ಆಡಳಿತ ನಡೆಸುವವರಿಗೆ ಇನ್ನೂ ಸಂವಿಧಾನ ಅರ್ಥವಾಗಿಲ್ಲ

ಚಿತ್ರದುರ್ಗ:

         ಮೀಸಲಾತಿ ದೇಶಕ್ಕೆ ಅವಶ್ಯಕತೆಯಿದೆ ಎಂಬುದನ್ನು ಸ್ವಾತಂತ್ರ ಪೂರ್ವದಲ್ಲಿಯೇ ಹೇಳಲಾಗಿತ್ತು. ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಾಗಿದ್ದರೂ ಇನ್ನು ಸಂವಿಧಾನವನ್ನು ಅರ್ಥ ಮಾಡಿಕೊಳ್ಳದೆ ಆಡಳಿತ ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

         ಜನಮುಖಿ ಕಲ್ಚರಲ್ ಸೋಷಿಯಲ್ ಸೇವಾ ಸಂಘದಿಂದ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್‍ರವರ 63 ನೇ ಸ್ಮರಣೋತ್ಸವ ಉದ್ಘಾಟಿಸಿ ಮಾತನಾಡಿದರು.ಸಂವಿಧಾನಶಿಲ್ಪಿ ಅಂಬೇಡ್ಕರ್‍ರವರು ಪ್ರತಿ ಕ್ಷೇತ್ರದಲ್ಲಿಯೂ ಮೀಸಲಾತಿಯನ್ನು ಒದಗಿಸಿದ್ದಾರೆ. ಬಡವರಿಗೆ ಇನ್ನು ವಸತಿ, ಶಿಕ್ಷಣ, ಶೌಚಾಲಯವಿಲ್ಲ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಶುದ್ದವಾದ ಕುಡಿಯುವ ನೀರು ಶೌಚಾಲಯ ಸೌಲಭ್ಯವಿಲ್ಲ. ದಲಿತರು, ಹಿಂದುಳಿದವರು, ಶೋಷಿತರಿಗೆ ಮೂಲಭೂತ ಸಮಸ್ಯೆಗಳ ನಿವಾರಣೆ ಕುರಿತು ಇನ್ನು ಚರ್ಚೆಯಾಗಿಲ್ಲ. ಸರ್ಕಾರಿ ಇಲಾಖೆಗಳಲ್ಲಿ ಮೀಸಲಿರುವ ಪರಿಶಿಷ್ಟರ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂಬ ನಿಯಮವಿದ್ದರೂ ಯಾವುದೂ ಅನುಷ್ಟಾನಗೊಳ್ಳುತ್ತಿಲ್ಲದಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಪರಿಕಲ್ಪನೆಗೆ ತಕ್ಕಂತೆ ಇನ್ನು ದಲಿತರು ಹಿಂದುಳಿದವರಿಗೆ ಮೂಲಸೌಲಭ್ಯ ತಲುಪಿಲ್ಲ.

         ಮುಖ್ಯಮಂತ್ರಿಗಳನ್ನು ಕೊಟ್ಟ ನಾಡು ಚಿತ್ರದುರ್ಗ ಜಿಲ್ಲೆಗೆ ನೀರಾವರಿ ಸೌಲಭ್ಯ ಜಾರಿಯಾಗದಿರುವುದು ಸೋಜಿಗ. ಹಾಸ್ಟೆಲ್, ಶಾಲೆ, ದಲಿತರ ಮನೆ, ಕಾಲೋನಿಗಳಲ್ಲಿ ಕುಡಿಯುವ ನೀರು ಪೂರೈಸಲು ಆಗುತ್ತಿಲ್ಲ. ಸಂವಿಧಾನದಡಿ ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳ ಮೇಲೆ ಚಾಟಿ ಬೀಸುವ ಕೆಲಸವಾಗಬೇಕು ಎಂದು ತಿಳಿಸಿದರು.

           ಸ್ಮರಣೋತ್ಸವದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಕೇವಲ ದಲಿತರಿಗಷ್ಟೆ ಸಂವಿಧಾನವನ್ನು ನೀಡಿಲ್ಲ. ದೇಶದ ಪ್ರತಿಯೊಬ್ಬರಿಗೂ ಸಂವಿಧಾನದಡಿ ರಕ್ಷಣೆಯಿದೆ. ನಾನು ಆರು ಬಾರಿ ಶಾಸಕನಾಗಿದ್ದೇನೆಂದರೆ ಸಂವಿಧಾನವೇ ಕಾರಣ ಎಂದು ಹೇಳಿದರು.

         ನಮ್ಮ ದೇಶದಲ್ಲಿರುವ ಬಲಿಷ್ಟವಾದ ಸಂವಿಧಾನ ಬೇರೆ ಯಾವ ರಾಷ್ಟ್ರದಲ್ಲಿಯೂ ಇಲ್ಲ. ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು ಸಿಗಬೇಕೆಂದು ಅಂಬೇಡ್ಕರ್‍ರವರು ಅಂದೆ ಪ್ರತಿಪಾದಿಸಿದ್ದರು. 1952 ರಲ್ಲಿ ಮೊದಲ ವಿಧಾನಸಭೆ ಹಾಗೂ ಪಾರ್ಲಿಮೆಂಟ್ ಚುನಾವಣೆ ನಡೆದಾಗ ಅಂಬೇಡ್ಕರ್ ವಿರುದ್ದ ಯಾರು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬಾರದು ಅವಿರೋಧವಾಗಿ ಆಯ್ಕೆ ಮಾಡಬೇಕೆಂದು ಎಲ್ಲಾ ಪಕ್ಷಗಳು ತೀರ್ಮಾನಿಸಿದಾಗ ನೆಹರುರವರು ಎದುರಾಳಿ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿ ಅಂಬೇಡ್ಕರ್‍ರವರನ್ನು ಸೋಲಿಸಿದರು. ಹಾಗಾಗಿ ಅಂಬೇಡ್ಕರ್‍ಗೆ ಅವಮಾನ ಮಾಡಿದ ಕಾಂಗ್ರೆಸ್ ಈಗ ಅಂಬೇಡ್ಕರ್ ನಮ್ಮವರು ಎಂದು ಹೇಳಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಟೀಕಿಸಿದರು.

          ಕಾಂಗ್ರೆಸ್ ಹುಟ್ಟಿದ್ದು, ಬ್ರಿಟೀಷರ ವಿರುದ್ದ ಹೋರಾಡುವುದಕ್ಕೆ. ಅದು ಪಕ್ಷವಲ್ಲ. ನೆಹರು ಕಾಂಗ್ರೆಸ್ ಪಕ್ಷವನ್ನು ಮನೆತನಕ್ಕೆ ಬಳಸಿಕೊಂಡು ಅಂಬೇಡ್ಕರ್‍ಗೆ ಅವಮಾನ ಮಾಡಿರುವುದು ದೇಶದ ದುರಂತ. ದೇಶಕ್ಕೆ ಸ್ವಾತಂತ್ರ ಸಿಕ್ಕು ಎಪ್ಪತ್ತು ವರ್ಷಗಳಾಗಿದ್ದರೂ ಇನ್ನು ಅಸ್ಪಶ್ಯತೆ ಜೀವಂತವಾಗಿದೆ. ಡಿ.ದೇವರಾಜ ಅರಸುರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಚಿವರಾಗಿದ್ದ ಬಸವಲಿಂಗಪ್ಪ ಮಲಹೊರುವ ಪದ್ದತಿಯನ್ನು ಜಾರಿಗೆ ತಂದರು. ಎಲ್ಲರಿಗೂ ಸಮಾನತೆ ಸಿಗುವತನಕ ಮೀಸಲಾತಿ ಈ ದೇಶಕ್ಕೆ ಬೇಕು ಎಂದರು.

           ಕಾಂಗ್ರೆಸ್ ಮುಖಂಡ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಮಾತನಾಡುತ್ತ ಅಂಬೇಡ್ಕರ್ ದೇಶಕ್ಕೆ ಸಂವಿಧಾನವನ್ನು ನೀಡದಿದ್ದರೆ ದಲತರು ಹಿಂದುಳಿದವರ ಪರಿಸ್ಥಿತಿ ಶೋಚನೀಯವಾಗಿರುತ್ತಿತ್ತು. ಸೈಮನ್ ಕಮೀಷನ್ ಮುಂದೆ ಅಂಬೇಡ್ಕರ್ ಹೋಗಿದ್ದಕ್ಕೆ ದೇಶದ್ರೋಹದ ಪಟ್ಟ ಕಟ್ಟಿದರು. ಬೇರೆ ಜಿಲ್ಲೆಯವರನ್ನು ಕರೆತಂದು ಇಲ್ಲಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಳ್ಳುವವರ ವಿರುದ್ದ ಎಚ್ಚರವಾಗಿರಬೇಕು. ಈ ಜಿಲ್ಲೆಯ ಮಾದಿಗರಿಗೆ ಅಧಿಕಾರ ಸಿಗಲಿ. ರಾಜಕೀಯ ಅಧಿಕಾರದ ಮುಖಾಂತರ ದಲಿತರ ಏಳಿಗೆಯಾಗಲಿ ಎಂದು ಹೇಳಿದರು.

           ಉಪನ್ಯಾಸಕ ಚಿತ್ರಲಿಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ವಿದೇಶ ಪ್ರವಾಸ ಮಾಡಿ ಸಾಕಷ್ಟು ಅಧ್ಯಯನ ನಡೆಸಿದ ನಂತರ ಅಂಬೇಡ್ಕರ್ ಸಂವಿಧಾನ ನೀಡಿ ಎಲ್ಲರ ರಕ್ಷಣೆಗೆ ಜೀವನವಿಡಿ ಹೋರಾಟ ನಡೆಸಿದ್ದಾರೆ ಎಂದು ಅಂಬೇಡ್ಕರ್‍ರವರ ಕೊಡುಗೆಯನ್ನು ಸ್ಮರಿಸಿದರು.

          ಡಿ.ಓ.ಮುರಾರ್ಜಿ, ಎಂ.ಕೆ.ಹಟ್ಟಿ ಗ್ರಾ.ಪಂ.ಮಾಜಿ ಅಧ್ಯಕ್ಷೆ ಸುಶೀಲಮ್ಮ, ನಿವೃತ್ತ ಪ್ರಾಂಶುಪಾಲರಾದ ಶಿವಕುಮಾರ್, ನರಸಿಂಹರೆಡ್ಡಿ ವೇದಿಕೆಯಲ್ಲಿದ್ದರು.ಲಿಂಗರಾಜ್ ಪ್ರಾರ್ಥಿಸಿದರು. ಹನುಮಂತಪ್ಪ ಸ್ವಾಗತಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap