ವಸತಿ ಯೋಜನೆ ಹಣದ ಸೋರಿಕೆ ತಡೆಯಲು ಜಾಗೃತದಳ ರಚನೆ : ಸರ್ಕಾರ

ಬೆಂಗಳೂರು

   ರಾಜ್ಯಾದ್ಯಂತ ವಿವಿಧ ವಸತಿ ಯೋಜನೆಗಳಲ್ಲಿ ಹಣಸೋರಿಕೆಯಾಗುವುದನ್ನು ತಡೆಗಟ್ಟಲು ಹಾಗೂ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಲು ಜಾಗೃತದಳವನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.ವಿಧಾನಸೌಧದ ಸಮಿತಿ ಕೊಠಡಿಯಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ ಈ ವಿಷಯ ಪ್ರಕಟಿಸಿದರಲ್ಲದೆ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಭಾರೀ ಪ್ರಮಾಣದ ಹಣ ಸೋರಿಕೆಯಾಗುತ್ತಿದೆ ಎಂದರು.

   ಇದೇ ರೀತಿ ರಾಜ್ಯಾದ್ಯಂತ ಮಂಜೂರಾಗಿರುವ ಮನೆಗಳಲ್ಲಿ ಅರ್ಹರು ಮಾತ್ರವಲ್ಲದೆ ದೊಡ್ಡ ಪ್ರಮಾಣದಲ್ಲಿ ಅನರ್ಹರೂ ಮನೆಗಳನ್ನು ಪಡೆದಿದ್ದು ಇಂತವರನ್ನು ಪತ್ತೆ ಹಚ್ಚುವುದು ಅನಿವಾರ್ಯವಾಗಿದೆ ಎಂದರಲ್ಲದೆ,ಇದೇ ಕಾರಣಕ್ಕಾಗಿ ಜಾಗೃತ ದಳವನ್ನು ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

    ಈ ಹಿಂದಿನ ಸರ್ಕಾರದಿಂದ ಮಂಜೂರಾಗಿದ್ದ ವಿವಿಧ ವಸತಿ ಯೋಜನೆಗಳಡಿ ಒಂಭತ್ತು ಲಕ್ಷ ಮನೆಗಳನ್ನು ನಿರ್ಮಿಸಲು ವರ್ಕ್ ಆರ್ಡರ್ ನೀಡಲಾಗಿತ್ತು.ಆದರೆ ವಿವರ ಕೊಡಿ ಎಂದರೆ ನಾಲ್ಕು ಲಕ್ಷ ಮೂವತ್ತೇಳು ಸಾವಿರದಷ್ಟು ಮನೆಗಳು ಪ್ರಗತಿಯಲ್ಲಿವೆ.ಈ ಪೈಕಿ ನಲವತ್ತು ಸಾವಿರಕ್ಕೂ ಹೆಚ್ಚು ಮನೆಗಳ ವಿವರವನ್ನು ಜಿಪಿಎಸ್ ಅಳವಡಿಸಿ ಪರಿಶೀಲಿಸಿದರೆ 1200 ಕ್ಕೂ ಹೆಚ್ಚು ಮಂದಿ ಅನರ್ಹರು ಮನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದಾರೆ.ಹೀಗಿರುವಾಗ ನಾಲ್ಕು ಲಕ್ಷ ಮೂವತ್ತೇಳು ಸಾವಿರಕ್ಕೂ ಹೆಚ್ಚು ಮನೆಗಳ ಪೈಕಿ ಎಷ್ಟು ಮನೆಗಳನ್ನು ಅನರ್ಹರು ಪಡೆದಿರಬಹುದು?ಎಂದು ಅಚ್ಚರಿ ವ್ಯಕ್ತಪಡಿಸಿದರು.

     ಈಗ ಪ್ರಗತಿ ಪಥದಲ್ಲಿರುವ ನಾಲ್ಕು ಲಕ್ಷ ಮೂವತ್ತೇಳು ಸಾವಿರ ಮನೆಗಳನ್ನು ಜೂನ್ ತಿಂಗಳ ಒಳಗಾಗಿ ಪೂರ್ಣಗೊಳಿಸುತ್ತೇವೆ.ಈಗ ಬಹುತೇಕ ಪೂರ್ಣಗೊಂಡಿರುವ ಮನೆಗಳಿಗೆ ಮೂರೂವರೆ ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.

