ತುಮಕೂರು
ಜಿಲ್ಲೆಯಲ್ಲಿ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಪರಸ್ಪರ ಸಹಕಾರದೊಂದಿಗೆ ಅಧಿಕಾರಿಗಳು ಕೆಲಸ ನಿರ್ವಹಿಸದೇ ಒಬ್ಬರ ಮೇಲೆ ಒಬ್ಬರೂ ವಿನಾ ಕಾರಣ ಆರೋಪ ಮಾಡುವುದನ್ನು ನಿಲ್ಲಿಸಬೇಕು ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅಧಿಕಾರಿಗಳಿಗೆ ಎಚ್ಚರಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಕಂದಾಯ ಇಲಾಖೆ ವಿಷಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ರೈತರು ಎದುರಿಸುತ್ತಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಪ್ರತಿ ಗ್ರಾಮಗಳಿಗೂ ಡಿಸಿ, ಸಿಇಒಗಳು ಮೊದಲು ಖುದ್ದು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಂಡಾಗ ಮಾತ್ರ ಅದಕ್ಕೆ ಸರಿಯಾದ ಪರಿಹಾರ ನೀಡಲು ಸಾಧ್ಯ ಎಂದು ತಿಳಿಸಿದರು.
ಮಳೆ ಬಾರದ ಕಾರಣ ಯಾವ ಗ್ರಾಮದಲ್ಲಿಯೂ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಒಂದೊಂದು ಬೆಳೆಯು ಒಂದೊಂದು ಹವಾಗುಣವನ್ನು ಹೊಂದಿದೆ. ಆದ್ದರಿಂದ ಜುಲೈ ಮಾಹೆಯೊಳಗೆ ರಾಗಿ, ಮೆಕ್ಕೆಜೋಳ ಬಿತ್ತನೆ ಮಾಡಲಾಗುವುದು. ರೈತರಿಗೆ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಲಾಗುವುದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ ಸಭೆಗೆ ಮಾಹಿತಿ ನೀಡಿದರು.
ತಾಲೂಕು ಮಟ್ಟದಲ್ಲಿ ಜನಸಂದರ್ಶನ ಸಭೆಯನ್ನು ನಡೆಸಿ ಸ್ಥಳೀಯ ಶಾಸಕರನ್ನು ಸಂಪರ್ಕಿಸಿ ಅವರ ಸಲಹೆ ಸೂಚನೆಗಳನ್ನು ಪಡೆಯಬೇಕು. ಅಲ್ಲದೇ ಯಾವುದೇ ಕಾಮಗಾರಿಗಳನ್ನು ಅವರ ಗಮನಕ್ಕೆ ತಾರದೆ ಕೈಗೊಳ್ಳಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಒಟ್ಟು 500 ಬೋರ್‍ವೆಲ್‍ಗಳಿದ್ದು, ಅದರಲ್ಲಿ 350 ಸಫಲ, 150 ವಿಫಲವಾಗಿರುವ ಬಗ್ಗೆ ಸಭೆಗೆ ಸಿಇಒ ಮಾಹಿತಿ ನೀಡಿದರು. ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಕೂಡಲೇ ಪೈಪ್‍ಲೈನ್ ಸಂಪರ್ಕ ನೀಡಿ ರೈತರಿಗೆ ನೀರು ಪೂರೈಕೆ ಮಾಡುವಂತೆ ಸಚಿವರು ಸೂಚಿಸಿದರು.
ಎಸಿ, ತಹಶೀಲ್ದಾರ್‍ಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಮೀನುಗಳನ್ನು ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು. ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ, ಜಾನುವಾರು ಮೇವು, ಬರನಿರ್ವಹಣೆಗೆ ಸಂಬಂಧಿಸಿದಂತೆ ತಪ್ಪದೇ ಗ್ರಾಮಗಳಿಗೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು. ತಾವು ಗ್ರಾಮಗಳಿಗೆ ಭೇಟಿ ನೀಡಿರುವ ಬಗ್ಗೆ ಪ್ರತಿದಿನ ಡಿಸಿ, ಸಿಇಒಗಳಿಗೆ ತಪ್ಪದೇ ಮಾಹಿತಿ ಸಲ್ಲಿಸಬೇಕು.
ಸಭೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಶಿಕ್ಷಣ ಸಚಿವ ಎಸ್.ಆರ್ ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಶಾಸಕರಾದ ಗೌರಿಶಂಕರ್, ಮಾಧುಸ್ವಾಮಿ, ಬಿ.ಸಿ ನಾಗೇಶ್, ರಂಗನಾಥ್ ಮತ್ತಿತರ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.