ವಿವಿಧ ಕಾಮಗಾರಿಗೆ ಚಾಲನೆ ನೀಡಿದ ಅಜಯ್ ಕುಮಾರ್ ಸಿಂಗ್…!!

ಹರಿಹರ:

       ಎರಡು ವರ್ಷಗಳ ಅವಧಿಯಲ್ಲಿ ಹುಬ್ಬಳ್ಳಿಯಿಂದ ತುಮಕೂರುವರೆಗಿನ ರೈಲ್ವೆ ಡಬ್ಲಿಂಗ್ ಕಾಮಗಾರಿ ಹಾಗೂ ನಂತರ ನಿಲ್ದಾಣ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದೆಂದು ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಹೇಳಿದರು.

        ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಹಾಗೂ ವಾರ್ಷಿಕ ಭೇಟಿಯ ಹಿನ್ನೆಲೆಯಲ್ಲಿ ನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಮಹತ್ವದ ಈ ಯೋಜನೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ, ಎರಡು ವರ್ಷಗಳಲ್ಲಿ ಇದು ಪೂರ್ಣಗೊಂಡು ಸೇವೆಗೆ ಲಭ್ಯವಾಗಲಿದೆ ಎಂದರು.

        ನಗರದ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು. ಈ ಯೋಜನೆ ನಮ್ಮ ಪಟ್ಟಿಯಲ್ಲಿದೆ. ರೈಲ್ವೆ ಡಬ್ಲಿಂಗ್ ಕಾಮಗಾರಿಯ ನಂತರ ನಿಲ್ದಾಣ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದೆಂದರು.

         ದಾವಣಗೆರೆ ಮಾದರಿ ಎಫ್‍ಒಬಿ: ದಾವಣಗೆರೆಯ ರೈಲ್ವೆ ನಿಲ್ದಾಣದಲ್ಲಿರುವಂತೆ ಇಲ್ಲಿಯೂ ರೈಲ್ವೆ ಪ್ರಯಾಣಿಕರ ಹೊರತಾಗಿ ಬೇರೆ ನಾಗರೀಕರು ರೈಲ್ವೆ ನಿಲ್ದಾಣ ದಾಟಲು ಎಫ್‍ಒಬಿ (ಪಾದಚಾರಿಗಳ ಮೇಲ್‍ಸೇತುವೆ) ನಿರ್ಮಿಸುವ ಕುರಿತು ಕೇಳಿದ ಪ್ರಶ್ನೆಗೆ ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದೆಂದರು.

        ಹಿರಿಯರಿಗೆ, ವಿಕಲಚೇತನರಿಗೆ ಪ್ಲಾಟ್‍ಫಾರಂ ದಾಟಲು ಅನುಕೂಲವಾಗುವಂತೆ ಎಸ್ಕವಲೇಟರ್ ನಿರ್ಮಿಸ ಎಂಬ ಪ್ರಶ್ನೆಗೆ ಅದರ ಅಗತ್ಯತೆ ಪರಿಶೀಲಿಸಲಾಗುವುದೆಂದರು.ನಂತರ ಅವರು ನಿಲ್ದಾಣ ಪಕ್ಕದ ಸಿಬ್ಬಂದಿ ರೈಲ್ವೆ ಕಾಲೋನಿಯಲ್ಲಿನ ಮಕ್ಕಳ ಪಾರ್ಕ್, ಜಿಮ್, ಗ್ಯಾಂಗ್‍ಮನ್‍ಗಳ ವಿಶ್ರಾಂತಿ ಗೃಹ ಉದ್ಘಾಟಿಸಿದರು. ರೈಲ್ವೆ ಎನ್ನಿಂಗ್ ರೂಂ ಪಕ್ಕದಲ್ಲಿ ಸಸಿ ನೆಟ್ಟರು. ನಿಲ್ದಾಣ, ಕಾಲೋನಿ, ರೈಲ್ವೆ ರನ್ನಿಂಗ್ ರೂಂಗಳಿಗೆ ಭೇಟಿ ನೀಡಿ ಸ್ವಚ್ಚತೆ ಇತರೆ ಸೌಲಭ್ಯಗಳನ್ನು ಪರಿಶೀಲಿಸಿದರು.

