ತುಮಕೂರು
ಎಸಿಬಿ ದಾಳಿಯಲ್ಲಿ ಜೈಲು ಪಾಲಾಗಿದ್ದ ತುಮಕೂರು ಮಹಾನಗರ ಪಾಲಿಕೆ ಎಇಇ ಮರಿಯಪ್ಪ ಎಂಬುವವರು ಜೈಲಿನಿಂದ ಜಾಮೀನಿನ ಮೇಲೆ ಹೊರಬಂದು ಮತ್ತೆ ಸರ್ಕಾರಿ ನೌಕರಿ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಪುಟ್ಟರಾಜು ಆರೋಪಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತವನ್ನು ನಿಷ್ಕ್ರಿಯಗೊಳಿಸಿ ಎಸಿಬಿ ಮಾಡಿರುವುದು ಸರಿಯಿಲ್ಲ. ಎಸಿಬಿಯು ಸರ್ಕಾರದ ಕೈಗೊಂಬೆಯಂತಾಗಿದೆ. ಇದರಿಂದ ಭ್ರಷ್ಟ ಅಧಿಕಾರಿಗಳನ್ನು ಹಾಗೂ ಭ್ರಷ್ಟ ರಾಜಕಾರಣಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸದರಲ್ಲದೆ, ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಜಗದೀಶ್ ಎಂಬುವವರಿಂದ ಮಹಾನಗರ ಪಾಲಿಕೆ ಸಹಾಯಕ ಎಂಜಿನಿಯರ್ ಮರಿಯಪ್ಪ ಎಂಬುವವರು 10 ಸಾವಿರ ರೂ.ಗಳ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದು, ಅವರನ್ನು 10-12 ದಿನಗಳ ಕಾಲ ಜಿಲ್ಲಾ ಕಾರಾಗೃಹದಲ್ಲಿದ್ದರು. ನಂತರ ಜಾಮೀನು ಪಡೆದು ಹೊರ ಬಂದಿದ್ದಾರೆ ಎಂದು ತಿಳಿಸಿದರು.
ಕಾನೂನಿನ ಪ್ರಕಾರ ಯಾವುದೇ ಸರ್ಕಾರಿ ನೌಕರ ಕ್ರಿಮಿನಲ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 48 ಗಂಟೆಗಳ ಕಾಲ ಕಾರಾಗೃಹ ವಾಸ ಅನುಭವಿಸಿದರೆ ಅಂತಹ ನೌಕರನನ್ನು ಎಸಿಬಿ ಇಲಾಖೆಯು ಅನುಮತಿ ನೀಡುವವರೆಗೂ ಆತನನ್ನು ಅಮಾನತ್ತಿನಲ್ಲಿಡಬೇಕು ಅಥವಾ ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಬೇಕು. ಆದರೆ ಮರಿಯಪ್ಪನವರು ಜೈಲಿನಿಂದ ಹೊರಬಂದ ಕೂಡಲೇ ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಅಮಾನತ್ತಿನಲ್ಲಿಡದೆ ಭ್ರಷ್ಟಾಚಾರದಲ್ಲಿ ತೊಡಗಿದ್ದರೂ ರಾಜಕಾರಣಿಗಳ ಬೆಂಬಲದಿಂದ ಆತನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಯಾವುದೇ ರಾಜಕಾರಣಿಗಳ ಬೆಂಬಲ ಇಲ್ಲದವರ ಮೇಲೆ, ಕೆಳ ಮಟ್ಟದ ಅಧಿಕಾರಿಗಳನ್ನ ಮಾತ್ರ ಅಮಾನತ್ತಿನಲ್ಲಿಡಬೇಕಾದ ಎಸಿಬಿ ಅಧಿಕಾರಿಗಳ ವರ್ಚಸ್ಸು ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಎಸಿಬಿ ಮೇಲಿನ ವಿಶ್ವಾಸ ಕಳೆದು ಹೋಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಎಇಇ ಮರಿಯಪ್ಪರವರ ಮೇಲೆ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಎಸಿಬಿ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಪಾಂಡುರಂಗಯ್ಯ, ಶ್ರೀನಿವಾಸ್, ರಾಜಣ್ಣ, ಜಯಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