     ಈ ಎಲ್ಲ ಮನೆಗಳ ನಿರ್ಮಾಣ ಕಾರ್ಯ ಮುಗಿಯುವ ತನಕ ಬೇರೆ ಮನೆಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳು ವುದಿಲ್ಲ.ಬದಲಿಗೆ ಈ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದರು.
ಮುಂದಿನ ಮೂರು ವರ್ಷಗಳಲ್ಲಿ ಈ ಯೋಜನೆಯಡಿ ಒಟ್ಟು ಆರು ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಹಾಗೆಯೇ ಬೆಂಗಳೂರಿನಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

   ಗ್ರಾಮೀಣ ಆಶ್ರಯ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಗ್ರಾಮಪಂಚಾಯ್ತಿಗಳು ತಯಾರು ಮಾಡುತ್ತವೆ.ನಗರ ಆಶ್ರಯ ಯೋಜನೆಯ ಫಲಾನುಭವಿಗಳನ್ನು ಶಾಸಕರ ಅಧ್ಯಕ್ಷತೆಯ ಸಮಿತಿ ಸಿದ್ಧಪಡಿಸುತ್ತದೆ ಎಂದರು.ರಾಜ್ಯದಲ್ಲಿ ಕಳೆದ ಹಲ ವರ್ಷಗಳಿಂದ ವಸತಿ ಯೋಜನೆಗಳಡಿ ಒಟ್ಟು ನಲವತ್ತೈದು ಲಕ್ಷ ಮನೆಗಳನ್ನು ನಿರ್ಮಿಸಿಕೊಡಲಾಗಿದೆ ಎಂದು ಹೇಳಲಾಗಿದೆ.ಆದರೆ ಸೂರು ರಹಿತರ ಸಂಖ್ಯೆ ಮಾತ್ರ ದೊಡ್ಡ ಪ್ರಮಾಣದಲ್ಲಿ ಇದ್ದೇ ಇದೆ.

    ಹೀಗಾಗಿ ಸರ್ಕಾರದಿಂದ ಜಾರಿಯಾಗುವ ವಿವಿಧ ವಸತಿ ಯೋಜನೆಗಳ ಮೇಲೆ ನಿಗಾ ಇಡಲು ತೀರ್ಮಾನಿಸಲಾಗಿದ್ದು ಈ ಹಿಂದೆ ಒಂದೇ ಮನೆಗೆ ನಾಲ್ಕು ಬಾಗಿಲು ಇಟ್ಟು ನಾಲ್ಕು ಮನೆಗಳ ಹಣವನ್ನು ಬಿಡುಗಡೆ ಮಾಡಿಸಿಕೊಂಡ ಉದಾಹರಣೆಗಳಿವೆ.

   ಆದರೆ ಇನ್ನು ಮುಂದೆ ಜಾಗೃತದಳ ಈ ಕುರಿತು ವಿಶೇಷ ಗಮನ ಹರಿಸಲಿದ್ದು ವಿವಿಧ ವಸತಿ ಯೋಜನೆಗಳಡಿ ಮನೆ ಪಡೆಯುವವರು ಯಾರು?ಅನ್ನುವುದನ್ನು ಪರಿಶೀಲಿಸುತ್ತದೆ.ಜಿಲ್ಲಾಧಿಕಾರಿಗಳು,ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಗ್ರಾಮಪಂಚಾಯ್ತಿಯ ಪಿಡಿಓಗಳು ಈ ವಿಷಯದಲ್ಲಿ ನೆರವು ನೀಡಲಿದ್ದಾರೆ ಎಂದರು.

   ಪ್ರಧಾನಮಂತ್ರಿ ಗ್ರಾಮ್ ಆವಾಸ್,ಅಂಬೇಡ್ಕರ್,ವಾಜಪೇಯಿ,ದೇವರಾಜ ಅರಸು,ಬಸವ ಹಾಗೂ ದೇವರಾಜ ಅರಸು ಹೆಸರಿನಡಿ ವಿವಿಧ ವಸತಿ ಯೋಜನೆಗಳು ಜಾರಿಯಲ್ಲಿದ್ದು ಈ ಪೈಕಿ ವಾಜಪೇಯಿ,ದೇವರಾಜ ಅರಸು ಹಾಗೂ ಬಸವ ವಸತಿ ಯೋಜನೆಗಳನ್ನು ಒಂದೇ ಸೂರಿನಡಿ ತರಲು ಚಿಂತನೆ ನಡೆಸಲಾಗಿದೆ ಎಂದರು.

   ರಾಜ್ಯದಲ್ಲಿ ಕೊಳೆಗೇರಿಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದ್ದು ಈ ಕಾರ್ಯಪೂರ್ಣಗೊಂಡರೆ ಕೊಳಚೆ ಮುಕ್ತ ನಗರಗಳನ್ನು ನೋಡಲು ಸಾಧ್ಯ ಎಂದು ಅವರು ವಿವರಿಸಿದರು.ಕೊಳೆಗೇರಿಗಳಲ್ಲಿನ ಜನರಿಗೆ ತಿಳಿವಳಿಕೆ ನೀಡುವ ಹೆಸರಿನಲ್ಲಿ ವಸತಿ ಇಲಾಖೆಯಿಂದ ಖಾಸಗಿ ಸಂಸ್ಥೆಗಳು ಕೋಟಿಗಟ್ಟಲೆ ಹಣ ಪಡೆಯುವ ಜಾಲವನ್ನು ಪತ್ತೆ ಹಚ್ಚಿರುವುದಾಗಿ ತಿಳಿಸಿದ ಅವರು,ಈ ಕುರಿತು ವಿವರ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