ಚಿತ್ರದುರ್ಗ :ಮತ್ತೆ 6 ಮಂದಿಗೆ ಕೊರೋನಾ ಸೋಂಕು ದೃಢ

ಚಿತ್ರದುರ್ಗ
     ಚಳ್ಳಕೆರೆಯ ಆದರ್ಶ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗಿದ್ದ ಉತ್ತರ ಪ್ರದೇಶ ರಾಜ್ಯ ಮೂಲದ 06 ಜನರಲ್ಲಿ ಕೋವಿಡ್-19 ವೈರಸ್ ಸೋಂಕು ಇರುವುದು ಗುರುವಾರದ ವರದಿಯಲ್ಲಿ ದೃಢಪಟ್ಟಿದೆ.  ಇದರಿಂದಾಗಿ ಜಿಲ್ಲೆಯಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 37 ಕ್ಕೆ ಏರಿದೆ.  ಸೋಂಕಿತರ  ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು,  ಇವರೆಲ್ಲರೂ ತಮಿಳುನಾಡಿನಿಂದ ಉತ್ತರಪ್ರದೇಶಕ್ಕೆ ಹೋಗುವ ಪ್ರಯಾಣಿಕರಾಗಿದ್ದು,  ಇವರು ಯಾರೂ ಕೂಡ ಚಿತ್ರದುರ್ಗ ಜಿಲ್ಲೆಯವರಲ್ಲ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.
     
      ತಮಿಳುನಾಡು ರಾಜ್ಯದ ಚೆನ್ನೈನಿಂದ ಉತ್ತರ ಪ್ರದೇಶ ರಾಜ್ಯದ 59 ಜನ ಕಾರ್ಮಿಕರು ತಮ್ಮ ಸ್ವಂತ ಊರಿಗೆ ತೆರಳುವ ಸಲುವಾಗಿ ಈಚರ್ ವಾಹನದಲ್ಲಿ ಪ್ರಯಾಣಿಸುವಾಗ ಮೇ. 15 ರಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಗಡಿಯಲ್ಲಿನ ನಾಗಪ್ಪನಹಳ್ಳಿ ಗೇಟ್ ಚೆಕ್‍ಪೋಸ್ಟ್ ನಲ್ಲಿ ಸಿಕ್ಕಿಬಿದ್ದಿದ್ದರು.  ಯಾವುದೇ ಅನುಮತಿ ಪತ್ರವಿಲ್ಲದೆ ಇವರು ಪ್ರಯಾಣ ಬೆಳೆಸಿರುವುದು ಕಂಡುಬಂದು, ವಾಹನ ಚಾಲಕನ ಸಮೇತ ಎಲ್ಲರನ್ನು ಚಳ್ಳಕೆರೆಯ ಪಾವಗಡ ರಸ್ತೆಯಲ್ಲಿನ ಆದರ್ಶ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. 
 
      ಈ ಪೈಕಿ ಮೇ. 22 ರಂದು ವಾಹನ ಚಾಲಕನಿಗೆ ಸೋಂಕು ದೃಢಪಟ್ಟ ಬಳಿಕ ಎಲ್ಲ 58 ಜನರನ್ನೂ ಪ್ರಾಥಮಿಕ ಸಂಪರ್ಕಿತರು ಎಂದು ಪರಿಗಣಿಸಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಮುಂದುವರೆಸಿ,  ಇವರೆಲ್ಲರ ಗಂಟಲುದ್ರವ ಹಾಗೂ ನ್ಯಾಸೋಫೆರಾಂಜಲ್ ಸ್ವಾಬ್ ಮಾದರಿಯನ್ನು ಸಂಗ್ರಹಿಸಿ ಮೇ. 22 ರಂದು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ನಂತರ ಇದೇ ಗುಂಪಿಗೆ ಸೇರಿದ 20 ಜನರಿಗೆ ಕೋವಿಡ್-19 ಸೋಂಕು ಇರುವುದು ಮೇ. 26 ರಂದು ದೃಢಪಟ್ಟಿತ್ತು. 
 
