ಅಧಿಕಾರಕ್ಕಾಗಿ ದೇಶದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿ

ಚಿತ್ರದುರ್ಗ:

    ಪ್ರತಿಕೂಲ ವಾತಾವರಣದ ವಿರುದ್ದ ಹೋರಾಡಲು ಪರ್ಯಾಯ ಮಾಧ್ಯಮ ಹುಟ್ಟಿಕೊಳ್ಳಬೇಕು. ಆದರೆ ಹುಟ್ಟಿಕೊಳ್ಳುವುದು ಕಷ್ಟ. ವಂಚಿತ ಸಮುದಾಯಗಳ ಪರ ಧ್ವನಿ ಎತ್ತಬೇಕಾಗಿರುವ ಮಾಧ್ಯಮಗಳು ಜಾಹಿರಾತು, ಲಾಭ ಹಿಂದೆ ಬಿದ್ದಿವೆ. ಮಾಧ್ಯಮಗಳ ಗಂಟಲಲ್ಲಿ ಎಲುಬು ಸಿಕ್ಕಿಹಾಕಿಕೊಂಡಿದೆ ಎಂದು ಹಿರಿಯ ಪತ್ರಕರ್ತ ವೈಚಾರಿಕ ಚಿಂತಕ ಡಿ.ಉಮಾಪತಿ ಆತಂಕ ವ್ಯಕ್ತಪಡಿಸಿದರು.

    ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.ಆದಿವಾಸಿಗಳಿಂದಲೇ ಆದಿವಾಸಿಗಳನ್ನು ಕೊಲ್ಲಿಸುತ್ತಿರುವ ಕೋಮುವಾದಿ ಪಕ್ಷಗಳು ಅಲ್ಪಸಂಖ್ಯಾತರ ವಿರುದ್ದ ಹಿಂದುಗಳನ್ನು ಎತ್ತಿಕಟ್ಟಿ ದೇಶದಲ್ಲಿ ಅಶಾಂತಿಯನ್ನುಂಟು ಮಾಡುತ್ತಿವೆ. ಅನ್ಯಾಯವನ್ನು ಪ್ರಶ್ನಿಸುವವರನ್ನು ಹಿಂದು ವಿರೋಧಿಗಳು ಎನ್ನುವ ಹಣೆಪಟ್ಟಿ ಕಟ್ಟುತ್ತಿದ್ದಾರೆ.

     ಕಳೆದ ಐದು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಜನರ ಮಾತು ಆಲಿಸಿಕೊಳ್ಳದೆ ತನ್ನದೆ ಭಾವನೆಯನ್ನು ಮನ್‍ಕಿಬಾತ್ ಮೂಲಕ ವೈಭವೀಕರಿಸಿಕೊಳ್ಳುತ್ತಿರುವ ಮೋದಿ ಈಗ ಎರಡನೇ ಬಾರಿಗೆ ಮತ್ತೆ ದೇಶದ ಪ್ರಧಾನಿಯಾಗಿದ್ದಾರೆ. ನಮ್ಮ ಯೋಧರ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ 44 ಮಂದಿಯನ್ನು ಬಲಿತೆಗೆದುಕೊಂಡಿದ್ದರ ಪ್ರತೀಕಾರವಾಗಿ ಸರ್ಜಿಕಲ್ ಸ್ಟ್ರೈಕ್ ಮಾಡಿಸಿದ್ದೇನೆ ಎನ್ನುವುದನ್ನು ಚುನಾವಣಾ ಲಾಭಕ್ಕೆ ಬಳಸಿಕೊಂಡರು.

     ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿದ್ದಾಗಲೂ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ಇಷ್ಟೊಂದು ಪ್ರಚಾರ ಅವರು ತೆಗೆದುಕೊಳ್ಳಲಿಲ್ಲ. ಮತ್ತೊಂದು ವಿಶೇಷವೆಂದರೆ ಯಾರ ವಿರುದ್ದವೂ ಯಾರನ್ನು ಎತ್ತಿಕಟ್ಟಿ ದೇಶದ ಶಾಂತಿ ಕದಡಲಿಲ್ಲ ಎಂಬುದನ್ನು ನೆನಪಿಸಿದರು.

     ಬೆಸ್ತರ್‍ನಲ್ಲಿ ಹಿಡಬೆ ಎಂಬ ಬಾಲಕಿ ಮೇಲೆ ರಕ್ಷಣಾದಳದವರೆ ಅತ್ಯಾಚಾರ ನಡೆಸಿ ಹತ್ಯೆಗೈದಿದ್ದನ್ನು ಖಂಡಿಸಿ ಆದಿವಾಸಿಗಳು ಭಾರತದ ತ್ರಿವರ್ಣಧ್ವಜ ಹಿಡಿದು 150 ಕಿ.ಮೀ.ಪಾದಯಾತ್ರೆ ನಡೆಸುತ್ತಾರೆ. ಹತ್ಯೆಗೊಳಗಾದ ತಾಯಿ ಪಾದಯಾತ್ರೆಯ ನೇತೃತ್ವ ವಹಿಸಿದ್ದರು. ಆಗಲು ರಕ್ಷಣಾದಳದವರಿಂದ ಆದಿವಾಸಿಗಳ ಮೇಲೆ ಸಾಕಷ್ಟು ಹಿಂಸೆಯಾಗುತ್ತದೆ. ಆಗ ಅವರು ನಮಗೆ ನ್ಯಾಯ ನೀಡದ ತ್ರಿವರ್ಣಧ್ವಜವೇ ಬೇಡ ಎಂದು ಹಿಂದಿರುಗುತ್ತಾರೆ.

     ದೌರ್ಜನ್ಯ, ದಬ್ಬಾಳಿಕೆ. ಅನ್ಯಾಯವನ್ನು ಪ್ರಶ್ನೆ ಮಾಡುವಂತಿಲ್ಲ. ಬಾಯಿದ್ದವನು ಬರಗಾಲದಲ್ಲಯೂ ಬದುಕಿದ ಎನ್ನುವಂತಾಗಿದೆ ಇಂದಿನ ದೇಶದ ಪರಿಸ್ಥಿತಿ ಎಂದು ಸಂವಾದದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದರು.ಅಂಬೇಡ್ಕರ್‍ನನ್ನು ದಲಿತರು, ಬಸವಣ್ಣನನ್ನು ಲಿಂಗಾಯಿತರು, ಬುದ್ದನನ್ನು ಮತ್ತೊಬ್ಬರು ಹೀಗೆ ಒಬ್ಬೊಬ್ಬ ಮಹಾಪುರುಷನನ್ನು ಒಂದೊಂದು ಜಾತಿಗೆ ಕಟ್ಟಿಹಾಕಲಾಗಿದೆ. ಹಾಗಾಗಿ ಅಂಬೇಡ್ಕರ್, ಬಸವಣ್ಣನವರ ಸಮ ಸಮಾಜ ನಿರ್ಮಾಣ ಇನ್ನು ಕನಸಾಗಿಯೇ ಉಳಿದಿದೆ.

      ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳ ನೋವು, ಆಕ್ರಂದನವನ್ನು ಕೇಳಿಸಿಕೊಳ್ಳುವ ಜನಪ್ರತಿನಿಧಿಗಳು ಯಾರು ಇಲ್ಲ. ಅಂಬೇಡ್ಕರ್ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿಯೇ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿರುವುದು ಎಂದು ಬಿಜೆಪಿ., ಆರ್.ಎಸ್.ಎಸ್.ನವರು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಿದ್ದಾರೆ. ದೇಶ ಅಪಾಯದಲ್ಲಿದೆ. ಆಡಳಿತ ನಡೆಸುವ ಪಕ್ಷದ ತಪ್ಪುಗಳನ್ನು ಎತ್ತಿಹಿಡಿಯುವ ಮೂಲಕ ಶೋಷಣೆ, ದಬ್ಬಾಳಿಕೆಗೆ ಒಳಗಾಗದವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು.

     ಅದು ಆಗುತ್ತಿಲ್ಲ. ಇನ್ನಾದರೂ ಜನ ಎಚ್ಚೆತ್ತುಕೊಂಡು ಹೋರಾಡುವುದೊಂದೆ ಉಳಿದಿರುವ ದಾರಿ ಎಂದರು.ಅನ್ನದಾತ ರೈತ ಸಂಕಷ್ಟದಲ್ಲಿದ್ದಾನೆ, ಕುಡಿಯುವ ನೀರಿಗೆ ಸಮಸ್ಯೆಯಿದೆ. ಆಳುವ ಪಕ್ಷಗಳಿಗೆ ಇದ್ಯಾವುದು ಬೇಕಿಲ್ಲ. ಅಧಿಕಾರ ಉಳಿಸಿಕೊಳ್ಳುವುದರ ಕಡೆಯಷ್ಟೆ ಅವರ ಗಮನ. ವಾಟ್ಸ್‍ಪ್‍ನಲ್ಲಿ ಬಹುಬೇಗನೆ ಹರಿದಾಡುವ ಸುಳ್ಳುಸುದ್ದಿಗಳನ್ನು ಜನ ಬೇಗ ನಂಬಿ ಒಬ್ಬರ ಬಾಯಿಂದ ಒಬ್ಬರಿಗೆ ಹರಿದಾಡಿಸುತ್ತಿದ್ದಾರೆ. ವಾಟ್ಸ್‍ಪ್ ನಕಲಿ ಸುದ್ದಿಯ ಹಿಂದಿನ ಸತ್ಯ ತಿಳಿದುಕೊಳ್ಳುವುದು ಬಹಳ ಮುಖ್ಯ. ಒಟ್ಟಾರೆ ಸಾಮಾಜಿಕ ನ್ಯಾಯ ಎಲ್ಲರ ಕೈಗೆ ಸಿಗಬೇಕಾದರೆ ಹೋರಾಟವೊಂದೆ ಪರ್ಯಾಯ ಮಾರ್ಗ ಎಂದು ತಿಳಿಸಿದರು.

     ಪತ್ರಕರ್ತ ಕ.ಮ.ರವಿಶಂಕರ್, ವಾರ್ತಾ ಇಲಾಖೆ ನಿರ್ದೇಶಕ ಬೃಂಗೇಶ್, ಪತ್ರಕರ್ತ ನರೇನಹಳ್ಳಿ ಅರುಣ್‍ಕುಮಾರ್ ವೇದಿಕೆಯಲ್ಲಿದ್ದರು .ಮಾಧ್ಯಮದವರು, ಚಿಂತಕರು, ಬುದ್ದಿಜೀವಿಗಳು, ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap