ಚಿತ್ರದುರ್ಗ
ನಮ್ಮ ಸರ್ಕಾರವನ್ನು ಪರ್ಸಂಟೇಜ್ ಸರ್ಕಾರವೆಂದು ಪದೇ ಪದೇ ಟೀಕೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಅಧಿಕಾರಕ್ಕಾಗಿ ಭ್ರಷ್ಟರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು
ಚಿತ್ರದುರ್ಗದಲ್ಲಿ ಶನಿವಾರ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ಪರವಾಗಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಐದು ವರ್ಷಗಳ ಸಾಧನೆಗಳ ಕುರಿತು ಎಲ್ಲಿಯೂ ಪ್ರಸ್ತಾಪಿಸುತ್ತಿಲ್ಲ. ಅಭಿವೃದ್ದಿಯ ವಿಚಾರವನ್ನೂ ಮಾತನಾಡುತ್ತಿಲ್ಲ. ಬದಲಾಗಿ ಪ್ರತಿಪಕ್ಷಗಳ ಕುರಿತು ಲಘುವಾಗಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು
ಮೋದಿ ಮೊನ್ನೆ ಚಿತ್ರದುರ್ಗಕ್ಕೆ ಬಂದು ಅವರ ಅಭ್ಯರ್ಥಿಗೆ ಮತ ಕೇಳುವ ಬದಲು ಯೋಧರು ಮತ್ತು ರೈತರ ಹೆಸರಿನಲ್ಲಿ ಮತ ಕೇಳಿದ್ದಾರೆ.
ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಕ್ಕೆ ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ಸಿನವರು ಕಣ್ಣೀರು ಹಾಕಿದ್ದಾರೆಂದು ಟೀಕಿಸಿದ್ದಾರೆ. ಆದರೆ ನಮಗೆ ಕಣ್ಣೀರು ಬಂದಿದ್ದು ನಮ್ಮ ಯೋಧರ ಸಾವನ್ನು ನೋಡಿ ನಮಗೆ ಕಣ್ಣೀರು ಬಂದಿದೆ. ಯೋಧರ ಪತ್ನಿಯರ ಕಣ್ಣೀರು ನೋಡಿ ನಮಗೆ ಕಣ್ಣೀರು ಬಂದಿದೆ ಎಂದರು
ಉಡುಗೊರೆ ಸಮೇತ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಪ್ರಧಾನಿಯನ್ನು ಬೇಟಿ ಮಾಡಿ ಬಂದಿರುವ ಮೋದಿ ಅವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಕುಮಾರಸ್ವಾಮಿ ನುಡಿದರು
ಚಿತ್ರದುರ್ಗದ ಜನತೆ ಏನು ಅಗತ್ಯ ಇದೆ ಎಂಬುದು ನನಗೆ ಗೊತ್ತಿದೆ. ಈ ಭಾಗದ ನೀರಿನ ಸಮಸ್ಯೆ ನಿವಾರಣೆಗಾಗಿ 17 ಸಾವಿರ ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದ್ದೇವೆ. ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿಯೇ ಭದ್ರಾಮೇಲ್ದಂಡೆ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವ ಮೂಲಕ ಜನರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವ ಸಲುವಾಗಿ ಮೈತ್ರಿ ಅಭ್ಯರ್ಥಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು
ಇದೇ ವೇದಿಕೆಯಲ್ಲಿ ಮೋದಿ ಅವರು ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಿಲ್ಲವೆಂದು ಹೇಳಿದ್ದಾರೆ. ನಾವು ಎಷ್ಟು ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೇವೆ ಎಂಬುದಕ್ಕೆ ದಾಖಲೆ ಇದೆ.ರೈತರಿಗೆ ನೀವು ಎರಡು ಸಾವಿರ ಕೊಡೊದಕ್ಕೆ ನಾವು15 ಲಕ್ಷ ರೈತರ ಮಾಹಿತಿ ಕೊಟ್ಟಿದ್ದೇವೆ. ಆದರೆ ನಮಗೆ ಮಾಹಿತಿಯನ್ನೆ ಕೊಟ್ಟಿಲ್ಲವೆಂದು ಸುಳ್ಳು ಹೇಳಿದ್ದಾರೆ ಎಂದು ಟೀಕಿಸಿದರು
ಮೋದಿ ಅವರು ಈ ದೇಶದ ರೈತರಿಗೆ ಏನು ಕೊಟ್ಟಿದ್ದಾರೆ. ದೆಹಲಿಯಲ್ಲಿ ರೈತರು ಧರಣಿ ನಡೆಸಿದ್ದಾಗ ಸೌಜನ್ಯಕ್ಕೂ ರೈತರ ಸಮಸ್ಯೆ ಕುರಿತು ಮಾತನಾಡಲಿಲ್ಲ. ಈಗ ಚುನಾವಣೆ ಕಾರಣಕ್ಕಾಗಿ ಆರು ಸಾವಿರ ರೂಪಾಯಿ ಘೋಷಣೆಯ ನಾಟಕವಾಡುತ್ತಿದ್ದಾರೆ ಎಂದರು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಚಿವ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಹೆಚ್.ಆಂಜನೇಯ, ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಡಿ.ಸುಧಾಕರ್, ಶಿವಮೂರ್ತಿನಾಯಕ್,ಸೋಮ್ಲಾನಾಯಕ್,ತಿಮ್ಮರಾಯಪ್ಪ, ವಿದಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜು, ಜಲಜಾನಾಯಕ್, ಮುಖಂಡರಾದ ಹನುಮಲಿ ಷನ್ಮುಖಪ್ಪ, ಜಿ.ಎಸ್.ಮಂಜುನಾಥ್, ಆರ್.ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಇನ್ನಿತರರು