ಬೆಂಗಳೂರು
ದೆಹಲಿ ವಿಶೇಷ ಪ್ರತಿನಿಧಿಯಾಗಿ ಜೇವರ್ಗಿ ಶಾಸಕ ಅಜಯ್ ಸಿಂಗ್ ಪ್ರಮಾಣ ವಚನ ಸ್ವೀಕಾರ ಸಮಾರಂಭ ಕಾಂಗ್ರೆಸ್ ನಾಯಕರ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಯಾಯಿತು.
ವಿಧಾನೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಇ. ತುಕಾರಾಮ್, ಶಿವಾನಂದ್ ಪಾಟೀಲ್, ಕೃಷ್ಣ ಬೈರೇಗೌಡ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮೇಲ್ಮನೆ ಸದಸ್ಯ ಪ್ರಕಾಶ್ ರಾಥೋಡ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಅಜಯ್ ಸಿಂಗ್ ಇಂದು ತಮ್ಮ ರಾಜಕೀಯ ಜೀವನದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಾತಿಗೆ ಮನ್ನಣೆಕೊಟ್ಟು ದೆಹಲಿ ವಿಶೇಷ ಪ್ರತಿನಿಧಿಯಾಗಿ ಪದಗ್ರಹಣ ಮಾಡಿದ್ದು, ಧರಂಸಿಂಗ್ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಬಹಳಷ್ಟು ಕಾಲ ಜನಸೇವೆ ಮಾಡುವ ಅವಕಾಶ ಖಂಡಿತ ಅಜಯ್ ಸಿಂಗ್ ಅವರಿಗೆ ಸಿಗಲಿದೆ. ಶಾಸನಸಭೆಯಲ್ಲಿ ಧರಂಸಿಂಗ್ ಅವರ ಜೊತೆ223 ಶಾಸಕರು ಅವರಿಗೆ ಪಕ್ಷಾತೀತವಾಗಿ ಸಹಕಾರ ನೀಡುತ್ತಿದ್ದರು. ಸುಲಭವಾಗಿ ವ್ಯಕ್ತಿಯ ಮನಸನ್ನು ಗೆಲ್ಲುವ ಶಕ್ತಿ ಅವರಿಗಿತ್ತು.ಅವರ ಕ್ಷೇತ್ರದಲ್ಲಿ ಧರಂಸಿಂಗ್ ಅವರ ಸಮುದಾಯದ ಮತಗಳು ಕೇವಲ 200-300 ಇದ್ದವು. ಹೀಗಿದ್ದರೂ ನಿರಂತರವಾಗಿ ಗೆಲ್ಲುತ್ತಿದ್ದರು. ಇದೂವರೆಗೂ ಈ ಇಬ್ಬರೂ ಹೇಗೆ ನಿರಂತರವಾಗಿ ಗೆಲ್ಲುತ್ತಿದ್ದಾರೆ ಎಂಬ ಗುಟ್ಟು ಮಾತ್ರ ಬಿಟ್ಟುಕೊಡಲಿಲ್ಲ ಎಂದು ಪರಮೇಶ್ವರ್ ಸ್ಮರಿಸಿದರು.
ಗುಲ್ಬರ್ಗಾ ಭಾಗದ ಭವಿಷ್ಯದ ಬದಲಾವಣೆಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಧರಂಸಿಂಗ್ ಕಾರಣ. ದಕ್ಷಿಣ ಭಾಗಕ್ಕೆಹೋಲಿಕೆ ಮಾಡಿದರೆ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ ಎಂದು ಮನಗಂಡು ಆ ಭಾಗದ ಅಭಿವೃದ್ಧಿಗೆ ಮುಂದಾದರು. ಈಗ ಶಾಸಕ ಅಜಯ್, ಪರಿಷತ್ ಸದಸ್ಯ ವಿಜಯ್ ಮತ್ತು ಸಚಿವ ಪ್ರಿಯಾಂಕ್ ಒಟ್ಟಾಗಿ ಕೆಲಸ ಮಾಡಬೇಕು. ರಾಹುಲ್ ಗಾಂಧಿ ಅವರ ನಾಯಕತ್ವ ಅಜಯ್, ಪ್ರಿಯಾಂಕ್ ಅವರಂತಹವರಿಗೆ ಬಹಳಷ್ಟು ಅವಕಾಶ ನೀಡಿದೆ. ಎಐಸಿಸಿ ನೀಡಿರುವ ಅವಕಾಶ ಹೇಗೆ ಬಳಸಿಕೊಳ್ಳಬೇಕೆಂಬುದು ಅವರಿಗೆ ಬಿಟ್ಟಿದ್ದು ಎಂದು ಪರಮೇಶ್ವರ್ ಹೇಳಿದರು.
