎಎಲ್ ಘಟಕಕ್ಕೆ ನೀರು ಒದಗಿಸುವ ಕಾರಣ ಕೆರೆ ಭಾಗಶಃ ತುಂಬಲೇಬೇಕು. ಎಚ್‍ಎಎಲ್ ಘಟಕದವರೇ ಪೈಪ್‍ಲೈನ್ ಮೂಲಕ ಕೆರೆಗೆ ನೀರು ಹರಿಸಲು ಯೋಜನೆ ಮಾಡಿಕೊಟ್ಟರೆ ಅನುಕೂಲವಾಗುವುದು. ಈ ಕಾರ್ಯ ಸಂಸದ ಬಸವರಾಜು ಅವರು ಮಾಡಬೇಕು ಎಂದರು.
ಮಾರ್ಕೋನಹಳ್ಳಿ ಡ್ಯಾಂನಿಂದ ಸುಮ್ಮನೆ ಹರಿದು ಸಮುದ್ರ ಸೇರುವ ಬಗ್ಗೆ ಚಿಂತಿಸಿ ಮಂಗಳ ಜಲಾಶಯಕ್ಕೆ ನೀರು ಹರಿಸಿಕೊಳ್ಳುವ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಂಡ್ಯ, ಹಾಸನ ಮತ್ತು ತುಮಕೂರು ಜಿಲ್ಲೆಗೆ ವಿಶೇಷ ನೀರಾವರಿ ಯೋಜನೆ ರೂಪಿಸಿ ಕೇಂದ್ರದಿಂದ ಅನುದಾನ ತರಲು ಚಿಂತಿಸಲಾಗಿದೆ. ಈ ಕಾರ್ಯಕ್ಕೆ ಚುಂಚನಗಿರಿ ಶ್ರೀಗಳ ಸಹಕಾರವಿದೆ. 70 ಕಿ.ಮೀ.ವರೆಗೆ ಹೇಮೆ ನಾಲೆ ಅಗಲೀಕರಣಕ್ಕೆ 460 ಕೋಟಿ ರೂ ಬಳಸಲಾಗಿದೆ. ಈ ಜೊತೆಗೆ ಎರಡು ಪಟ್ಟು 2500 ಕ್ಯೂಸೆಕ್ಸ್ ನೀರು ಹರಿಯುವ ಸಾಮಥ್ರ್ಯ ಬರಲಿದೆ. ಮುಂದುವರೆದು 166 ಕಿ.ಮೀ.ವರೆಗೆ ವಿಸ್ತರಣೆ ಮಾಡಲು 680 ಕೋಟಿ ರೂ. ಮಂಜೂರು ಆಗಲಿದೆ. ಹೆಚ್ಚಿನ ನೀರು ಹರಿದಲ್ಲಿ ಕುಣಿಗಲ್ ಭಾಗಕ್ಕೂ ಸಾಕಷ್ಟು ನೀರು ದೊರೆಯಲಿದೆ.
ನೀರು ಬಳಕೆ ಬಗ್ಗೆ ಮಾತ್ರ ರೈತರು ಶಿಸ್ತಿನ ಕ್ರಮವಹಿಸಬೇಕು. ಅಂತರ್ಜಲ ವೃದ್ದಿಗೆ ಮೊದಲು ಆದ್ಯತೆ ನೀಡಬೇಕು. ಮೋದಿ ಅವರ ವರ್ಷಕ್ಕೆ 6 ಸಾವಿರ ರೂ ನೀಡುವ ಯೋಜನೆಗೆ ರಾಜ್ಯ ಸರ್ಕಾರ ಕೈ ಜೋಡಿಸಿ 4 ಸಾವಿರ ರೂಗಳನ್ನು ನೀಡಲಿದೆ. ಕೃಷಿ ಚಟುವಟಿಕೆಗೆ ಈ ಹಣ ವಿನಿಯೋಗಿಸಲು ಕರೆ ನೀಡಲಾಗಿದೆ ಎಂದ ಅವರು, ಈ ಬಾರಿ ಹೇಮೆ ಅಚ್ಚಕಟ್ಟುದಾರರು ಕೃಷಿಗೆ ನೀರು ಬಳಸಿಕೊಳ್ಳಲು ಅವಕಾಶ ಕಲ್ಪಿಸಿ ಅಧಿಸೂಚನೆಯನ್ನು ಯಡಿಯೂರಪ್ಪ ಸರ್ಕಾರ ಹೊರಡಿಸಿದೆ. ಇದು ಜಿಲ್ಲೆಯ ರೈತರಿಗೆ ಸಂತಸದ ವಿಚಾರ ಎಂದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಜಿಲ್ಲೆಗೆ ಹರಿಯಬೇಕಾದ 24.5 ಟಿಎಂಸಿ ನೀರು ಈವರೆಗೂ ನಮಗೆ ಹರಿದಿಲ್ಲ. ಕೇವಲ 6 ರಿಂದ 7 ಟಿಎಂಸಿ ನೀರು ಬಂದಿದೆ. ನೀರು ಹರಿಸಿಕೊಳ್ಳಲು ಜಿಲ್ಲೆಯಲ್ಲಿ ರಾಜಕೀಯ ಇಚ್ಚಾಶಕ್ತಿ ಕಾಣಲಿಲ್ಲ. ಈ ಹಿಂದೆ ಶಾಸಕರು ಸಹ ಆಸಕ್ತಿ ತೋರಿರಲಿಲ್ಲ. ಹಾಸನ ನಾಯಕರ ಮುಂದೆ ಅಶಕ್ತರಂತೆ ಬಿಂಬಿಸಿಕೊಂಡಿದ್ದರು. ಹಾಸನ ಮತ್ತು ತುಮಕೂರು ಎರಡೂ ಜಿಲ್ಲೆಯ ಉಸ್ತುವಾರಿ ವಹಿಸಿದ ಮಾಧುಸ್ವಾಮಿ ಹೇಮೆ ವಿಚಾರದಲ್ಲಿ ಇಬ್ಬರಿಗೂ ನ್ಯಾಯ ಒದಗಿಸಿದ್ದಾರೆ. ಇಷ್ಟಾದರೂ ತುಮಕೂರಿಗೆ ಮರಳಿ ಬರುವ ಆಸಕ್ತಿ ತೋರುವ ಹಾಸನ ನಾಯಕರ ಬಗ್ಗೆ ಯೋಚಿಸಬೇಕಿದೆ. ಇಲ್ಲಿ ಅವರ ವಾಸ್ತವ್ಯ ಹೂಡಿದರೆ ಹೇಮೆ ವಿಚಾರದಲ್ಲಿ ಮತ್ತೇ ನಮಗೆ ಅನ್ಯಾಯವಾಗಲಿದೆ ಎಂದ ಅವರು, ನೀರು ಬಳಕೆ ಬಗ್ಗೆ ರೈತರು ಎಚ್ಚರವಹಿಸಬೇಕು. ಹನಿ ನೀರಾವರಿ, ಸಿಂಚನ ಯೋಜನೆ ಬಳಸಿಕೊಳ್ಳಲು ಕರೆ ನೀಡಿದರು.
ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಮಾತನಾಡಿ ಚುನಾವಣೆಗೆ ಮುನ್ನ ನಾನು ನೀಡಿದ್ದ ಭರವಸೆ ಈಡೇರಿಸಿದ್ದೇನೆ. ಧನ್ಯತಾ ಭಾವನೆಯಲ್ಲಿ ಸಚಿವರು ಹಾಗೂ ಸಂಸದರಿಗೆ ಅಭಿನಂದಿಸಬೇಕಿದೆ. ಉಳಿದ ಸಿ.ಎಸ್.ಪುರ ಮತ್ತು ಕಲ್ಲೂರು ಕೆರೆಯನ್ನೂ ಶೀಘ್ರದಲ್ಲಿ ತುಂಬಿಸಲಾಗುವುದು. ನೀರಿನ ವಿಚಾರದಲ್ಲಿ ಕೆಲವರು ಅವಹೇಳನ ಮಾಡಿರುವ ಬಗ್ಗೆ ತಿಳಿದಿದೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಲ್ಲಿ ರಾಜಕೀಯ ಬಿಟ್ಟು ಬಂದು ಬುದ್ದಿ ಕಲಿಸುತ್ತೇನೆ. ಹಗುರವಾಗಿ ಮಾತನಾಡುವುದು ತೊರೆದು ಅಭಿವೃದ್ಧಿ ಕೆಲಸಗಳಿಗೆ ಸಾಥ್ ನೀಡಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಗಾಯತ್ರಿದೇವಿ, ತಾಪಂ ಉಪಾಧ್ಯಕ್ಷೆ ದೀಪಿಕಾ, ಸದಸ್ಯ ಭಾನುಪ್ರಕಾಶ್, ಮುಖಂಡರಾದ ಬಿ.ಎಸ್.ನಾಗರಾಜು, ಮಹೇಶ್, ವಿ.ಪುಟ್ಟಸ್ವಾಮಿ, ಕೊಂಡಜ್ಜಿ ವಿಶ್ವನಾಥ್, ಬಿಜೆಪಿ ತುರುವೇಕೆರೆ ಅಧ್ಯಕ್ಷ ದುಂಡ ರೇಣುಕಪ್ಪ, ಹೋಬಳಿ ಅಧ್ಯಕ್ಷ ಇಡಗೂರು ರವಿ, ಗ್ರಾಪಂ ಅಧ್ಯಕ್ಷ ಲಕ್ಷ್ಮಮ್ಮ ಭದ್ರೇಗೌಡ, ಎಪಿಎಂಸಿ ಸದಸ್ಯೆ ಪದ್ಮ, ಶಾಸಕ ಜಯರಾಮ್ ಪತ್ನಿ ಸುನಂದಮ್ಮ, ಮುಖಂಡರಾದ ಚಂದ್ರೇಗೌಡ, ಆಂಜಿನಪ್ಪ, ಜಯಶೀಲ, ರಾಧಾ, ಲೋಕೇಶ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