ಗುಬ್ಬಿ
ವಿವಿಧ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಸಕಾಲಕ್ಕೆ ತಲುಪಿಸುವತ್ತ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಅನುಸೂಯ ನರಸಿಂಹಮೂರ್ತಿ ತಿಳಿಸಿದರು.ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅಗತ್ಯ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಗ್ರಾಮ ನೈರ್ಮಲ್ಯ ಮುಂತಾದವುಗಳ ಕಡೆ ಹೆಚ್ಚಿನ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆಯುಷ್ಮಾನ್ ಭಾರತ ಯೋಜನೆಯಡಿ ಎರಡು ಸಾವಿರ ಫಲಾನುಭವಿಗಳಿಗೆ ಕಾರ್ಡ್ ವಿತರಿಸಲಾಗಿದೆ. ಪ್ರತಿ ಮಂಗಳವಾರ ಕ್ಯಾನ್ಸರ್ ತಪಾಸಣೆ ಶಿಬಿರವನ್ನು ತಾಲ್ಲೂಕಿನ 22 ಆರೋಗ್ಯ ಕೇಂದ್ರಗಳನ್ನು ನುರಿತ ಕ್ಯಾನ್ಸ್‍ರ್ ತಜ್ಞರಿಂದ ನಡೆಸಲಾಗುತ್ತಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ತಾಲ್ಲೂಕಿನ ಯಲಚಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡ ದುಸ್ಥಿತಿಯಲ್ಲಿದ್ದು ಕೂಡಲೆ ಕಟ್ಟಡವನ್ನು ದುರಸ್ಥಿಗೊಳಿಸುವಂತೆ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ರೀಪಿಕ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತ್ವರಿತವಾಗಿ ಕಟ್ಟಡ ದುರಸ್ಥಿಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಹೊಸದಾಗಿ 14 ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಟ್ಟಡಗಳ ದುರಸ್ಥಿಗೆ 16 ಲಕ್ಷ ರೂ ಬಿಡುಗಡೆ ಯಾಗಿದ್ದು ತ್ವರಿತವಾಗಿ ಅಂಗನವಾಡಿ ಕಟ್ಟಡಗಳನ್ನು ದುರಸ್ಥಿಮಾಡಿಸಲಾಗುವುದೆಂದು ಸಿಡಿಪಿಓ ತಿಳಿಸಿದರು.ಕೃಷಿ, ಆರೋಗ್ಯ, ಶಿಕ್ಷಣ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಅ.ನಾ.ಲಿಂಗಪ್ಪ ಸೇರಿದಂತೆ ತಾಲ್ಲೂಕು ಪಂಚಾಯ್ತಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