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ರಾಜಕಾರಣದಲ್ಲಿ ಎಲ್ಲ ಸಮಯದಲ್ಲೂ ನಗುತ್ತಿರಲು ಸಾಧ್ಯವಿಲ್ಲ. ಆದರೆ ಅಜಯ್ ಸಿಂಗ್ ಮಾತ್ರ ನಗುತ್ತಲೇ ಇರುತ್ತಾರೆ. ಸಚಿವ ಸ್ಥಾನ ಸಿಗದೇ ಇದ್ದರೂ ಖುಷಿಯಾಗಿಯೇ ಇದ್ದರು. ಹಲವು ನಾಯಕರು ಅಜಯ್ ಸಿಂಗ್ ಅವರನ್ನು ಮಂತ್ರಿ ಮಾಡುವಂತೆ ಒತ್ತಡ ಹೇರಿದಾಗ, ಸ್ವಲ್ಪ ಸಮಯದ. ನಂತರ ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಹೇಳಿದೆ. ತಮ್ಮ ಮಾತಿಗೆ ಅಜಯ್ ಸಿಂಗ್ ಒಪ್ಪಿ ಪಕ್ಷ ಹೇಳಿದಂತೆ ನಡೆಯುವುದಾಗಿ ಭರವಸೆ ನೀಡಿದ್ದಾರೆ ಎಂದರು.
ದೆಹಲಿಯಲ್ಲಿ ಅಜಯ್ ಸಿಂಗ್ ಅವರು ನಗುನಗುತ್ತಲೇ ಇರುವುದರಿಂದ ಎಲ್ಲಾ ಕೆಲಸಗಳು ಆಗುತ್ತವೆ. ದೆಹಲಿ ವಿಶೇಷ ಪ್ರತಿನಿಧಿಯಾದವರಿಗೆ ಬಹಳ ಕೆಲಸ ಇರುತ್ತದೆ. ಜೆಡಿಎಸ್ ಪಕ್ಷದಿಂದ ಸೈಯದ್ ಮೊಹಿದ್ ಅಹಮದ್ ಅವರು ದೆಹಲಿ ವಿಶೇಷ ಪ್ರತಿನಿಧಿಯಾಗಿದ್ದಾರೆ. ಅಜಯ್‍ಸಿಂಗ್ ಅವರಿಗೆ ಸಹಾಯ ಮಾಡಲು ನಿಲಯ್ ಮಿತಾಷ್ ಸ್ಥಾನಿಕ ಆಯುಕ್ತರಿದ್ದಾರೆ ಎಂದರು.
