ಹೊನ್ನಾಳಿ:
ಧರ್ಮ ಮತ್ತು ಜಾತಿಗಳ ಮಧ್ಯೆ ಸಂಘರ್ಷ ಸಲ್ಲದು. ಸಮಕಾಲೀನ ಸಮಾಜದಲ್ಲಿ ಜಾತಿಗಳು ಬೆಳೆಯುತ್ತಿರುವುದನ್ನು ನೋಡಿದರೆ ಸಮಾಜದಲ್ಲಿ ಅಶಾಂತಿ ಮತ್ತು ಅತೃಪ್ತಿ ಹೆಚ್ಚಾಗುತ್ತದೆ. ಇದರ ಬದಲಾಗಿ ಧರ್ಮವನ್ನು ಬೆಳೆಸಿದರೆ ಅದರ ನೆರಳಲ್ಲಿ ಎಲ್ಲರೂ ಸುಖ, ಶಾಂತಿ, ಸಾಮರಸ್ಯದಿಂದ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರುಗಳಾದ ಶ್ರೀ ಪ್ರಸನ್ನ ರೇಣುಕ ಡಾ. ವೀರ ಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ತಾಲೂಕಿನ ಕಮ್ಮಾರಗಟ್ಟೆ ಗ್ರಾಮದಲ್ಲಿ ಜಗದ್ಗುರು ಚತುರಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವದ ಪ್ರಯುಕ್ತ ಗುರುವಾರ ರಾತ್ರಿ ಹಮ್ಮಿಕೊಂಡ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಆಶೀರ್ವಚನ ನೀಡಿದರು.ಜಾತಿಗಳ ಹಾವಳಿಯಿಂದ ಸಮಾಜದ ಆರೋಗ್ಯ ಹದಗೆಡುತ್ತದೆ. ಆದ್ದರಿಂದ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಜಗದ್ಗುರುಗಳ ಮಾರ್ಗದರ್ಶನ ಅಗತ್ಯ. ಧರ್ಮಪ್ರಜ್ಞೆ ಬೆಳೆಸಿಕೊಂಡು ಎಲ್ಲರೂ ಜಾಗೃತರಾಗಿ ದೇಶಭಕ್ತರಾಗಬೇಕು. ಧರ್ಮ ಮತ್ತು ದೇಶಗಳನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಮಳೆ ಬೆಳೆ ಇಲ್ಲದೇ ನಾಡಿನ ಜನತೆ ಕಂಗಾಲಾಗಿದ್ದಾರೆ. ಇಂಥ ವಿಷಮ ಸ್ಥಿತಿಯಲ್ಲೂ ಕಮ್ಮಾರಗಟ್ಟೆ ಗ್ರಾಮದ ಜನತೆ ಜಗದ್ಗುರುಗಳನ್ನು ಆಮಂತ್ರಿಸಿ ಧರ್ಮ ಸಮಾರಂಭ ಹಮ್ಮಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಈ ಗ್ರಾಮ ಕಮ್ಮಾರಗಟ್ಟೆ ಅಲ್ಲ, ಮುಂದಿನ ದಿನಗಳಲ್ಲಿ ಇದು ಬಂಗಾರದ ಗಟ್ಟಿ ಆಗಲಿ ಎಂದು ಶುಭ ಹಾರೈಸಿದರು.
ಎಲ್ಲರೂ ಅವರವರ ಧರ್ಮಗಳ ಹಿರಿಮೆಯನ್ನು ಹೇಳುತ್ತಾ ತಮಗಷ್ಟೇ ಒಳಿತಾಗಲಿ ಎಂಬ ಸಂಕುಚಿತ ಭಾವನೆಯಲ್ಲಿ ಇದ್ದಾಗ ಆದಿ ಜಗದ್ಗುರು ರೇಣುಕರು “ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂಬ ನಿತ್ಯ ಸತ್ಯ ಮಂತ್ರವನ್ನು ಜಪಿಸಿ ಜಗದ್ವಂದ್ಯರಾಗಿದ್ದಾರೆ.
ಜಗತ್ತಿನ ಎಲ್ಲಾ ಜೀವಿಗಳಿಗೂ ಒಳಿತನ್ನೇ ಬಯಸಿರುವುದು ವೀರಶೈವ ಧರ್ಮ. ಇಂಥ ವೀರಶೈವ ಧರ್ಮದ ಸಂಸ್ಥಾಪನಾಚಾರ್ಯರಾಗಿರುವ ಜಗದ್ಗುರು ಪಂಚಾಚಾರ್ಯರು ಮನುಕುಲದ ಒಳಿತಿಗಾಗಿ ಶ್ರಮಿಸಿದ್ದಾರೆ. ಎಲ್ಲಾ ಜನಾಂಗ, ಧರ್ಮದವರಿಗೂ ಒಳಿತಾಗಲಿ ಎಂದು ಹರಸುವವರು ಜಗದ್ಗುರು ರೇಣುಕರು. ಎಲ್ಲಾ ಧರ್ಮದವರೂ ಪರಧರ್ಮ ಸಹಿಷ್ಣುಗಳಾಗಿರಬೇಕು ಎನ್ನುವ ವಿಶಾಲ ಮನೋಭಾವವನ್ನು ಮನುಕುಲಕ್ಕೆ ಬೋಧಿಸಿದವರು ರೇಣುಕರು. ಇದೇ ಪರಂಪರೆಯಲ್ಲಿ ಬರುವ ರಂಭಾಪುರಿ ಜಗದ್ಗುರು ವೀರ ಗಂಗಾಧರ ಮಹಾಸ್ವಾಮೀಜಿ ಅವರ ಭಾವೈಕ್ಯತಾ ಬೋಧೆ ಅನನ್ಯವಾದುದು.
ಅವರ ಚಿಂತನೆಗಳು ಸದಾಕಾಲಕ್ಕೂ ಸಲ್ಲುತ್ತವೆ ಎಂದು ವಿವರಿಸಿದರು.ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಸ್ಥಾಪಿಸಿದ ವೀರಶೈವ ಧರ್ಮಕ್ಕೆ 12ನೇ ಶತಮಾನದಲ್ಲಿ ಆಗಿಹೋದ ಕ್ರಾಂತಿಯೋಗಿ ಬಸವೇಶ್ವರರು ಮತ್ತು ಅವರ ಸಮಕಾಲೀನ ಪ್ರಮಥರು ಮಾರುಹೋದರು. ವೀರಶೈವ ಧರ್ಮದ ಪ್ರಭೆಯಲ್ಲಿ ಬಸವಾದಿ ಶರಣರು ಆತ್ಮಜ್ಞಾನವನ್ನು ಪಡೆದುಕೊಂಡು ತಮ್ಮ ಅನುಯಾಯಿಗಳನ್ನೂ ಸನ್ಮಾರ್ಗದಲ್ಲಿ ನಡೆಸಿದರು.
ಆದರೆ, ಇಂದು ಕೆಲವರು ಧರ್ಮದ ಬಗ್ಗೆ ಯಾವುದೇ ಜ್ಞಾನ ಇಲ್ಲದೇ ಕೇವಲ ಸ್ವಾರ್ಥ, ತಮ್ಮ ಅಸ್ತಿತ್ವಕ್ಕೋಸ್ಕರ, ರಾಜಕೀಯ ಲಾಭಕ್ಕೋಸ್ಕರ ಅನಾಚಾರಕ್ಕೆ ಮುಂದಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ಅಭಿಪ್ರಾಯಪಟ್ಟರು. ಯಾವ ದುಷ್ಟ ಶಕ್ತಿಗಳು ಎಷ್ಟೇ ಪ್ರಯತ್ನಪಟ್ಟರೂ ಧರ್ಮ ವಿಭಜನೆ ಸಾಧ್ಯವಿಲ್ಲ ಎಂದು ತಿಳಿಸಿದರು.
ಪಂಚಪೀಠಗಳು ಸಮಾಜದಲ್ಲಿ ಧರ್ಮ ಪ್ರಸಾರ ಕಾರ್ಯವನ್ನು ಮಾಡುತ್ತಿವೆ. ಸಾಮಾಜಿಕ ಪ್ರಜ್ಞೆ, ರಾಷ್ಟ್ರಪ್ರೇಮ, ಕರ್ತವ್ಯ ನಿಷ್ಠೆಗಳನ್ನು ಸಮಾಜದಲ್ಲಿ ಬೆಳೆಸುತ್ತ ಮನುಷ್ಯ ತನ್ನ ಜೀವನವನ್ನು ಹೇಗೆ ಸಾರ್ಥಕಪಡಿಸಕೊಳ್ಳಬೇಕು ಎಂಬುದನ್ನು ಅರುಹುತ್ತಿವೆ. ನಾಡಿನೆಲ್ಲೆಡೆ ಹರಡಿಕೊಂಡಿರುವ ಪಂಚಪೀಠಗಳ ಶಾಖಾಮಠಗಳೂ ಸಮಾಜಕ್ಕೆ ಸಂಸ್ಕಾರ, ಸದ್ವಿಚಾರಗಳನ್ನು ಬೋಧಿಸುತ್ತ ತಂತಮ್ಮ ಪಾಲಿನ ಕೆಲಸವನ್ನು ಸಮರ್ಥವಾಗಿ ಮಾಡುತ್ತಿವೆ.
ಉದಾಹರಣೆಗೆ ಬಸವಾಪಟ್ಟಣ ಗವಿಮಠ, ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ, ಹೊಟ್ಯಾಪುರ ಹಿರೇಮಠದ ಗಿರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಮಖಂಡಿ, ಕಣ್ಣೂರು, ಧಾರವಾಡದ ಮಠಗಳ ಸ್ವಾಮೀಜಿಗಳು ಸೇರಿದಂತೆ ನಾಡಿನ ಎಲ್ಲಾ ಸ್ವಾಮೀಜಿಗಳೂ ಉತ್ತಮ ಕಾರ್ಯಗಳನ್ನು ಮಾಡುತ್ತ ಧರ್ಮ ಸಂಸ್ಥಾಪನೆಯಲ್ಲಿ ತೊಡಗಿದ್ದಾರೆ ಎಂದು ಶ್ಲಾಘಿಸಿದರು.
ದೇವರು, ಧರ್ಮಗಳ ಬಗ್ಗೆ ನಮ್ಮಲ್ಲಿ ಹಲವಾರು ವರ್ಷಗಳಿಂದಲೂ ಜಿಜ್ಞಾಸೆ ಇದೆ. ಆಸ್ತಿಕ, ನಾಸ್ತಿಕ ವಾದಿಗಳು ಇದ್ದಾರೆ. ಆದರೆ, ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರೂ ತಮ್ಮ ಅಂತಿಮ ಕ್ಷಣಗಳೊಳಗೆ ಒಮ್ಮೆಯಾದರೂ ದೇವರ ಸೃಷ್ಟಿಯ ಅದ್ಭುತಗಳ ಬಗ್ಗೆ ಅಚ್ಚರಿ, ಸಂತೋಷ ಹೊಂದುತ್ತಾರೆ. ಆದ್ದರಿಂದ, ಮನುಷ್ಯ ಸದಾ ಸಾವಿನ ಭೀತಿ ಇಟ್ಟುಕೊಂಡು ಧರ್ಮಾಚರಣೆ ಮಾಡುತ್ತ ಇನ್ನೊಬ್ಬರಿಗೆ ಆದರ್ಶವಾಗಿ ಬಾಳಬೇಕು ಎಂದು ತಿಳಿಸಿದರು.
ದೇವರು ನೀಡುವ ಕೊಡುಗೆ ಅಸಾಮಾನ್ಯವಾದುದು. ನೆಲ, ಗಾಳಿ, ಆಹಾರ ಇತ್ಯಾದಿಗಳು ಭಗವಂತನ ಕೊಡುಗೆಗಳು. ಆದರೆ, ಇಷ್ಟೆಲ್ಲಾ ಸಂಪನ್ಮೂಲಗಳನ್ನು ನೀಡಿರುವ ದೇವರಿಗೆ ನಾವು ಸ್ಮರಣೆಯ, ಪೂಜೆಯ ಮೂಲಕ ಧನ್ಯವಾದ, ಕೃತಜ್ಞತೆಗಳನ್ನು ಅರ್ಪಿಸಬೇಕು ಎಂದು ಹೇಳಿದರು.
ಉಜ್ಜಯನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ, ಉತ್ತಮ ಮಳೆ, ಬೆಳೆ ಆಗಿ ನಾಡು ಸುಭಿಕ್ಷವಾಗಲಿ. ಅನ್ನದಾತನ ಬದುಕು ಹಸನಾಗಲಿ. ಜನರು ವಿಶಾಲ ಮನೋಭಾವ ಬೆಳೆಸಿಕೊಂಡು, ಸಮನ್ವಯ ಭಾವದಿಂದ ಬದುಕು ಸಾಗುವಂತಾಗಲಿ ಎಂದು ಹಾರೈಸಿದರು.
ಮತದಾನ ಪವಿತ್ರವಾದ ಕಾರ್ಯ. ಎಲ್ಲರೂ ತಪ್ಪದೇ ಯೋಗ್ಯ ವ್ಯಕ್ತಿಗೆ ಮತವನ್ನು ದಾನ ಮಾಡಬೇಕು, ಮಾರಿಕೊಳ್ಳಬಾರದು. ಸುಪ್ರೀಮ್ ಕೋರ್ಟ್ ನೋಟಾಕ್ಕೆ ಅವಕಾಶ ನೀಡಿದೆ. ಆದರೆ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬ ಕಾನೂನನ್ನು ಜಾರಿಗೊಳಿಸಲು ಚಿಂತನೆ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು. ಮತದಾನದ ಪ್ರಮಾಣ ಹೆಚ್ಚಾದರೆ ಯೋಗ್ಯ ವ್ಯಕ್ತಿಗಳು ನಮ್ಮ ಜನಪ್ರತಿನಿಧಿಗಳಾಗುತ್ತಾರೆ.
