ಹುಳಿಯಾರು ಹೋಬಳಿಯ ಆಧಾರ್ ತಿದ್ದುಪಡಿಯ ಗೋಳು ಕೇಳೋರ್ಯಾರು?

ಹುಳಿಯಾರು:

     ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ನಿಯಮದಂತೆ ಆಹಾರ ಧಾನ್ಯ ಪಡೆಯುತ್ತಿರುವ (ಬಿಪಿಎಲ್, ಎಎವೈ, ಎಪಿಎಲ್) ಕಾರ್ಡುದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡಿನಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿಯನ್ನು ಅಪ್ಲೋಡ್ ಮಾಡಬೇಕಾಗಿದ್ದು ಇದಕ್ಕಾಗಿ ಆಧಾರ್ ತಿದ್ದುಪಡಿ ಮಾಡಿಸಲು ಹೋಬಳಿಯಲ್ಲಿ ಇರುವ ಏಕೈಕ ಆಧಾರ್ ಕೇಂದ್ರವಾದ ಯಳನಾಡು ಕಾವೇರಿ ಗ್ರಾಮೀಣ ಬ್ಯಾಂಕ್ ಮುಂದೆ ಬೆಳಿಗ್ಗೆಯಿಂದಲೇ ವೃದ್ಧರು, ಮಹಿಳೆಯರು ಮಕ್ಕಳಾಧಿಯಾಗಿ ಸರತಿ ಸಾಲಿನಲ್ಲಿ ನಿಂತು ಆಧಾರ್ ತಿದ್ದುಪಡಿಯಾಗದೆ ಹಿಂದಿರುಗುತ್ತಿರುವ ಘಟನೆ ಸಾಮಾನ್ಯವಾಗಿದೆ.

      ಈ ಹಿಂದೆ ಪಡಿತರ ಚೀಟಿದಾರರ ಕುಟುಂಬದ ಒಬ್ಬ ಸದಸ್ಯರು ಮಾತ್ರ ಬಯೋಮೆಟ್ರಿಕ್ ನೀಡಿ ಆಹಾರ ಪಡೆಯಬೇಕಾಗಿತ್ತು. ಈ ಪದ್ಧತಿಯಿಂದ ಇನ್ನುಳಿದವರ ಅವಶ್ಯಕತೆ ಇರಲಿಲ್ಲ, ಪಡಿತರ ಚೀಟಿಯ ಕುಟಂಬದಲ್ಲಿ ಯಾರೇ ಸದಸ್ಯರು ಸತ್ತರೂ ಅಂತಹವರ ಹೆಸರಲ್ಲಿ ಪಡಿತರ ಆಹಾರ ಪಡೆಯುತ್ತಿದ್ದ ಪ್ರಕರಣಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ನೈಜ ಪಡಿತರ ಫಲಾನುಭವಿಗಳ ಪತ್ತೆಗೆ ಹಾಗೂ ನಕಲಿ ಪಡಿತರದಾರನ್ನು ನಿಯಂತ್ರಿಸಲು ರಾಜ್ಯಾದ್ಯಂತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇ-ಕೆವೈಸಿಯನ್ನು ಜಾರಿಗೊಳಿಸಿದೆ. ಆದ್ದರಿಂದ ಹೆಬ್ಬಟ್ಟಿನ ಗುರುತು ನೀಡಬೇಕಾಗಿದ್ದು ಅಪ್‍ಲೋಡ್ ಜು.31 ಗಡುವು ನೀಡಿದೆ.

      ಆದರೆ ರೇಷನ್ ಕಾರ್ಡ್‍ಗೆ ಇ-ಕೆವೈಸಿ ಮಾಡಲು ಈ ಮೊದಲೇ ಆಧಾರ್ ಕಾರ್ಡ್‍ನಲ್ಲಿ ಬಯೋಮೆಟ್ರಿಕ್ ( ಹೆಬ್ಬೆಟ್ಟು ದಾಖಲಿಸುವುದು) ಮಾಡಬೇಕಿತ್ತು. 5 ವರ್ಷದ ಒಳಗಿನ ಮಕ್ಕಳಿಗೆ ಆಧಾರ್ ಪಡೆಯುವಾಗ ಬಯೋಮೆಟ್ರಿಕ್ ಮಾಡಿರೋದಿಲ್ಲ. ಹಾಗಾಗಿ ಇ-ಕೈವೈಸಿ ಮಾಡಲು ಮಕ್ಕಳ ಹೆಬ್ಬೆಟ್ಟು ಸ್ಕಾನ್ ಮಾಡಲು ಸಾಧ್ಯವಾಗದೆ ರಿಜೆಕ್ಟ್ ಆಗುತ್ತಿದೆ. ಈ ನಿಟ್ಟಿನಲ್ಲಿ ಆಧಾರ್ ಕಾರ್ಡ್‍ಗೆ ಮಕ್ಕಳ ಹೆಬ್ಬೆಟ್ಟು ದಾಖಲಿಸುವುದು ಅನಿವಾರ್ಯವಾಗಿದೆ. ಅಲ್ಲದೆ ಹೊಸದಾಗಿ ಮದುವೆಯಾಗಿ ಬಂದವರು ತಮ್ಮ ವಿಳಾಸ ಬದಲಿಸುವುದು, ಹುಟ್ಟಿದ ದಿನಾಂಕ, ಪೋನ್ ನಂಬರ್ ಹೀಗೆ ಅನೇಕ ಬಗೆಯ ತಿದ್ದುಪಡಿ ಅಗತ್ಯವಿದ್ದು ಈಗ ಇದಕ್ಕಾಗಿ ಹೋಬಳಿಯ ಮೂಲೆಮೂಲೆಗಳಿಂದ ಜನರು ಸಂಸಾರ ಸಮೇತ ಯಳನಾಡುವಿಗೆ ಆಗಮಿಸುತ್ತಿದ್ದಾರೆ.

