ಬೆಂಗಳೂರು
ಸಂಕ್ರಾಂತಿ ಬಳಿಕ ಖಾಲಿ ಉಳಿದಿರುವ ಎರಡು ಸಚಿವ ಸ್ಥಾನ ಭರ್ತಿ ಮತ್ತು ನಿಗಮ ಮಂಡಳಿಗಳ ನೇಮಕಾತಿ ಮಾಡಲಾಗುವುದು ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಶಾಸಕರಿಗೆ ಭರವಸೆ ನೀಡಿದ್ದಾರೆ.
ಖಾಸಗಿ ಹೋಟೇಲಿನಲ್ಲಿ ನಡೆದ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ, ಲೋಕಸಭಾ ಚುನಾವಣಾ ತಯಾರಿ, ಸೀಟು ಹಂಚಿಕೆ, ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ, ಸಂಸದೀಯ, ರಾಜಕೀಯ ಕಾರ್ಯದರ್ಶಿಗಳ ನೇಮಕಾತಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿ ಮಹತ್ವದ ಚರ್ಚೆ ನಡೆಯಿತು.
ಪಕ್ಷಕ್ಕೆ ದುಡಿದಿರುವವರಿಗೆ ಅವಕಾಶ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶಾಸಕರು ನಿಗಮ-ಮಂಡಳಿ ಹುದ್ದೆಗಳಿಗೆ ಬೇಡಿಕೆ ಇಡಬಾರದು. ಲೋಕಸಭಾ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆ, ಚುನಾವಣಾ ತಯಾರಿ, ಸ್ಥಳೀಯ ಮಟ್ಟದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಹೀಗಾಗಿ ಮಾಜಿ ಶಾಸಕರಿಗೆ ಅಧಿಕಾರ ನೀಡಿದರೆ ಪಕ್ಷಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ದೇವೇಗೌಡರು ಹಾಲಿ ಶಾಸಕರ ಮನವೊಲಿಸಿದ್ದಾರೆಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ರಾಜಕೀಯ ಅಧಿಕಾರಕ್ಕೆ ಬದಲಾಗಿ ಶಾಸಕರುಗಳ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಮತ್ತು ಹೆಚ್ಚುವರಿ ಯೋಜನೆಗಳನ್ನು ನೀಡುವ ಮೂಲಕ ನಿಮ್ಮೆಲ್ಲರ ಹಿತ ಕಾಯಲು ಪಕ್ಷ ಬದ್ದವಾಗಿದೆ ಎಂದು ದೇವೇಗೌಡರು ಶಾಸಕರಿಗೆ ತಿಳಿಸಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಒಂದಷ್ಟು ಗೊಂದಲಗಳು,ಅಸಮಾಧಾನಗಳು ಪಕ್ಷಗಳಲ್ಲಿ ಇರುತ್ತವೆ. ಆ ಬಗ್ಗೆ ವರಿಷ್ಠರು,ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ನಾಯಕರು ಕುಳಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ.ಶಾಸಕರು ಮಧ್ಯ ಪ್ರವೇಶಿಸಿ ಹೇಳಿಕೆಗಳನ್ನು ನೀಡಬಾರದು .ಗೊಂದಲಗಳನ್ನು ಸೃಷ್ಠಿಸುವ ಯತ್ನಕ್ಕೆ ಸಹಕಾರ ನೀಡದಿರಿ ಎಂದು ಅವರು ಕಿವಿ ಮಾತು ಹೇಳಿದ್ದಾರೆ.
ಲೋಕಸಭಾ ಚುನಾವಣೆ ಸೀಟು ಹಂಚಿಕೆ ಸಂಬಂಧ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಮಾತುಕತೆ ಮಾಡುವುದು ಬೇಡ. ರಾಷ್ಟ್ರೀಯ ಅಧ್ಯಕ್ಷರೊಂದಿಗೆ ನೇರವಾಗಿ ಚರ್ಚಸಿ ಅಂತಿಮಗೊಳಿಸುವಂತೆ ಶಾಸಕರು ಹಚ್.ಡಿ.ದೇವೇಗೌಡ ಹಾಗು ಕುಮಾರಸ್ವಾಮಿ ಅವರಿಗೆ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.
ಮೈಸೂರು, ಮಂಡ್ಯ, ಹಾಸನ, ಚಿತ್ರದುರ್ಗ, ಬೆಂಗಳೂರು ಉತ್ತರ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು 12 ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡುವಂತೆ ರಾಹುಲ್ ಗಾಂಧಿ ಮೇಲೆ ಒತ್ತಡ ಹೇರುವಂತೆ ಶಾಸಕರಿಂದ ಆಗ್ರಹ ಕೇಳಿ ಬಂದಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.