ಆದಾಯ ವೃದ್ಧಿಗೆ ಕೃಷಿ ಜತೆ ಉಪಕಸುಬು ಕೈಗೊಳ್ಳಿ:ಶರಣಪ್ಪ ಮುದಗಲ್

ದಾವಣಗೆರೆ :

      ಲಭ್ಯವಿರುವ ಜಮೀನಿನಲ್ಲೇ ರೈತರು ಆದಾಯ ಹೆಚ್ಚಿಸಿಕೊಳ್ಳಬೇಕಾದರೆ ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆಯಂತಹ ಉಪಕಸುಬುಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಕರೆ ನೀಡಿದರು.

     ನಗರದ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ಮಹಿಳೆ ದಿನಾಚರಣೆಯ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಔಷಧಿ ಸಸ್ಯ, ತಾರಸಿ ಕೈತೋಟ ಹಾಗೂ ಮನೆ ಮದ್ದು ಬಗ್ಗೆ ತಜ್ಞರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರ ಸಿರಿಧಾನ್ಯ ಬೆಳೆಯಲು ಹೆಚ್ಚಿನ ಉತ್ತೇಜನ ನೀಡುತ್ತಿದೆ. ಹೀಗಾಗಿ ಅದರ ಬಳಕೆ ಮಟ್ಟವೂ ಹೆಚ್ಚಾಗಬೇಕಾಗಿದೆ. ಕುಟುಂಬ ಹಾಗೂ ಭೂಮಿಯ ಆರೋಗ್ಯಕ್ಕಾಗಿ ಕನಿಷ್ಟ ಮನೆಗೊಂದು ಹಸು ಸಾಕಬೇಕು ಎಂದು ಅವರು ಸಲಹೆ ನೀಡಿದರು.

     ರೈತರ ಆದಾಯ ದ್ವಿಗುಣಗೊಳಿಸುವ ಕೇಂದ್ರ ಸರ್ಕಾರದ ಯೋಜನೆಯು ಸಾಕಾರಗೊಳ್ಳಬೇಕಾದರೆ, ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ರೈತರೇ ದೇಶದ ಬೆನ್ನೆಲುಬು ಎಂಬುದು ಸರ್ವಕಾಲಿಕ ಸತ್ಯವಾvದೆ. ಆದರೆ, ಕೃಷಿಗೆ ಬೆನ್ನೆಲುಬು ಮಹಿಳೆ ಎಂಬುದನ್ನು ಯಾರೂ ಅಲ್ಲಗಳೆಯಲಾರರು ಎಂದರು.

    ಕೃಷಿ ಕ್ಷೇತ್ರದಲ್ಲಿ ಶೇ.70ಕ್ಕೂ ಹೆಚ್ಚಯ ಮಹಿಳೆಯರ ಪಾತ್ರವಿದೆ. ಬಿತ್ತನೆ ಕಾರ್ಯದಿಂದ ಹಿಡಿದು ಕಟಾವಿನ ವರೆಗೆ ಎಲ್ಲ ಹಂತದಲ್ಲೂ ಮಹಿಳೆಯರ ತೊಡಗಿಸಿಕೊಳ್ಳುವಿಕೆ ಸಾಕಷ್ಟಿದೆ. ಆದ್ದರಿಂದ ರೈತರ ಆದಾಯ ದ್ವಿಗುಣಗೊಳಿಸುವ ಪ್ರಕ್ರಿಯೆಯಲ್ಲಿ ಕೃಷಿ ಮಹಿಳೆಯರನ್ನು ಕಡೆಗಣಿಸುವಂತಿಲ್ಲ. ಮಹಿಳೆ ಮನಸ್ಸು ಮಾಡಿದರೆ ಆದಾಯ ಸುಧಾರಿಸಲು ಸಾಧ್ಯವಿದೆ. ಈ ದಿಸೆಯಲ್ಲಿ ಮಹಿಳೆಯರು ಗಟ್ಟಿ ಹೆಜ್ಜೆ ಇಡಬೇಕು ಎಂದು ಕಿವಿಮಾತು ಹೇಳಿದರು.

     ಪಾಲಿಕೆ ಸದಸ್ಯೆ ವೀಣಾ ನಂಜಪ್ಪ ಮಾತನಾಡಿ, ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಅದರಂತೆ ಕೃಷಿಯಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದರೂ ಅದು ಬೆಳಕಿಗೆ ಬರುತ್ತಿಲ್ಲ ಎಂದು ವಿಷಾದಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಟಿ.ಎನ್.ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶಾದ್ಯಂತ 700ಕ್ಕೂ ಅಧಿಕ ಐಸಿಎಆರ್ ಕೇಂದ್ರಗಳಲ್ಲಿ ಇಂದು ಕೃಷಿಯಲ್ಲಿ ಮಹಿಳೆ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾನವ ಒಂದೆಡೆ ನೆಲೆ ನಿಂತು ಕೃಷಿ ಕೈಗೊಳ್ಳಲು ಮಹಿಳೆಯರೇ ಪ್ರೇರಣೆಯಾಗಿದ್ದಾರೆ. ಆದ್ದರಿಂದ ರೈತರ ಆದಾಯ ದ್ವಿಗುಣಗೊಳಿಸುವಲ್ಲಿ ಕೃಷಿ ಮಹಿಳೆಯರ ಶಕ್ತಿ ಸದ್ಬಳಕೆಯಾಗಬೇಕು ಎಂದರು.

     ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಡಾ.ಕೆ.ಎಂ.ಚಂದ್ರಶೇಖರ, ಎಂ.ಜಿ.ಬಸವನಗೌಡ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಸಾಧಕ ಹಿರಿಯ ರೈತ ಮಹಿಳೆಯರಾದ ಹರಪನಹಳ್ಳಿ ತಾಲೂಕು ಅನಂತನಹಳ್ಳಿಯ ಗೋಣೆಮ್ಮ, ಚನ್ನಗರಿ ತಾಲೂಕು ಕತ್ತಲಗೆರೆಯ ವಸಂತಮ್ಮ, ಹರಿಹರ ತಾಲೂಕು ಕುಂಬಳೂರು ಗ್ರಾಮದ ಮಲ್ಲಮ್ಮ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

     ಕಾರ್ಯಕ್ರಮದಲ್ಲಿ ಲೂಧಿಯಾನದ ಅಟಾರಿ ನಿವೃತ್ತ ನಿರ್ದೇಶಕ ಡಾ.ಎಸ್.ಪ್ರಭುಕುಮಾರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಹಂಸವೇಣಿ, ಆರ್.ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು ಮಾಲತೇಶ ಪುಟ್ಟಣ್ಣನವರ್ ಸ್ವಾಗತಿಸಿದರು . ಜೆ.ರಘುರಾಜ ಕಾರ್ಯಕ್ರಮ ನಿರೂಪಿಸಿದರು. ಹೆಚ್.ಎಂ.ಸಣ್ಣಗೌಡ್ರು ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link