ಚಿತ್ರದುರ್ಗ :
ದೇವಸ್ಥಾನದ ಅಭಿವೃದ್ಧಿಗಿಂತಲೂ ಈಗ ಮುಖ್ಯವಾಗಿ ಆಗಬೇಕಿರುವುದು ಈ ಬೆಟ್ಟಸಾಲುಗಳ ಅಭಿವೃದ್ಧಿ. ಆ ಬೆಟ್ಟಸಾಲುಗಳ ಅಭಿವೃದ್ಧಿಗೆ ಬೀಜದ ಉಂಡೆಗಳನ್ನು ಹಾಕಲು ನಾವು ಸಿದ್ಧ. ಸುತ್ತಮುತ್ತಲಿರುವ ಕೆರೆ ಕೊಳ್ಳಗಳಿಗೆ ನೀರು ತುಂಬಿಸುವ ಕಾರ್ಯಕ್ಕೂ ಸಿದ್ಧ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಚಿತ್ರದುರ್ಗ ತಾ| ಸೊಂಡೇಕೊಳ ಗ್ರಾಮದಲ್ಲಿರುವ 2ನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದ ಶ್ರೀ ಪಿಟ್ಟಿಗೇರಿ ಬಸವಲಿಂಗೇಶ್ವರ ಸ್ವಾಮಿಯ ಪುನರ್‍ನಿರ್ಮಾಣ ದೇವಸ್ಥಾನದ ಉದ್ಘಾಟನೆ ಮತ್ತು ಕಳಸಾರೋಹಣ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.
ಸೊಂಡೇಕೊಳ ಮತ್ತು ಇಲ್ಲಿರುವ ಹಲವು ಹಳ್ಳಿಗಳನ್ನು ಬೆಟ್ಟದಸಾಲು ರಕ್ಷಿಸಿದೆ. ಆ ಬೆಟ್ಟದಸಾಲು ಗ್ರಾಮಗಳನ್ನು ಸಮೃದ್ಧಿಗೊಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಹಾಗಾಗಿ ನಾವು ನೀವು ಎಲ್ಲರೂ ಸೇರಿ ಬೀಜದುಂಡೆಗಳನ್ನು ಹಾಕಿ ಬೆಟ್ಟದಸಾಲುಗಳನ್ನು ಹಸಿರಾಗಿಡುವ ಪ್ರಯತ್ನ ಮಾಡೋಣ. ಆಗ ನಮ್ಮ ಬದುಕೂ ಹಸಿರಾಗಲು ಪ್ರಾರಂಭವಾಗುತ್ತದೆ. ಪರಿಸರವನ್ನು ನಾವು ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆ.
ಹಾಗಾಗಿ ಪರಿಸರವನ್ನು ಈಗಾಗಲೇ ನಾವು ನಿರ್ಲಕ್ಷಿಸಿ ಬೆಳೆದು ನಿಂತ ಫಲ ಕೊಡುವ ತೋಟಗಳನ್ನು ಮತ್ತು ಕುಡಿಯುವ ನೀರನ್ನು ಕಳೆದುಕೊಳ್ಳುತ್ತಿದ್ದೇವೆ. ಅಷ್ಟೇ ಅಲ್ಲ ಈ ಭಾಗದ ಕೆರೆಕೊಳ್ಳಗಳ ನೀರಿನ ಬಲವರ್ಧನೆಗೆ ನಿಮ್ಮೆಲ್ಲರ ಪರವಾಗಿ ಸರ್ಕಾರದ ಮುಂದೆ ನಿಂತು ಹೋರಾಟ ಮಾಡಿ ಅಭಿವೃದ್ಧಿಗೊಳಿಸುವುದಾಗಿ ಶರಣರು ಹೇಳಿದರು. ವಾಣಿವಿಲಾಸ ನೀರಿನ ಅಂಗಳವನ್ನು ತುಂಬಿಸುವ ಕಾರ್ಯ ತುರ್ತು ಆಗಬೇಕಿದೆ. ಅದಕ್ಕಾಗಿ ವೇದಾವತಿ ನದಿ ಪಾತ್ರದ ಅಭಿವೃದ್ಧಿಗೆ ಈಗಾಗಲೇ ನಾವು ಪ್ರಯತ್ನಿಸುತ್ತಿರುವುದಾಗಿ ಮುರುಘಾ ಶರಣರು ಹೇಳಿದರು.
ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಓಂಕಾರೇಶ್ವರ ಮಠ, ಮುಸ್ಟೂರು ಇವರು ವೇದಿಕೆಯಲ್ಲಿದ್ದರು. ದಾವಣಗೆರೆಯ ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ್ ದೇವಸ್ಥಾನದ ಮತ್ತು ಊರಿನ ಐತಿಹಾಸಿಕ ವಿಚಾರಗಳ ಪರಿಚಯದ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸೊಂಡೇಕೊಳ ಮತ್ತು ಸುತ್ತಮುತ್ತಲಿನ ಗ್ರಾಮಗಳ ಹಲವಾರು ಭಕ್ತರು ಸ್ವಾಮಿಗಳಿಗೆ ಭಕ್ತಿ ಸಮರ್ಪಿಸಿ ಗೌರವಿಸಿದರು.
ಪಿ.ಓಂಕಾರಪ್ಪ, ವಿಶ್ವನಾಥಪ್ಪ, ಕೆಂಚವೀರಪ್ಪ, ರವಿಶಂಕರ್, ಚಂದ್ರಶೇಖರ್, ಶ್ರೀನಿವಾಸ್ ಎನ್.ಜಿ., ಮಹೇಶ್ವರಪ್ಪ, ಎ.ಎಂ.ರುದ್ರಪ್ಪ, ಕಲ್ಲಪ್ಪ, ಅಲಗಪ್ಪ, ಶಿವಮೂರ್ತಿ, ವೀರಭದ್ರಪ್ಪ, ಧರಣೇಂದ್ರಪ್ಪ, ರುದ್ರಮ್ಮ, ಪರಮೇಶ್ವರಪ್ಪ ಮತ್ತಿತರರಿದ್ದರು.
ಕೃಷ್ಣಮೂರ್ತಿ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಧನಂಜಯ ನಿರೂಪಿಸಿದರು.