      ಇದೀಗ ಇದೇ ಗುಂಪಿಗೆ ಸೇರಿದ 05 ಜನರಲ್ಲಿ ಕೋವಿಡ್ ಸೋಂಕು ಇರುವುದು ಗುರುವಾರದ ವರದಿಯಲ್ಲಿ ದೃಢಪಟ್ಟಿದೆ.  ಸೋಂಕಿತರ ವಿವರ ಇಂತಿದೆ.  15 ವರ್ಷದ ಪುರುಷ ಪಿ-2452.  36 ವರ್ಷದ ಪುರುಷ ಪಿ-2453.  19 ವರ್ಷದ ಪುರುಷ ಪಿ-2454.  21 ವರ್ಷದ ಪುರುಷ ಪಿ-2456.  24 ವರ್ಷದ ಪುರುಷ ಪಿ-2456.  25 ವರ್ಷದ ಪುರುಷ ಪಿ-2457.
     
       ಸೋಂಕಿತರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಇವರನ್ನು ಬಿಸಿಎಂ ಹಾಸ್ಟೆಲ್‍ನ ಕೋವಿಡ್ ಕೇರ್ ಸೆಂಟರ್‍ನಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯದೊಂದಿಗೆ ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ.  ಸೋಂಕಿತರ ಸಂಪರ್ಕಕ್ಕೆ ಬಂದ ಪ್ರಾಥಮಿಕ ಮತ್ತು ದ್ವಿತೀಯ ಹಂತದ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸೊಂಕಿತರ ಸಂಖ್ಯೆ 37ಕ್ಕೆ ಏರಿಕೆ
       ಜಿಲ್ಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗಿದ್ದ ಉತ್ತರ ಪ್ರದೇಶದ ಕಾರ್ಮಿಕರ ಪೈಕಿ ಮೇ. 28 ರಂದು 06 ಜನರಲ್ಲಿ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ.  ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ 37 ಕ್ಕೆ ಏರಿದಂತಾಗಿದೆ.  
     
      ಒಟ್ಟು 37 ಪಾಸಿಟೀವ್ ಪ್ರಕರಣಗಳ ಪೈಕಿ 05 ಜನ ಈಗಾಗಲೆ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದು, 05 ಜನ ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಲ್ಲಿ  ಹಾಗೂ ಒಬ್ಬರು ಉಡುಪಿ ಜಿಲ್ಲೆ ಮಣಿಪಾಲ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  26 ಜನರನ್ನು ಚಳ್ಳಕೆರೆ ನಗರದ ಬಿಸಿಎಂ ಹಾಸ್ಟೆಲ್‍ನಲ್ಲಿ ವೈದ್ಯಕೀಯ ಸೌಲಭ್ಯದೊಂದಿಗೆ ಪ್ರತ್ಯೇಕವಾಗಿ ಇರಿಸಲಾಗಿದೆ.  ಮೇ. 28 ರಂದು ಒಟ್ಟು 99 ಜನರ ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.  ಇದುವರೆಗೂ 3039 ಶಂಕಿತರ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದು ಈ ಪೈಕಿ ಈವರೆಗೆ 2756 ಜನರ ವರದಿ ನೆಗಟೀವ್ ಎಂದು  ವರದಿಯಾಗಿದೆ.  185 ಜನರ ಪರೀಕ್ಷಾ ವರದಿ ಬರುವುದು ಬಾಕಿ ಇದೆ.
 
     ಈವರೆಗೆ ಜಿಲ್ಲೆಯಲ್ಲಿ 310 ಜನರು 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. ಸದ್ಯ ಹೊರ ಜಿಲ್ಲೆ, ಹೊರ ರಾಜ್ಯದಿಂದ ಬಂದವರು ಹಾಗೂ ಶಂಕಿತರ ಸಂಪರ್ಕ ಹಿನ್ನೆಲೆ ಹೊಂದಿರುವ 4340 ಜನರನ್ನು ಹೋಂ ಕ್ವಾರಂಟೈನ್ ನಿಗಾನಲ್ಲಿ ಇರಿಸಲಾಗಿದೆ.  ನಿಗದಿತ ಸಾಂಸ್ಥಿಕ ಕ್ವಾರಂಟೈನ್ ಸೌಲಭ್ಯದಲ್ಲಿ ಸದ್ಯ 79 ಜನರು ಇದ್ದು, 415 ಜನರನ್ನು ಸೌಲಭ್ಯ ಆಧಾರಿತ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. 
 