ಕೇಂದ್ರ ಸರ್ಕಾರ ಹಾಗೂ ಕೇಂದ್ರದ ಸಚಿವರ ಜೊತೆ ನಿಕಟ ಸಂಪರ್ಕ ಹೊಂದುವ ಮೂಲಕ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಅನುದಾನ ತರುವ ಕೆಲಸ ಮಾಡಬೇಕೇ ಹೊರತು ಅಜಯ್ ಸಿಂಗ್ ಅವರು ರಾಜ್ಯ ರಾಜಕಾರಣ ಬಿಟ್ಟು ರಾಷ್ಟ್ರರಾಜಕಾರಣಕ್ಕೆ ಹೋಗಬಾರದು. ಅಜಯ್ ಸಿಂಗ್ ಅವರು ಭವಿಷ್ಯದ ನಾಯಕ. ತಂದೆ ಮೀರಿಸಿದ ನಾಯಕರಾಬೇಕು. ಅವರಿಗೆ ಸಂಪೂರ್ಣ ಬೆಂಬಲ ಇದೆ. ಧರಂಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ತಾವು ಸಚಿವರಾಗಿ ಕೆಲಸ ಮಾಡಿದ್ದು, ಆಗಿನ ಸರ್ಕಾರದಲ್ಲಿ ತಮ್ಮ ಹಾಗೂ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ. ಜನಪರ ಕಾಳಜಿ, ತಾಳ್ಮೆ, ಸಹನೆ, ನಗುವ ಗುಣ ,ಕಾಳಜಿ ಇರುವುದರಿಂದ ಅಜಯ್, ಧರಂಸಿಂಗ್ ಅವರಿಗಿಂತ ಹೆಚ್ಚು ಜನಪ್ರಿಯರಾಗಬಹುದು. ಈಗಾಗಲೇ ಐದು ವರ್ಷದಲ್ಲಿ ಅಜಯ್ ಅವರು ಜನಪ್ರಿಯ ಶಾಸಕರಾಗಿದ್ದಾರೆ ಎಂದು ಸಿದ್ದರಾಮಯ್ಯ ಹಾರೈಸಿದರು.
ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ವಿಜಯ ನಂತರ ಅಜಯ ಎಂದು ಧರಂ ಸಿಂಗ್ ತಮ್ಮ ಎರಡನೇ ಮಗನಿಗೆ ನಾಮಕರಣ ಮಾಡಿದರು. ಇಂದಿರಾಗಾಂಧಿ ಹೆಸರು ಪ್ರಿಯದರ್ಶಿನಿ ಹೀಗಾಗಿ ತಮ್ಮ ಮಗನಿಗೆ ಪ್ರಿಯಾಂಕ್ ಎಂದು ನಾಮಕರಣ ಮಾಡಿದೆ.ವೈಚಾರಿಕ ಭಿನ್ನಾಭಿಪ್ರಾಯಗಳ ಮಧ್ಯೆಯೂ ಸಂಬಂಧ ಉಳಿಯಬೇಕು. ಪ್ರಿಯಾಂಕ್ ಮತ್ತು ಅಜಯ್ ಒಟ್ಟಿಗೆ ಸೇರಿದರೆ ಕ್ಷೇತ್ರಕ್ಕೆ ಅನುಕೂಲ. ಹಿಂದೆ ತಾವು ಮತ್ತು ಧರಂಸಿಂಗ್ ಒಟ್ಟಾಗಿ ಸೇರಿ ತೀರ್ಮಾನ ತೆಗೆದುಕೊಂಡು ಹೆಜ್ಜೆ ಇಡುತ್ತಿದ್ದೆವು ಎಂದರು.
ಅಜಯ್ ಎರಡು ಬಾರಿ ಶಾಸಕರಾಗಿ ಆರಿಸಿಬಂದಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿಯೂ ಅವರು ಆಯ್ಕೆಯಾಗಿದ್ದಾರೆ. ತಮ್ಮ ಸಂಸದೀಯ ಕ್ಷೇತ್ರದಲ್ಲಿ ಅಜಯ್ ಸಿಂಗ್ ಹೆಚ್ಚು ಜನಮನ್ನಣೆ ಗಳಿಸಿದ್ದಾರೆ. ಅವರೂ ಸಹ ಸಚಿವರಾಗಬೇಕೆಂಬ ಇಚ್ಛೆಯಿತ್ತು. ಅವರನ್ನು ಮಂತ್ರಿಯನ್ನಾಗಿಸಲು ಪ್ರಯತ್ನಗಳು ನಡೆದರೂ ಅದು ಯಶಸ್ವಿಯಾಗಲಿಲ್ಲ. ಆದರೆ ಕೇಂದ್ರ ಮತ್ತು ರಾಜ್ಯದ ಮಧ್ಯೆ ಕೊಂಡಿಯಾಗಿ ಇವರಿಗೆ ದೆಹಲಿ ವಿಶೇಷ ಪ್ರತಿನಿಧಿ ಹುದ್ದೆ ನೀಡಲಾಯಿತು. ಅಜಯ್ ಇಂಗ್ಲಿಷ್ ಹಾಗೂ ಹಿಂದಿಯನ್ನು ಇವರು ಸುಲಲಿತವಾಗಿ ಮಾತನಾಡುತ್ತಾರೆ.