ಚಿತ್ರದುರ್ಗ:
ರೈತರಿಗೆ ಕೃಷಿ ಮಾಡುವುದು ದೇವರು ಕೊಟ್ಟ ಕಾಯಕವಿದ್ದಂತೆ. ಅವರು ಲಾಭ ನಷ್ಟವನ್ನು ಪರಿಗಣಿಸದೇ ನಿರಂತರವಾಗಿ ತಮ್ಮ ಕಾಯಕದಲ್ಲಿ ತೊಡಗಿ, ದೇಶಕ್ಕೆ ಅನ್ನ ನೀಡುತ್ತಾರೆ ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಹೇಳಿದರು.ನಗರದ ತ.ರಾ.ಸು ರಂಗಮಂದಿರದಲ್ಲಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಅರಣ್ಯ ಹಾಗೂ ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ, ‘ಚಿಣ್ಣರ ನಡೆ ಕೃಷಿಯ ಕಡೆ’ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಮಾತನಾಡಿದರು.
ಇಂದಿನ ಮಕ್ಕಳು, ನಗರ ಪ್ರದೇಶದಲ್ಲಿ ನೆಲೆನಿಂತು, ಚೆನ್ನಾಗಿ ಓದಿ ಉತ್ತಮ ಕೆಲಸ ಮಾಡಿದರೆ ಸಾಕು ಎನ್ನುವ ಮನೋಭಾವದಿಂದ ಹೊರಬರಬೇಕು. ಗ್ರಾಮೀಣ ಪ್ರದೇಶದ ಒಂದು ಸಂಸ್ಕøತಿಯಾಗಿರುವ ಕೃಷಿ ಬಗ್ಗೆ ಮಾಹಿತಿ ತಿಳಿಯಬೇಕು. ನಗರ ಪ್ರದೇಶದ ಕೆಲವು ಮಕ್ಕಳಿಗೆ ತಿನ್ನುವ ಅನ್ನ ಹೇಗೆ ಬರುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲದಿರುವುದು ಬೇಸರದ ಸಂಗತಿ ಎಂದರು ರೈತ ಲಾಭ ನಷ್ಟ ಒಂದೇ ಸಮನಾಗಿ ಸ್ವೀಕರಿಸುತ್ತಾನೆ. ತನಗೆ ಎಷ್ಟೇ ಕಷ್ಟವಿದ್ದರೂ ಪ್ರಪಂಚಕ್ಕೆ ಅನ್ನ ನೀಡುತ್ತಾನೆ. ಕೃಷಿ ಒಂದು ಉದ್ಯೋಗವಲ್ಲ ಅದು ದೇವರು ಕಲ್ಪಿಸಿರುವ ಕಾಯಕವಿದ್ದಂತೆ. ಇಂದಿನ ಮಕ್ಕಳು ಕೃಷಿ ಮಾಡುವ ಹಿಂದಿನ ಕೈಗಳ ಶ್ರಮದ ಬಗ್ಗೆ ಅರಿಯಬೇಕು. ಕೃಷಿ ಭೂಮಿಗಳಿಗೆ ಭೇಟಿ ನೀಡಿ, ಕೃಷಿ ವಿಧಾನವನ್ನು ತಿಳಿಯಬೇಕು ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ಹೇಳಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸತ್ಯಭಾಮ ಮಾತನಾಡಿ, ಜಾಗತೀಕರಣದ ಪ್ರಭಾವದಿಂದಾಗಿ ಮಕ್ಕಳಿಗೆ ಕೃಷಿಯ ಮೇಲಿನ ಆಸಕ್ತಿ ಕಡಿಮೆಯಾಗಿದೆ. ಇಂದಿನ ಪೋಷಕರು ತಮ್ಮ ಮಕ್ಕಳು ಕೇವಲ ಉನ್ನತ ಹುದ್ದೆ ಅಲಂಕರಿಸಬೇಕು. ಅದಕ್ಕಾಗಿ ಅವರಿಗೆ ಎಲ್ಲ ಜ್ಞಾನವನ್ನು ತುಂಬಬೇಕು ಎಂಬ ಧಾವಂತದಲ್ಲಿದ್ದಾರೆ. ಇದರಿಂದ ಹೊರಬಂದು, ನಮ್ಮ ಸಂಸ್ಕøತಿಯನ್ನು ಬಿಂಬಿಸುವ ಕೃಷಿ ಬಗ್ಗೆ ಮಕ್ಕಳಲ್ಲಿ ಜ್ಞಾನ ತುಂಬಬೇಕು ಎಂದು ಕರೆ ನೀಡಿದರು
ಮಕ್ಕಳು ಬೆಳೆಗಳ ಬಗ್ಗೆ ಮಾಹಿತಿ, ಯಾವ ಬೆಳೆಗೆ ಎಷ್ಟು ನೀರು, ಗೊಬ್ಬರ, ಕಾಲಾವಧಿ, ಹವಾಮಾನ, ಬದುನಿರ್ಮಾಣಕ್ಕೆ ಕಾರಣಗಳು ಹೀಗೆ ಪ್ರತಿಯೊಂದು ಅಂಶವನ್ನು ನೋಡಿ ಕಲಿಯಬೇಕು. ರೈತರ ಬೆಳೆಗೆ, ಶ್ರಮಕ್ಕೆ ತಕ್ಕ ಬೆಲೆ ಸಿಗದಿರುವುದು ಬೇಸರದ ಸಂಗತಿ ಎಂದರು.
ಜಿ.ಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಅನಂತ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯ ನಂತರ ನಮ್ಮ ದೇಶದ ಜಿಡಿಪಿಯಲ್ಲಿ ಶೇ. 60 ರಷ್ಟು ಪಾಲು ಕೃಷಿಯದ್ದಾಗಿತ್ತು. ಆದರೆ ಇಂದು ಕೇವಲ ಶೇ. 6 ರಷ್ಟಾಗಿದೆ. ಯುವಜನತೆ ಕೃಷಿ ಬಗ್ಗೆ ಆಸಕ್ತಿ ತೋರುತ್ತಿಲ್ಲ.
ಪೋಷಕರು ಮಕ್ಕಳಿಗೆ ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಒಂದು ಪರಿಕಲ್ಪನೆ ಅವರ ಮನಸ್ಸಿನಲ್ಲಿ ಮೂಡುವಂತೆ ಮಾಡಬೇಕು. ಜಿ.ಪಂ ವತಿಯಿಂದ ವರ್ಷದಲ್ಲಿ 3 ಬಾರಿ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿ ಮಕ್ಕಳಿಗೆ ಕೃಷಿ ಬಗ್ಗೆ ಮಾಹಿತಿ ನೀಡುವ ಉದ್ದೇಶವನ್ನು ಹೊಂದಲಾಗಿದೆ. ಇಂದು ಕೃಷಿ ಅಳಿವಿನಂಚಿನಲ್ಲಿದೆ. ಅದೊಂದು ಉದ್ದಿಮೆಯಾಗಬೇಕು ಆಗ ಮಾತ್ರ ಕೃಷಿ ಅಭಿವೃದ್ಧಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ರವಿಶಂಕರ್‍ರೆಡ್ಡಿ, ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ, ಜಿ.ಪಂ ಸದಸ್ಯರಾದ ಎಸ್. ನರಸಿಂಹರಾಜ್, ಪ್ರಕಾಶ್‍ಮೂರ್ತಿ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕರಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ನಗರದ ಪ್ರೌಢಶಾಲೆ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