     740 ಜನರಿಗೆ ಮೇ. 28 ರಂದು ಸ್ಕ್ರೀನಿಂಗ್ ಮಾಡಲಾಗಿದ್ದು,  ಇದುವರೆಗೂ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಈ ಜಿಲ್ಲೆಗೆ ಆಗಮಿಸಿದ  253879 ಜನರಿಗೆ ಸ್ಕ್ರೀನಿಂಗ್ ಮಾಡಲಾಗಿದೆ.  ಮೇ. 28 ರಂದು ಫಿವರ್ ಕ್ಲಿನಿಕ್‍ಗಳಲ್ಲಿ 253 ಜನರಿಗೆ ಜ್ವರ ತಪಾಸಣೆ ಮಾಡಿದ್ದು, ಇದುವರೆಗೂ ಜಿಲ್ಲೆಯಲ್ಲಿ ಫಿವರ್ ಕ್ಲಿನಿಕ್‍ನಲ್ಲಿ ಒಟ್ಟು 16529 ಜನರಿಗೆ ಜ್ವರ ತಪಾಸಣೆ ಮಾಡಲಾಗಿದೆ.  ಜಿಲ್ಲೆಯಲ್ಲಿ 84 ಜನರಿಗೆ ಮಾನಸಿಕ ಆರೋಗ್ಯ ಕುರಿತು ಆಪ್ತ ಸಮಾಲೋಚನೆ ಮಾಡಲಾಗಿದ್ದು, ಈವರೆಗೆ 705 ಜನರಿಗೆ ಮಾನಸಿಕ ಆರೋಗ್ಯ ತಜ್ಞರಿಂದ ಮೂರ್ನಾಲ್ಕು ದಿನಗಳಿಗೊಮ್ಮೆ ಆಪ್ತ ಸಮಾಲೋಚನೆ ಮಾಡಿಸಲಾಗಿದೆ.  ಉಸಿರಾಟದ ತೊಂದರೆ, ತೀವ್ರ ಜ್ವರ ನಂತಹ ಆರೋಗ್ಯ ಸಮಸ್ಯೆ ಹೊಂದಿರುವ 21 ಜನರಿಗೆ ಸ್ಕ್ರೀನಿಂಗ್ ಮಾಡಿದ್ದು, ಇದುವರೆಗೆ ಇಂತಹ 1564 ರೋಗಿಗಳಿಗೆ ತಪಾಸಣೆ ಮಾಡಲಾಗಿದೆ.
     ಜಿಲ್ಲೆಯಲ್ಲಿ ಮೇ. 31 ರವರೆಗೆ ಕೆಲವು ಸಡಿಲಿಕೆಯೊಂದಿಗೆ ಲಾಕ್‍ಡೌನ್ ಮುಂದುವರೆಸಲಾಗಿದ್ದು, ರಾತ್ರಿ 07 ರಿಂದ ಬೆಳಿಗೆ 07 ಗಂಟೆಯವರೆಗೆ ಕಫ್ರ್ಯೂ ಜಾರಿಯಲ್ಲಿರುತ್ತದೆ.  ಯಾವುದೇ ಆರೋಗ್ಯ ಮಾಹಿತಿಗೆ 104 ಅಥವಾ 08194-1077 ಸಂಖ್ಯೆಗೆ ಅಥವಾ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಂಪರ್ಕಿಸಬೇಕು.  ಇದರ ಜೊತೆಗೆ ಕೋವಿಡ್ ವಾರ್ ರೂಂ ಸ್ಥಾಪಿಸಲಾಗಿದ್ದು, ಯಾವುದೇ ಸಹಾಯಕ್ಕೆ 08194- 222050, 222044, 222027, 222038, 222056 ದೂರವಾಣಿ ಕರೆ ದಿನದ 24 ಗಂಟೆಗಳ ಸೇವೆ ಲಭ್ಯವಿದೆ ಎಂದು ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link