ಹೀಗಾಗಿ ಇವರು ಹುದ್ದೆಗೆ ಸಮರ್ಥರಾಗಿದ್ದಾರೆ. ಕೇಂದ್ರದ ಮೇಲೆ ಪ್ರಭಾವ ಬೀರಿ ರಾಜ್ಯದ ಕೆಲಸಗಳನ್ನು ಮಾಡಿಕೊಡುತ್ತಾರೆಂಬ ನಂಬಿಕೆಯಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅಜಯ್ ಸಿಂಗ್ ಪದಗ್ರಹಣ ಸಮಾರಂಭದಲ್ಲಿ ಎಲ್ಲಾ ನಾಯಕರು ಭಾಗವಹಿಸುತ್ತಾರೆ ಎಂದು ತಾವು ಭಾವಿಸಿರಲಿಲ್ಲ.ಆದರೆ ಎಲ್ಲರೂ ಬಂದಿರುವುದು ಶುಭಸೂಚನೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ ಧರಂಸಿಂಗ್ ಅವರ ವ್ಯಕ್ತಿತ್ವ ಮಹತ್ವವಾಗಿದೆ. ಅಜಾತಶತೃವಾಗಿದ್ದರಿಂದಲೇ ಅವರು ಹಲವು ಬಾರಿ ಗೆಲುವು ಸಾಧಿಸಿದ್ದರು. ಧರಂ ಸಿಂಗ್ ಡಿ25 ರಂದು ಹುಟ್ಟಿದ್ದೇ ವಿಶೇಷ. ಅವರಿಂದ ಕಲಿಯಬೇಕಾಗಿದ್ದು ಬಹಳ ಇದೆ. ತಂದೆಯ ಹಾದಿಯಲ್ಲಿ ಅಜಯ್ ಸಿಂಗ್ ಸಾಗುತ್ತಿದ್ದಾರೆ. ಅಜಯ್ ಸಿಂಗ್, ಧರಂಸಿಂಗ್ ಮೇಲೆ ಕ್ಷೇತ್ರದ ಜನತೆಯ ಅಭಿಮಾನ ಬಹಳಷ್ಟಿದೆ. ಕೇಂದ್ರ ಮತ್ತುರಾಜ್ಯ ಸರ್ಕಾರಕ್ಕೆ ದೆಹಲಿ ವಿಶೇಷ ಪ್ರತಿನಿಧಿಯ ಸ್ಥಾನ ಸೇತುವೆಯಿದ್ದಂತೆ.
ಎಲ್ಲಾ ಸಚಿವರ ಪ್ರಸ್ತಾನವೆಗಳು ದೆಹಲಿ ವಿಶೇಷ ಪ್ರತಿನಿಧಿಗಳಾಗಿರುವ ಅಜಯ್ ಸಿಂಗ್ ಅವರಿಗೆ ಹೋಗುತ್ತವೆ. ಇದನ್ನು ನಿಭಾಯಿಸಲು ಅಜಯ್ ಸಿಂಗ್ ಅವರು ಸಮರ್ಥರಾಗಿದ್ದಾರೆ ಎಂದರು.
ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಅಜಯ್ ಸಿಂಗ್ ಅವರು, ತಂದೆಗಿಂತಲೂ ಹೆಚ್ಚು ಜನಾನುರಾಗಿಯಾಗಿದ್ದು ಜನರೊಂದಿಗೆ ಹೆಚ್ಚು ಒಡನಾಡಿಯಾಗಿದ್ದಾರೆ. ಅಜಯ್ ಸಿಂಗ್ ಅವರನ್ನು ಸಚಿವರಾಗಿ ನೋಡುವ ಆಸೆಯಿತ್ತು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗುವ ಪರಿಸ್ಥಿತಿ ಬರಲಿಲ್ಲ. ಮೊದಲಿಗೆ ದೆಹಲಿ ವಿಶೇಷ ಪ್ರತಿನಿಧಿ ಸ್ಥಾನವನ್ನು ಅವರು ಒಪ್ಪಿರಲಿಲ್ಲ. ಆದರೆ ಪಕ್ಷಕ್ಕೆ ಮತ್ತು ಪಕ್ಷದ ವರಿಷ್ಠರ ಮಾತಿಗೆ ಮನ್ನಣೆಕೊಟ್ಟು ಕೊನೆಗೆ ಒಪ್ಪಿದ್ದಾರೆ. ದೆಹಲಿ ವಿಶೇಷ ಪ್ರತಿನಿಧಿಯಾಗಿರುವುದರಿಂದ ಅವರಿಗೆ ಒಳ್ಳೆಯ ರಾಜಕೀಯ ಅನುಭವ ಸಿಗಲಿದೆ. ಇದರಿಂದ ಮುಂದೆ ಅವರಿಗೆ ರಾಜಕೀಯದಲ್ಲಿ ಅನುಕೂಲವಾಗಲಿದೆ ಎಂದು ಹಾರೈಸಿದರು.
ಆರೋಗ್ಯ ಕಲ್ಯಾಣ ಸಚಿವ ಶಿವಾನಂದ್‍ಪಾಟೀಲ್ ಮಾತನಾಡಿ, ಅಜಯ್ ಸಿಂಗ್ ಅವರಿಗೆ ತಂದೆಯ ಸ್ಥಾನವನ್ನು ಜೇವರ್ಗಿ ಜನತೆ ತುಂಬಿದ್ದಾರೆ. ಪಕ್ಷದಲ್ಲಿ ಧರಂಸಿಂಗ್ ಇಲ್ಲ ಎನ್ನುವ ಕೊರಗನ್ನು ಅವರು ತುಂಬಿದ್ದಾರೆ. ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಧರಂಸಿಂಗ್ ಜೋಡಿ ಹೇಗೆ ಕೆಲಸ ಮಾಡಿದ್ದರೋ ಅದರಂತೆ ಪ್ರಿಯಾಂಕ್ ಖರ್ಗೆ ಮತ್ತು ಅಜಯ್ ಸಿಂಗ್ ಒಟ್ಟಿಗೆ ಸೇರಿ ಕೆಲಸ ಮಾಡಬೇಕು. ದೆಹಲಿ ವಿಶೇಷ ಪ್ರತಿನಿಯಾಗಿರುವ ಅಜಯ್ ಸಿಂಗ್ ಅವರಿಗೆ ಮುಂದೆ ಉಜ್ವಲ ಭವಿಷ್ಯ ಇದೆ ಎಂದು ಕಿವಿಮಾತು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಇ.ತುಕಾರಾಮ್ ಮಾತನಾಡಿ,ಹೈದರಾಬಾದ್ ಕರ್ನಾಟಕ ರಾಜಕೀಯದಲ್ಲಿ ಧರಂಸಿಂಗ್ ಅವರ ಹೆಸರು ಅಜರಾಮರ. ಮುಂದಿನ ದಿನಗಳಲ್ಲಿ ಅಜಯ್ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತ ಎಂದು ಭವಿಷ್ಯ ನುಡಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಅಜಯ್‍ಸಿಂಗ್ ಅವರಿಗೆ ಸರ್ಕಾರ ಮಹತ್ವದ ಜವಾಬ್ದಾರಿ ವಹಿಸಿದೆ. ಮಂತ್ರಿಯಾಗಿ ನೇಮಕವಾದವರಿಗೂ ಈ ರೀತಿಯ ಕಾರ್ಯಕ್ರಮ ನಡೆದಿರಲಿಲ್ಲ. ಇದಕ್ಕೆ ಧರಂಸಿಂಗ್ ಅವರ ಮೇಲಿನ ಅಭಿಮಾನ ಅಜಯ್ ಸಿಂಗ್ ಅವರ ಮೇಲಿನ ಪ್ರೀತಿ ಕಾರಣ. ಯಾವುದೇ ಸಂಕುಚಿತ ಮನೋಭಾವ ಇಲ್ಲದ ವ್ಯಕಿತ್ವ ಅಜಯ್ ಸಿಂಗ್ ಅವರದ್ದು. ಅಜಯ್ ಸಿಂಗ್ ಕಾಂಗ್ರೆಸ್ ಬಿಟ್ಟು ಹೋಗಲಿದ್ದಾರೆ ಎಂದು ಸುದ್ದಿಯಾಗಿತ್ತು. ಅವರೆಂದಿಗೂ ಕಾಂಗ್ರೆಸ್ ಅನುಯಾಯಿ. ಎಂದಿಗೂ ಅವರು ಪಕ್ಷ ಬಿಟ್ಟು ಹೋಗುವುದಿಲ್ಲ.
ಅಜಯ್ ಸಿಂಗ್ ಅವರಿಗೆ ಮಂತ್ರಿಯಾಗಬೇಕೆಂಬ ಆಸೆಯಿತ್ತು. ಆ ಬಗ್ಗೆ ಅವರು ತಮ್ಮ ಬಳಿ ಪ್ರಸ್ತಾಪ ಇಟ್ಟಿದ್ದರು. ಸಚಿವರಾಗಲು ತಾವು 6 ಬಾರಿ ಗೆಲ್ಲಬೇಕಾಯಿತು ಎಂಬುದನ್ನು ಉದಾಹರಿಸಿ ಅವರಿಗೆ ತಾಳ್ಮೆಯಿಂದಿರಲು ಹೇಳಿದೆ. ಪಕ್ಷ ಮತ್ತು ಸರ್ಕಾರ ಇವರನ್ನು ಗುರುತಿಸಿದೆ. ತಾಳ್ಮೆ ಹಾಗೂ ಪಕ್ಷಕ್ಕೆ ನಿಷ್ಠೆಯಿಂದ ಇದ್ದರೆ ಸಚಿವ ಸ್ಥಾನ ಅವರ ಮನೆಬಾಗಿಲಿಗೆ ಹುಡುಕಿಕೊಂಡು ಬರಲಿದೆ. ರಾಜಕೀಯದ ಇತಿಹಾಸದ ಹಿನ್ನೆಲೆ ಇರುವ ಅಜಯ್ ಅವರಿಗೆ ರಾಜಕೀಯ ಭವಿಷ್ಯವೂ ಇದೆ ಎಂದು ಹಾರೈಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ,ಅಜಯ್ ಸಿಂಗ್ ಅವರು ಜೇವರ್ಗಿ ಜೊತೆಗೆ ಉತ್ತರ ಕರ್ನಾಟಕ ಭಾಗದ ಜನರ ಪ್ರೀತಿ ಗೆದ್ದಿದ್ದಾರೆ. ಹೀಗಾಗಿ ಸಚಿವ ಸಂಪುಟದ ಸ್ಥಾನಮಾನದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ ಎಂದರು.
ಶಾಸಕ ಅಜಯ್ ಸಿಂಗ್ ಮಾತನಾಡಿ, ಕೇಂದ್ರದಿಂದ ಬಹಳಷ್ಟು ಹೆಚ್ಚಿನ ಅನುದಾನಗಳು ರಾಜ್ಯಕ್ಕೆ ಬರುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜೀವನ ಮತ್ತು ರಾಜಕೀಯದಲ್ಲಿ ತಾಳ್ಮೆ ಇರಬೇಕು ಎಂದು ತಂದೆಯವರು ಹೇಳುತ್ತಿದ್ದರು. ಕಾಂಗ್ರೆಸಿಗನಾಗಿಯೇ ಅವರು ಇಡೀ ಜೀವನವನ್ನು ಕಳೆದರು. ತಂದೆಯವರು ಹಾಕಿಕೊಟ್ಟ ಹಾದಿಯಲ್ಲೇ ಸಾಗುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮ ಆರಂಭದಲ್ಲಿ ನಿಧನರಾದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ಸಂತಾಪ ಸೂಚನೆ ಸಲ್ಲಿಸಲಾಯಿತು .ಒಟ್ಟಾರೆ ಅಜಯ್ ಸಿಂಗ್ ಪದಗ್ರಹಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ದಿಗ್ಗಜ್ಜರು ಆಗಮಿಸಿ ಒಗ್ಗಟ್ಟು ಪ್ರದರ್ಶಿಸಿದ್ದು ವಿಶೇಷವಾಗಿತ್ತು.