ಆದ್ದರಿಂದ, ಉತ್ತಮ ವ್ಯಕ್ತಿಗೆ ಮತ ಹಾಕುವುದೇ ನೀವು ನಮಗೆ ನೀಡುವ ಕಾಣಿಕೆ ಎಂದು ತಿಳಿಸಿದರು.ಮೇ 9ರಂದು ಉಜ್ಜಯನಿಯಲ್ಲಿ ಜಾತ್ರೆ ನಡೆಯಲಿದೆ. ಜಗತ್ತಿನಲ್ಲೇ ವಿಶಿಷ್ಟವಾಗಿರುವ ಆಚರಣೆ ಉಜ್ಜಯನಿ ದೇಗುಲದ ಶಿಖರಕ್ಕೆ ತೈಲಾಭಿಷೇಕ ಕಾರ್ಯಕ್ರಮ 10ರಂದು ನಡೆಯಲಿದೆ. ಈ ಭಾಗದ ಎಲ್ಲರೂ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತ ಸ್ವಾಮೀಜಿ, ಬಸವಾಪಟ್ಟಣ ಗವಿಮಠ, ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಮತ್ತು ಹೊಟ್ಯಾಪುರ ಹಿರೇಮಠದ ಗಿರಿಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಎಂ.ಪಿ. ಬಸವರಾಜ್, ಶಿವಕುಮಾರ್, ಎಚ್.ಆರ್. ಗಂಗಾಧರ್, ಸಿರಿಗೆರೆ ತನುಜಾ ಮತ್ತಿತರರು ಮಾತನಾಡಿದರು.
ಜಮಖಂಡಿ, ಕಣ್ಣೂರು, ಧಾರವಾಡದ ಮಠಗಳ ಸ್ವಾಮೀಜಿಗಳು, ಶಾಸಕ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಜಿಪಂ ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ಮಲೇಬೆನ್ನೂರಿನ ಶ್ರೀ ಗುರುರೇಣುಕ ರೈಸ್‍ಮಿಲ್ಸ್ ಮಾಲೀಕ ನಂಜಯ್ಯ, ಕಮ್ಮಾರಗಟ್ಟೆ ಗ್ರಾಮದ ನಿವೃತ್ತ ಶಿಕ್ಷಕ ಎಚ್.ಪಿ. ಚನ್ನಪ್ಪ, ಶೇಖರಪ್ಪ ಚಕ್ಕಡಿ ಮತ್ತಿತರರು ಉಪಸ್ಥಿತರಿದ್ದರು.
ಕಮ್ಮಾರಗಟ್ಟೆ ಗ್ರಾಮಸ್ಥರು ಜಗದ್ಗುರುಗಳಿಗೆ ಭಿನ್ನವತ್ತಳೆ ಸಮರ್ಪಿಸಿದರು. ಕಮ್ಮಾರಗಟ್ಟೆ ಮತ್ತು ಕೂಡ್ಲಿಗೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಡ್ಡಪಲ್ಲಕ್ಕಿ ಉತ್ಸವ, ಸರ್ವಧರ್ಮ ಸಮ್ಮೇಳನಕ್ಕೆ ಶ್ರಮಿಸಿದ ಎಲ್ಲರನ್ನೂ ಸನ್ಮಾನಿಸಲಾಯಿತು.
ಸಾಸ್ವೇಹಳ್ಳಿ, ಬೆನಕನಹಳ್ಳಿ, ಚಿಕ್ಕಬಾಸೂರು, ಕಮ್ಮಾರಗಟ್ಟೆ ತಾಂಡಾ, ಹುಣಸೇಹಳ್ಳಿ, ತಕ್ಕನಹಳ್ಳಿ, ತರಗನಹಳ್ಳಿ, ಸಿಂಗಟಗೆರೆ, ಹೊನ್ನಾಳಿ ಪಟ್ಟಣದ ಸೇರಿದಂತೆ ತಾಲೂಕಿನ ಹಾಗೂ ಕಮ್ಮಾರಗಟ್ಟೆ ಗ್ರಾಮದ ಸುತ್ತ-ಮುತ್ತಲಿನ ಅನೇಕ ಗ್ರಾಮಗಳ ಸಹಸ್ರಾರು ಭಕ್ತರು ಭಾಗವಹಿಸಿದ್ದರು.