ಮತ್ತೊಮ್ಮೆ ಜನಾದೇಶ ಪಡೆಯುವುದು ಸೂಕ್ತ: ಮಾಲವಿಕ ಗುಬ್ಬಿವಾಣಿ

ಬೆಂಗಳೂರು

    ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಅಸ್ಥಿರತೆಯಲ್ಲೇ ಉಳಿದಿದ್ದು, ರಾಜಕೀಯ ಪ್ರಹಸನದಿಂದ ಜನರನ್ನು ರಕ್ಷಿಸಲು ಸ್ಪೀಕರ್ ರಮೇಶ್ ಕುಮಾರ್ ರಾಜೀನಾಮೆ ನೀಡಿರುವ ಶಾಸಕರನ್ನು ಅನರ್ಹಗೊಳಿಸಬೇಕು ಹೊಸ ಸರ್ಕಾರ ರಚನೆಗಿಂತ ಮತ್ತೊಮ್ಮೆ ಜನಾದೇಶ ಪಡೆಯುವುದೇ ಸೂಕ್ತ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.

     ರಾಜಿನಾಮೆ ಅಂಗೀಕಾರ ವಿಚಾರದಲ್ಲಿ ಸ್ಪೀಕರ್ ತೀರ್ಮಾನವೇ ಅಂತಿಮವಾಗಿದ್ದು, ಬಹುಮತ ಯಾಚನೆಗೆ ರಾಜಿನಾಮೆ ನೀಡಿರುವ ಶಾಸಕರನ್ನು ಕಲಾಪದ‍ಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುವಂತಿಲ್ಲ ಎಂದು ಸುಪ್ರಿಂಕೋರ್ಟ್ ತೀರ್ಪು ನೀಡಿರುವುದು ಸರಿಯಲ್ಲ. ಇಂತಹ ವಿಚಾರದಲ್ಲಿ ಕೋರ್ಟ್ ಮಧ್ಯ ಪ್ರವೇಶಿಸುವುದು ಸಮಂಜಸವಲ್ಲ ಎಂದು ಆಪ್ತ ವಕ್ತಾರೆ ಮಾಲವಿಕ ಗುಬ್ಬಿವಾಣಿ ಹೇಳಿದ್ದಾರೆ.

      ಅತೃಪ್ತ ಶಾಸಕರು ತಮ್ಮ ಕ್ಷೇತ್ರಕ್ಕೆ ಸರ್ಕಾದಿಂದ ನೆರವು ಸಿಗುತ್ತಿಲ್ಲ, ತಾವು ಕೊಟ್ಟ ಆಶ್ವಾಸನೆಗಳನ್ನು ಜಾರಿ ಮಾಡಲು ಮೈತ್ರಿ ಸರ್ಕಾರ ಸ್ಪಂದಿಸುತ್ತಿಲ್ಲ, ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಅನುದಾನವಾಗಲಿ, ವಾತಾವರಣವಾಗಲೀ ಈ ಸರ್ಕಾರದಲ್ಲಿಲ್ಲ ಎಂಬ ಕಾರಣವನ್ನು ನೀಡಿರುವುದು ವಸ್ತುನಿಷ್ಠವಾಗಿಲ್ಲ ಎಂಬುದು ಅವರ ನಡತೆಯಿಂದ ಸಾಬೀತಾಗಿದೆ. ಪ್ರಜೆಗಳ ಹಿತಾಸಕ್ತಿಗಾಗಿ ರಾಜಿನಾಮೆ ಕೊಟ್ಟಿದ್ದೇ ಆಗಿದ್ದಲ್ಲಿ ಅವರು ತಮ್ಮ ಕ್ಷೇತ್ರದ ಪ್ರಜೆಗಳ ನಡುವೆ ಇದ್ದು ಹೋರಾಟ ಮಾಡಬೇಕೇ ಹೊರತು ಮುಂಬೈಗೆ ಹಾರಿರುವುದು ಅವರ ಪಲಾಯನವಾದವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

      ಅತೃಪ್ತರ ಈ ನಡೆಯ ಹಿಂದೆ ಬಿಜೆಪಿ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಆರಂಭದಿಂದಲೂ ಸರ್ಕಾರವನ್ನು ಉರುಳಿಸಲು ಹವಣಿಸುತ್ತಿದ್ದ ಬಿಜೆಪಿ 7 ನೇಬಾರಿ ಆಪರೇಷನ್ ಕಮಲಕ್ಕೆ ಕೈಹಾಕಿದೆ. ಸಚಿವ ಸ್ಥಾನದ ಅಧಿಕಾರ ದಾಹಕ್ಕಾಗಿ ರಾಜಿನಾಮೆ ನೀಡಿರುವ ಶಾಸಕರ ನಡೆ ಮತ್ತು ಸರ್ಕಾರವನ್ನು ಉರುಳಿಸಿ ಅಧಿಕಾರ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿರುವ ಬಿಜೆಪಿಯ ರಾಜಕೀಯ ಮೇಲಾಟವು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಅವರು ಟೀಕಿಸಿದ್ದಾರೆ.

      ಇಂತಹ ರಾಜಕೀಯ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ರಚಿಸಲು ಕಾದು ಕುಳಿತಿದೆ. ಮೂರು ಪಕ್ಷಗಳು ಅಧಿಕಾರಕ್ಕಾಗಿ ಗುದ್ದಾಡುತ್ತಿವೆಯೇ ಹೊರತು, ರಾಜ್ಯದ ಅಭಿವೃದ್ಧಿಯಾಗಲೀ, ಪ್ರಜೆಗಳ ಹಿತಾಸಕ್ತಿಯಾಗಲೀ ಈ ಪಕ್ಷಗಳಿಗೆ ಮುಖ್ಯವಾಗಿಲ್ಲ ಎಂಬುದನ್ನು ಸಾಬೀತು ಪಡಿಸಿದೆ. ಸರ್ಕಾರ ಉಳಿಯಬಹುದು-ಬೀಳಬಹುದು, ಆದರೆ ಈ ರಾಜಕೀಯ ನಾಟಕ ಮುಂದುವರೆಯುತ್ತಲೇ ಇರುತ್ತದೆ. ಹೀಗಾಗಿ ಮಧ್ಯಂತರ ಚುನಾವಣೆಯೇ ಅನಿಶ್ಚಿತ ರಾಜಕೀಯ ಪರಿಸ್ಥಿತಿಗೆ ಸೂಕ್ತ ಪರಿಹಾರ ಎಂದು ಅವರು ಹೇಳಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap