ಹುಳಿಯಾರು
ಆಧಾರ್ ತಿದ್ದುಪಡಿಗೆ ತಾಯಿಯ ಜೊತೆ ತೆರಳಿದ್ದ ವಿದ್ಯಾರ್ಥಿ ಸಾವನ್ನಪ್ಪಿದ ದುರ್ಘಟನೆ ಹುಳಿಯಾರು ಹೋಬಳಿಯ ಯಳನಾಡು ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ 7 ಗಂಟೆಯ ಸಮಯದಲ್ಲಿ ಜರುಗಿದೆ.
ಮೃತ ವಿದ್ಯಾರ್ಥಿಯನ್ನು ಹುಳಿಯಾರು ಹೋಬಳಿಯ ಬಳ್ಳೆಕಟ್ಟೆ ವಾಸಿ ಅಬ್ದುಲ್ ಖಲೀಲ್ (12) ಎಂದು ಹೇಳಲಾಗಿದೆ. ಈತ ಹುಳಿಯಾರಿನ ಬಸವೇಶ್ವರ ಪ್ರೌಢಶಾಲೆಯಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಬ್ಯಾಂಕ್ ಅಕೌಂಟ್ ಮಾಡಿಸುವ ಸಂಬಂಧ ತನ್ನ ಹಳೆಯ ಕಾರ್ಡ್‍ನಲ್ಲಿ ಬಯೋಮೆಟ್ರಿಕ್ ಯಿಲ್ಲದ ಪರಿಣಾಮ ತಿದ್ದುಪಡಿಗೆ ಹೋಬಳಿಯ ಯಳನಾಡು ಗ್ರಾಮಕ್ಕೆ ತಾಯಿ ಶಾಹೇದಾ ಬೇಗಂ ಜೊತೆ ಬೆಳ್ಳಂಬೆಳಿಗ್ಗೆಯೇ ತೆರಳಿದ್ದ. ಮುಂಜಾನೆ 6-30 ಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಈತನಿಗೆ ಬಹಿರ್ದೆಸೆ ಅರ್ಜೆಂಟ್ ಆಗಿದೆ. ಶೌಚ ಮುಗಿಸಿ ಹೊಂಡಕ್ಕೆ ಹೋಗಿ ತೊಳೆದುಕೊಳ್ಳುವಾಗ ಆಯಾತಪ್ಪಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಬಹೀರ್ದೆಸೆಗೆ ತೆರಳಿದ್ದ ಮಗ ಎಷ್ಟೊತ್ತಾದರೂ ವಾಪಸ್ ಬಾರದಿದ್ದಾಗ ತಾಯಿ ಬೇಗಂ ಹೋಗಿ ನೋಡಲಾಗಿ ಮಗ ನೀರಿಗೆ ಬಿದ್ದಿರುವುದು ಕಂಡುಬಂದಿದೆ. ಸ್ಥಳೀಯರ ಸಹಕಾರದಿಂದ ಮಗನನ್ನು ನಿರಿನಿಂದ ಮೇಲೆತ್ತಿ ಕೂಡಲೇ ಆಂಬುಲೆನ್ಸ್ ನಲ್ಲಿ ಹುಳಿಯಾರಿನ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿದ್ದಾನೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.