        ವರ್ತಕರ ಸಂಘದಿಂದ ಮನವಿ: ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವುದು, ಇಲ್ಲಿಂದ ಸಂಚರಿಸುವ ಹಲವು ರೈಲುಗಳಿಗೆ ನಿಲುಗಡೆ ನೀಡುವುದು, ಮೂರ್ನಾಲ್ಕು ಗಂಟೆ ಕಾಯಬೇಕಾದ ಪ್ರಯಾಣಿಕರಿಗೆ ವಿಶ್ರಾಂತಿ ಗೃಹ, ನಿಲ್ದಾಣದ ಮುಂದುಇನ ರಸ್ತೆಯನ್ನು ವಿಸ್ತರಿಸುವುದು, ಪ್ಲಾಟ್‍ಫಾರಂಗಳ ಮೇಲ್ಚಾವಣಿ ವಿಸ್ತರಣೆ.

         ವಿಕಲಚೇತನರಿಗೆ ಹಾಗೂ ಹಿರಿಯ ನಾಗರೀಕರಿಗೆ ವ್ಹೀಲ್ ಚೇರ್, ಬೋಗಿಯೊಳಗೆ ಲಗೇಜ್ ಸಾಗಿಸಲು ಲೈಟ್‍ವೇಟ್ ಟ್ರಾಲಿಗಳ ಸೌಲಭ್ಯ, ಹರಿಹರದಿಂದ ಕೊಟ್ಟೂರಿಗೆ ನಿಯಮಿತವಾಗಿ ರೈಲುಗಳ ಸಂಚಾರ, ಮತ್ತು ರೈಲು ಸಂಚಾರವನ್ನು ಹೊಸಪೇಟೆವರೆಗೆ ವಿಸ್ತರಿಸುವುದು, ನಿಲ್ದಾಣದಲ್ಲಿ ಕಳ್ಳತನ, ಭಿಕ್ಷಕಕರ ಕಾಟದ ನಿವಾರಣೆ, ಟಿಕೆಟ್ ಮೀಸಲು ಕೌಂಟರ್ ಮುಂಭಾಗದಲ್ಲಿ ಪ್ರಯಾಣಿಕರ ಮಾಹಿತಿ ಡಿಸ್‍ಪ್ಲೇ ಬೋರ್ಡ್ ಅಳವಡಿಕೆ, ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಲಭ್ಯತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಚೆಂಬರ್ ಆಫ್ ಕಾಮರ್ಸ್‍ನಿಂದ ಜಿಎಂರಿಗೆ ಮನವಿ ನೀಡಲಾಯಿತು.

         ಸಂಘದ ಅಧ್ಯಕ್ಷ ಶಂಕರ್ ಖಟಾವ್‍ಕರ್, ಉಪಾಧ್ಯಕ್ಷ ಕಾಳಪ್ಪ ಬೊಂಗಾಳೆ, ಕಾರ್ಯದರ್ಶಿ ಹಲಸಬಾಳು ಬಸವರಾಜಪ್ಪ, ಸದಸ್ಯರಾದ ಎಚ್.ಎಸ್.ಶ್ರೀಧರ್, ಎ.ಕೊಟ್ರೇಶ್, ಆರ್.ಆರ್.ಕಾಂತರಾಜ್, ನಿವೃತ್ತ ಅಂಚೆ ಪಾಲಕ ಬಿ.ಎಸ್.ಗೌಡರ್ ಇತರರಿದ್ದರು.
ವಿಕಲಚೇತನರಿಗೆ ಸೌಲಭ್ಯ: ಹರಿಹರ ವಿಕಲಚೇತನರ ಸಂಘದ ಮುಖಂಡರಾದ ಪರಮೇಶ್ವರಪ್ಪ ಹಾಗೂ ಅನಿತಾ ಪಾಟೀಲ್‍ರವರು ಮನವಿ ನೀಡಿ ರೈಲುಗಳಲ್ಲಿನ ವಿಕಲಚೇತನರ ಬೋಗಿಯಲ್ಲಿ ಬೇರೆಯವರು ಪ್ರಯಾಣಿಸುವುದನ್ನು ತಡೆಯಬೇಕು. ವ್ಹೀಲ್ ಚೇರ್ ಸಮೇತ ಬೋಗಿಯೊಳಗೆ ಹೋಗಲು ಎಲಿವೇಟರ್ ಸೌಲಭ್ಯಕ್ಕೆ ಕೋರಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link