     ಈ ಹಿಂದೆ ಕಾಮನ್ ಸರ್ವಿಸ್ ಸೆಂಟರ್‍ಗಳಲ್ಲಿ ಆಧಾರ್ ತಿದ್ದುಪಡಿಗೆ ಅವಕಾಶ ಕೊಟ್ಟಿದ್ದರಿಂದ ಜನರು ಸುಸೂತ್ರವಾಗಿ ಆಧಾರ್ ತಿದ್ದುಪಡಿ ಮಾಡಿಸಿಕೊಳ್ಳುತ್ತಿದ್ದರು. ಆದರೆ ಈಗ ಇವರ ಅನುಮತಿ ನಿಲ್ಲಿಸಿ ಬ್ಯಾಂಕ್‍ಗಳಿಗೆ ಮಾತ್ರ ಅನುಮತಿ ನೀಡಿದ್ದು ಅದರಂತೆ ಹುಳಿಯಾರು ಹೋಬಳಿಗೆ ಯಳನಾಡುವಿನ ಕೆಜೆಬಿಯಲ್ಲಿ ಆಧಾರ್ ಕೇಂದ್ರ. ತೆರೆದಿದ್ದಾರೆ. ಹಾಗಾಗಿ ಯಳನಾಡುವಿಗೆ ಹದಿನೈದಿಪ್ಪತ್ತು ಕಿಮೀ ದೂರ ಅಂದರೆ ದಸೂಡಿ, ಹೊಯ್ಸಲಕಟ್ಟೆ, ಗಾಣಧಾಳು ಗ್ರಾಪಂ ವ್ಯಾಪ್ತಿಯ ಜನ ಆಧಾರ್ ತಿದ್ದುಪಡಿಗೆ ಬರುತ್ತಿದ್ದಾರೆ. ಊಟ ತಿಂಡಿ ಬಿಟ್ಟು ಬೆಳಿಗ್ಗೆಯಿಂದಲೇ ಕೆಜಿಬಿ ಬ್ಯಾಂಕ್ ಮುಂದೆ ಕ್ಯೂ. ನಿಲ್ಲುತ್ತಿದ್ದಾರೆ. ರೈತರಂತೂ ಹೊಲದ ಕೆಲಸ ಬಿಟ್ಟು ಬ್ಯಾಂಕ್ ಮುಂದೆ ಜಮಾಯಿಸುತ್ತಿದ್ದಾರೆ.

      ಬೆಳಿಗ್ಗೆ ಏಳೆಂಟುಗಂಟೆಯಿಂದ ಕ್ಯೂ ನಿಂತಿದ್ದರೂ ಸಹ ದಿನಕ್ಕೆ 25 ಮಂದಿಗೆ ಮಾತ್ರ ಬಾಂಕ್ ಸಿಬ್ಬಂದಿ ತಿದ್ದುಪಡಿ ಮಾಡುತ್ತಿದ್ದು ಇದಕ್ಕಾಗಿ ಮೊದಲೇ ಟೋಕನ್ ಕೊಟ್ಟು ಅಂತಹವರು ಬಂದರೆ ಮಾತ್ರ ಸಿದ್ದು ಪಡಿ ಮಾಡುತ್ತಿದ್ದಾರೆ. ಆದರೆ ಇದರ ಬಗ್ಗೆ ಅರಿವಿಲ್ಲದೆ ತಮ್ಮತಮ್ಮ ಊರುಗಳಿಂದ ನಡೆದುಕೊಂಡು ಬಂದು ಸರತಿ ಸಾಲಿನಲ್ಲಿ ನಿಲ್ಲುವ, ಆಟೋ ಬಾಡಿಗೆ ಮಾಡಿಕೊಂಡು ಬರುವ ಮಕ್ಕಳು, ವೃದ್ಧರು, ಮಹಿಳೆಯರು ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗುತ್ತಿದ್ದಾರೆ. ಇದರಿಂದ ಜನರ ಹಣ-ಸಮಯ ಎಲ್ಲವೂ ವ್ಯರ್ಥವಾಗುತ್ತಿದ್ದು ಮೊದಲಿನಂತೆ ಕಾಮನ್ ಸರ್ವಿಸ್ ಸೆಂಟರ್‍ನಲ್ಲಿ ಆಧಾರ್ ತಿದ್ದು ಪಡಿಗೆ ಅವಕಾಶ ಕೊಡಬೇಕು ಎಂಬುದು ಜನರ ಒತ್ತಾಯವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap