ದಾವಣಗೆರೆ :
ಇನ್ನೂ ಮುಂದೆ ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನ ಪಾವತಿಸಲು ವಿಳಂಬ ಮಾಡುವ ಏಜೆನ್ಸಿಗಳನ್ನು ಮುಲಾಜಿಲ್ಲದೆ, ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಘವೇಂದ್ರಸ್ವಾಮಿ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಜಿ.ಪಂ. ಅಧ್ಯಕ್ಷೆ ಯಶೋಧಮ್ಮ ಮರುಳಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಮಾಸಿಕ ಸಭೆಯಲ್ಲಿ ಮಾತನಾಡಿದ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ಮಾತನಾಡಿ, ಆರೋಗ್ಯ ಇಲಾಖೆಯ ಹೊರಗುತ್ತಿಗೆ ಆಧಾರದ ನೌಕರರಿಗೆ 5 ರಿಂದ 6 ತಿಂಗಳಾದರೂ ಸಂಬಳ ಪಾವತಿಯಾಗುತ್ತಿಲ್ಲವೆಂಬ ದೂರುಗಳಿವೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಡಿಎಚ್‍ಓ ಡಾ.ರಾಘವೇಂದ್ರ ಸ್ವಾಮಿ, ಹೊರಗುತ್ತಿಗೆ ಆಧಾರದಲ್ಲಿ ಮಾನವ ಸಂಪನ್ಮೂಲ ಪೂರೈಸುವ ಏಜೆನ್ಸಿಯವರಿಗೆ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಸಂಬಳ ಪಾವತಿ ಮಾಡುವಂತೆ ಹಾಗೂ ನಮ್ಮ ಅನುದಾನ ಕಾಯದೇ ತಾವೇ ಪಾವತಿ ಮಾಡಬೇಕೆಂಬ ಷರತ್ತು ವಿಧಿಸಿ ಗುತ್ತಿಗೆ ನೀಡಲಾಗಿದೆ. ಹೀಗಾಗಿ ಏಜೆನ್ಸಿಯವರು ತಪ್ಪದೇ ಪ್ರತಿ ತಿಂಗಳು ವೇತನ ಪಾವತಿಸ ಬೇಕಾಗಿದೆ. ಆದರೆ, ಇಲಾಖೆ ಏಜೆನ್ಸಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಅನುದಾನ ಬಿಡುಗಡೆ ಗೊಳಿಸುತ್ತಿದ್ದೆ. ಇನ್ನು ಮುಂದೆಯೂ ಏಜೆನ್ಸಿಯವರು ವೇತನ ಪಾವತಿಸುವಲ್ಲಿ ಹೀಗೆಯೇ ವಿಳಂಬ ಮಾಡಿದರೆ, ಮುಲಾಜಿಲ್ಲದೆ ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಮಾತನಾಡಿ, ತೆಂಗಿನ ಗಿಡಕ್ಕೆ ಕೊಳೆರೋಗ ಮತ್ತು ಇಡಿಮುಂಡಿಗೆ ರೋಗಕ್ಕೆ ಕಾರಣ ಏನು, ಈ ಬಗ್ಗೆ ಜಿಲ್ಲೆಯ ರೈತರಿಗೆ ಹೆಚ್ಚಿನ ಮಾಹಿತಿ ಮತ್ತು ಪ್ರಚಾರ ನೀಡಿ ರೈತರ ಬೆಳೆಗಳನ್ನು ಸಂರಕ್ಷಿಸಬೇಕೆಂದು ಸೂಚಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನಾರ್, ಟ್ರ್ಯಾಕ್ಟರ್ ಹೊಡೆಸುವುದರಿಂದ ಬೇರಿಗೆ ಆಗುವ ಪೆಟ್ಟು ಮತ್ತು ಕೆರೆ ಮಣ್ಣು ಬಳಕೆ ಇಡಿ ಮುಂಡಿಗೆ ರೋಗಕ್ಕೆ ಕಾರಣಗಳಾಗಿವೆ.
ಈ ರೋಗ ನಿಯಂತ್ರಣಕ್ಕೆ ಅವಶ್ಯವಾದ ಔಷಧಿ ಸಲಕರಣೆ ಖರೀದಿಸಿದ 1400 ರಿಂದ 1600 ರೂ. ಬಿಲ್‍ಗಳನ್ನು ಇಲಾಖೆಯಿಂದ ಪಾವತಿಸಲಾಗುವುದು ಎಂದು ಮಾಹಿತಿ ನೀಡಿದರು. ಜಿ.ಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ಮಾತನಾಡಿ, ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳಲ್ಲೂ ನರೇಗಾ ಅಡಿಯಲ್ಲಿ ಅಡಿಕೆ ಬೆಳೆ ವಿಸ್ತರಣೆ ಕಾರ್ಯವನ್ನು ಕೈಗೊಳ್ಳಬೇಕು. ಇದಕ್ಕೆ ರೈತರ ಬೇಡಿಕೆಯೂ ಬಹಳಷ್ಟಿದೆ ಎಂದು ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನಾರ್ ಪ್ರತಿಕ್ರಿಯಿಸಿ, ನರೇಗಾದಡಿ ಅಡಿಕೆ ಗಿಡಗಳನ್ನು ಹಾಕುವ ಪ್ರದೇಶವು ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿಯ ವ್ಯಾಪ್ತಿಗೆ ಒಳಪಡಬೇಕು ಹಾಗೂ ಮಲೆನಾಡಾಗಿರಬೇಕೆಂಬ ನಿಯಮ ಇದೆ ಎನ್ನುತ್ತಿದ್ದಂತೆ, ಮಧ್ಯ ಪ್ರವೇಶಿಸಿದ ಜಿ.ಪಂ. ಸಿಇಒ ಪದ್ಮಾ ಬಸವಂತಪ್ಪ, ಚನ್ನಗಿರಿ ಮತ್ತು ಹೊನ್ನಾಳಿ ಅರೆ ಮಲೆನಾಡೆಂದು ಪರಿಗಣಿಸಲಾಗಿದ್ದು, ಈ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸ್ಪಷ್ಟೀಕರಣ ಬಂದ ನಂತರ ಕ್ರಮ ವಹಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಕೃಷಿ ಹೊಂಡಗಳ ಅವಶ್ಯಕತೆ ಮತ್ತು ಬೇಡಿಕೆ ಹೆಚ್ಚಿದೆ ಈ ಬಗ್ಗೆ ಕ್ರಮ ವಹಿಸಬೇಕೆಂದು ಜಿ.ಪಂ. ಅಧ್ಯಕ್ಷೆ ಯಶೋಧಮ್ಮ ಸೂಚಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್, ಕೃಷಿ ಹೊಂಡಕ್ಕೆ ಸದ್ಯಕ್ಕೆ ಅನುದಾನ ಇಲ್ಲ. ಈ ಕುರಿತು ರಾಜ್ಯದ ಹಂತದಲ್ಲೇ ವಿಚಾರಣೆ ನಡೆಯುತ್ತಿದೆ. ಕೃಷಿ ಹೊಂಡ ಮಂಜೂರಾತಿ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳಿಗೆ ಇನ್ನೆಷ್ಟು ಹಾಸ್ಟೆಲ್‍ಗಳ ಬೇಡಿಕೆ ಇದೆ ಎಂದು ಅಧ್ಯಕ್ಷರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮುದುಕಣ್ಣನವರ್, ಜಿಲ್ಲೆಯಲ್ಲಿ ವಿಶೇಷವಾಗಿ ದಾವಣಗೆರೆ ನಗರಕ್ಕೆ ಹೆಚ್ಚಿನ ಹಾಸ್ಟೆಲ್ ಬೇಡಿಕೆ ಇದೆ. ಅದರಲ್ಲೂ ಬಾಲಕಿಯರ ಹಾಸ್ಟೆಲ್ ಬೇಡಿಕೆ ಇದೆ. ಒಟ್ಟು 16 ಹೊಸ ಹಾಸ್ಟೆಲ್ ಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಇಷ್ಟು ಹಾಸ್ಟೆಲ್ ಮಂಜೂರು ಮಾಡಲು ಬರುವುದಿಲ್ಲ. ಅತ್ಯಂತ ಅವಶ್ಯಕತೆ ಇರುವೆಡೆ ಪರಿಶೀಲಿಸಿ ಮರು ಪ್ರಸ್ತಾವನೆ ಸಲ್ಲಿಸಲು ಸರ್ಕಾರ ನಿರ್ದೇಶನ ನೀಡಿದೆ ಎಂದರು.
ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶಪ್ಪ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಅಂಗನವಾಡಿ ಕಟ್ಟಡಗಳ ಅವಶ್ಯಕತೆ ಇದೆ ಹಾಗೂ ಅನೇಕ ಕಡೆ ರಿಪೇರಿ ಅವಶ್ಯಕತೆ ಇದೆ. ಈ ಬಗ್ಗೆ ಏನು ಕ್ರಮ ವಹಿಸಲಾಗಿದೆ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯಕುಮಾರ್, ಪ್ರಸ್ತುತ ಅಂಗನವಾಡಿ ಕಟ್ಟಡ ಕಟ್ಟಲು ಎಸ್‍ಸಿಪಿ/ಟಿಎಸ್‍ಪಿ ಹೊರತಾಗಿ ಬೇರೆ ಅನುದಾನ ಇಲ್ಲ. ನಬಾರ್ಡ್‍ನಿಂದಲೂ ಅನುದಾನ ನಿಲ್ಲಿಸಲಾಗಿದೆ.
ನರೇಗಾದಡಿಯಲ್ಲಿಯೂ ಹಲವೆಡೆ ಕಟ್ಟಡ ನಿರ್ಮಾಣ ಆಗುತ್ತಿಲ್ಲ. ಹಾಗಾಗಿ ಸರ್ಕಾರಕ್ಕೆ ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ ಅನುದಾನವನ್ನು ಕೇಳಲಾಗಿದೆ. ಮುಂದಿನ ಸಾಲಿನಲ್ಲಿ ಮೊದಲ ಆದ್ಯತೆಯಲ್ಲಿ ಅನುದಾನ ನೀಡಲಾಗುವುದು ಎಂದು ಸರ್ಕಾರ ಹೇಳಿದೆ ಎಂದರು.
ಸಿಇಓ ಮಾತನಾಡಿ, ರಿಪೇರಿ ಅವಶ್ಯಕತೆ ಇರುವ, ಹದಗೆಟ್ಟಿರುವ ಅಂಗನವಾಡಿಗಳ ಕಟ್ಟಡಗಳ ಮಾಹಿತಿಯನ್ನು ಅಂದಾಜು ವೆಚ್ಚ ಹಾಗೂ ಛಾಯಾಚಿತ್ರದೊಂದಿಗೆ ತಯಾರಿಸಿ ನೀಡಲು ಸೂಚಿಸಿದರು.ಸಭೆಯಲ್ಲಿ ಜಿ ಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಫಕೀರಪ್ಪ, ಜಿ.ಪಂ.ಉಪಕಾರ್ಯದರ್ಶಿ ಬಿ.ಆನಂದ್, ಮುಖ್ಯ ಯೋಜನಾಧಿಕಾರಿ ಎನ್.ಲೋಕೇಶ್, ಮುಖ್ಯ ಲೆಕ್ಕಾಧಿಕಾರಿ ಮಧು.ಡಿ.ಆರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