ತುಮಕೂರು
ತುಮಕೂರು ನಗರದಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಕಸವನ್ನು ತುಮಕೂರು ತಾಲ್ಲೂಕು ಅಜ್ಜಗೊಂಡನಹಳ್ಳಿಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿದ್ದು, ಸದರಿ ಘಟಕ ಅವ್ಯವಸ್ಥೆಗಳಿಂದ ಕೂಡಿದೆ ಎಂದು ತುಮಕೂರು ಮಹಾನಗರ ಪಾಲಿಕೆಯ ಸಭೆಯಲ್ಲಿ ಸ್ವತಃ ಮೇಯರ್ ಸೇರಿದಂತೆ ಕೆಲವು ಸದಸ್ಯರುಗಳು ಅಧಿಕಾರಿಗಳ ವಿರುದ್ಧ ಗರಂ ಆದ ಪ್ರಸಂಗ ಗುರುವಾರ ನಡೆಯಿತು.
ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯನ್ನು ಎರಡನೇ ದಿನವಾದ ಗುರುವಾರವೂ ಮುಂದುವರೆಸಲಾಯಿತು. ಜೊತೆಗೇ ‘‘ಶೂನ್ಯವೇಳೆ’’ಯೂ ಮುಂದುವರೆಯಿತು. ಮೇಯರ್ ಲಲಿತಾ ರವೀಶ್ (ಜೆಡಿಎಸ್- 21 ನೇ ವಾರ್ಡ್) ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಪಾಲಿಕೆಯ ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿಯ ಅಧ್ಯಕ್ಷೆ ಮಂಜುಳ ಆದರ್ಶ್ (ಬಿಜೆಪಿ- 25 ನೇ ವಾರ್ಡ್) ವಿಷಯವನ್ನು ಪ್ರಸ್ತಾಪಿಸಿದಾಗ, ಅದು ಬಿಸಿ ಬಿಸಿ ಚರ್ಚೆಗೆ ಎಡೆಮಾಡಿತು.
‘‘ಅಜ್ಜಗೊಂಡನಹಳ್ಳಿಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮೇಯರ್ ಸೇರಿ ಕೆಲವು ಸದಸ್ಯರುಗಳು ಭೇಟಿ ಕೊಟ್ಟಿದ್ದೆವು. ಆಗ ಅಲ್ಲಿನ ಅವ್ಯವಸ್ಥೆಗಳು ನಮ್ಮ ಗಮನಕ್ಕೆ ಬಂದವು. ಕಸದ ರಾಶಿ ತುಂಬಿತ್ತು. ಹಸಿಕಸ -ಒಣಕಸ ಎಂಬ ವಿಂಗಡಣೆ ಇಲ್ಲದೆ ಕಲಸಿಕೊಂಡಂತಿತ್ತು. ಎರೆಹುಳು ಗೊಬ್ಬರ ಮಾಡುತ್ತಿದ್ದ ಕಸದಲ್ಲೂ ಪ್ಲಾಸ್ಟಿಕ್ ಇದ್ದುದು ಕಂಡುಬಂದಿತ್ತು. ಇನ್ನು ಸಿ.ಸಿ. ಟಿವಿ ವ್ಯವಸ್ಥೆ ಸಂಪೂರ್ಣವಾಗಿ ಅಸಮರ್ಪಕವಾಗಿದ್ದುದು ನಮ್ಮ ಗಮನಕ್ಕೆ ಬಂದಿತ್ತು. ಜೊತೆಗೆ ಸಿ.ಸಿ. ಟಿವಿ ಫುಟೇಜ್ ನೀಡುವಂತೆ ಸ್ವತಃ ಮೇಯರ್ ಸೂಚಿಸಿದ್ದರೂ, ಈವರೆಗೆ ಅದು ಅಧಿಕಾರಿಗಳು ಒದಗಿಸಿಲ್ಲ’’ ಎಂದು ಮಂಜುಳ ಆದರ್ಶ್ ಆರೋಪಿಸಿದರು.
ಸದಸ್ಯ ಬಿ.ಎಸ್.ಮಂಜುನಾಥ್ (ಜೆಡಿಎಸ್- 17 ನೇ ವಾರ್ಡ್) ಇದಕ್ಕೆ ದನಿಗೂಡಿಸುತ್ತ, ಅಂದು ಘಟಕಕ್ಕೆ ಭೇಟಿ ಕೊಟ್ಟಿದ್ದ ಸಂದ‘ರ್ದಲ್ಲಿ ತೆಗೆಯಲಾಗಿದ್ದ ಫೋಟೋಗಳನ್ನು ಪ್ರದರ್ಶಿಸಿದರು. ಜೊತೆಗೆ ಕೋಳಿ ಕಸವನ್ನು ಯಾವ ರೀತಿ ವಿಲೇವಾರಿ ಮಾಡಲಾಗುತ್ತಿದೆಯೆಂಬುದನ್ನೂ ಪ್ರಶ್ನಿಸಿದರು. ‘‘ಪಾಲಿಕೆಯಿಂದ ಘಟಕಕ್ಕೆ ಕೋಟ್ಯಂತರ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದ್ದರೂ, ಪ್ರಯೋಜನವಾಗುತ್ತಿಲ್ಲ. ಅಲ್ಲದೆ ಪ್ರಸ್ತುತ ತುಮಕೂರು ನಗರದಲ್ಲೇ ಕಸವನ್ನು ವಿಂಗಡಣೆ ಮಾಡಿ ಬಳಿಕ ಘಟಕಕ್ಕೆ ಒಯ್ಯಲಾಗುತ್ತಿದ್ದರೂ, ಅದರಿಂದಲೂ ಉಪಯೋಗವಾಗುತ್ತಿಲ್ಲ’’ ಎಂದು ಮಂಜುಳ ಆದರ್ಶ್ ಅಸಮಾಧಾನ ವ್ಯಕ್ತಪಡಿಸಿದರು.
ಇತರೆ ಸದಸ್ಯರುಗಳೂ ದನಿಯೆತ್ತಿದರು. ಆಗ ಸ್ವತಃ ಮೇಯರ್ ಲಲಿತಾ ರವೀಶ್ ಘಟಕದ ನಿರ್ವಹಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು. ಸದಸ್ಯರ ಪ್ರಶ್ನೆಗಳಿಗೆ ಘಟಕದ ಜವಾಬ್ದಾರಿ ಹೊತ್ತಿರುವ ಪರಿಸರ ಇಂಜಿನಿಯರ್ ಕೃಷ್ಣಮೂರ್ತಿ ಉತ್ತರ ಕೊಡಲು ಯತ್ನಿಸಿದರೂ, ಮೇಯರ್ ಸಹಿತ ಸದರಿ ಸದಸ್ಯರುಗಳು ಗರಂ ಆದರು. ‘‘ತಿಂಗಳಾಗುತ್ತ ಬಂತು. ಇನ್ನೂ ನನಗೆ ಸಿ.ಸಿ. ಟಿವಿ ಫೋಟೇಜ್ ಕೊಟ್ಟಿಲ್ಲ. ಈಗಲೂ ನಾಳೆ ಕೊಡುತ್ತೇನೆ ಅಂತೀರಾ?’’ ಎಂದು ಮೇಯರ್ ತರಾಟೆಗೆ ತೆಗೆದುಕೊಂಡರು. ಆಗ ಮಂಜುನಾಥ್ ‘‘ಸದರಿ ಅಧಿಕಾರಿಯನ್ನು ಅಮಾನತುಗೊಳಿಸಿ’’ ಎಂದು ಕೂಗಿದರು.
ಮತ್ತೆ ಉತ್ತರ ನೀಡಿದ ಪರಿಸರ ಇಂಜಿನಿಯರ್ ಕೃಷ್ಣಮೂರ್ತಿ ಸದರಿ ಸಿಸಿ ಟಿ.ವಿ. ಸಂಜೆಯೊಳಗೆ ಕೊಡುವುದಾಗಿ ಮೇಯರ್ರಿಗೆ ತಿಳಿಸಿದರು. ಈ ಮಧ್ಯ ಆಯುಕ್ತ ಟಿ.ಭೂಬಾಲನ್ ಸಹ ಅಧಿಕಾರಿಗಳಿಂದ ಮಾಹಿತಿ ಪಡೆದು, ಈ ಬಗ್ಗೆ ಪರಿಶೀಲಿಸುವುದಾಗಿ ‘ರವಸೆ ನೀಡಿದಾಗ ವಿಷಯ ಅಂತ್ಯಗೊಂಡಿತು.
ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ವಿ.ಎಸ್.ಗಿರಿಜಾ (ಬಿಜೆಪಿ -15 ನೇ ವಾರ್ಡ್) ಮಾತನಾಡಿ, ಪೌರಕಾರ್ಮಿಕರಿಗೆ ಅಗತ್ಯ ಸಲಕರಣೆಗಳು ಸಕಾಲಕ್ಕೆ ಪೂರೈಕೆಯಾಗುತ್ತಿಲ್ಲ. ಶೂ, ಸಮವಸ್ತ್ರ, ಕೈಗವಸು ಸಹ ದೊರೆಯುತ್ತಿಲ್ಲ ಎಂದು ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಟಿ.ಭೂಬಾಲನ್, ಅಕ್ಟೋಬರ್ 15 ರೊಳಗೆ ಸ್ಮಾರ್ಟ್ಸಿಟಿ ವತಿಯಿಂದ ಅಗತ್ಯ ಸೌಲಭ್ಯ ಗಳನ್ನು ಪೌರಕಾರ್ಮಿಕರಿಗೆ ಒದಗಿಸಲಾಗುವುದು ಎಂದು ಹೇಳಿದರು.
ಮತ್ತೆ ಮಾತು ಮುಂದುವರೆಸಿದ ಗಿರಿಜಾ, ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಸಮಾರಂ‘ಗಳಿಗೆ ಅಲ್ಲಿನ ಶಾಲಾ ಸಮಿತಿಯು ಹಣವನ್ನು ಸ್ವೀಕರಿಸುತ್ತದೆ. ಆದರೆ ಯಾವುದೇ ಕಾರ್ಯಕ್ರಮ ನಡೆಯುವ ಮೊದಲು ಮತ್ತು ಬಳಿಕ ಪಾಲಿಕೆಯ ಪೌರಕಾರ್ಮಿಕರನ್ನು ಪುಕ್ಕಟ್ಟೆಯಾಗಿ ಸ್ವಚ್ಛತೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದ ಇನ್ನುಮುಂದೆ ಪೌರಕಾರ್ಮಿಕರನ್ನು ಅಲ್ಲಿಗೆ ಕಳಿಸಬಾರದು ಎಂದು ಕೋರಿದರು. ಗಾಂಧಿನಗರದಲ್ಲಿರುವ ಮೊಬೈಲ್ ಟವರ್ನಿಂದ ಆರೋಗ್ಯಕ್ಕೆ ಹಾನಿ ಆಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿದೆಯೆಂದೂ ಸಭೆಯ ಗಮನಕ್ಕೆ ತಂದರು. ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದರು.
ಇದೇ ಸಂದ‘ರ್ದಲ್ಲಿ ಮೇಯರ್ ಲಲಿತಾ ರವೀಶ್ ‘‘ ಸದಸ್ಯರು ಕೆಲವೊಂದು ವಿಚಾರಗಳನ್ನು ಆಯಾ ಸ್ಥಾಯಿ ಸಮಿತಿ ಸಭೆಯ ಹಂತದಲ್ಲೇ ಚರ್ಚಿಸಬೇಕು. ಅಲ್ಲೇ ಇತ್ಯರ್ಥಪಡಿಸಿಕೊಳ್ಳಬೇಕು. ಅದಕ್ಕಾಗಿಯೇ ನಾಲ್ಕು ಪ್ರತ್ಯೇಕ ಸ್ಥಾಯಿ ಸಮಿತಿಗಳಿವೆ. ಆದರೆ ಅಲ್ಲಿ ಚರ್ಚೆ ಮಾಡದೆ, ಅಂಥ ವಿಚಾರಗಳನ್ನು ನೇರವಾಗಿ ಸಾಮಾನ್ಯ ಸಭೆಗೆ ತಂದರೆ, ಸಭೆ ನಡೆಯುವುದು ಹೇಗೆ? ಈ ಸಭೆಯ ಅಜೆಂಡಾ ಪ್ರಕಾರ ಚರ್ಚೆ ಮಾಡುವುದು ಯಾವಾಗ?’’ ಎಂಬ ಪ್ರಶ್ನೆಯನ್ನು ಮುಂದಿಟ್ಟರು.
ಚರ್ಚೆಯ ಮಧ್ಯ ಪ್ರವೇಶಿಸಿದ ಸದಸ್ಯ ಟಿ.ಕೆ.ನರಸಿಂಹಮೂರ್ತಿ (ಜೆಡಿಎಸ್- 23 ನೇ ವಾರ್ಡ್), ‘‘ನಿನ್ನೆಯಿಂದ ಸಭೆಯನ್ನು ನೋಡುತ್ತಿದ್ದೇನೆ. ಎಲ್ಲ ಸದಸ್ಯರುಗಳೂ ಅಧಿಕಾರಿಗಳ ವಿರುದ್ಧ ಆರೋಪ ಮಾಡುತ್ತಲೇ ಇದ್ದಾರೆ. ಕೆಲವು ಸದಸ್ಯರುಗಳು ಕೆಲವು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಎಂದು ಹೇಳುತ್ತಿದ್ದಾರೆ. ಇದನ್ನು ನೋಡಿದರೆ ಈ ಪಾಲಿಕೆಯಲ್ಲಿರುವ ಎಲ್ಲ ಅಧಿಕಾರಿಗಳೂ ಭ್ರಷ್ಟರೆಂದೇ ತಿಳಿದುಕೊಳ್ಳಬೇಕಾ? ಎಲ್ಲರ ಮೇಲೂ ಕ್ರಮ ಕೈಗೊಳ್ಳಬೇಕಾ? ಸಭೆ ಹೀಗೇ ಮುಂದುವರೆದರೆ ನಮ್ಮ ವಾರ್ಡ್ ಸಮಸ್ಯೆಗಳನ್ನು ಎಲ್ಲಿ ಹೇಳೋಣ?’’ ಎಂದು ಏರಿದ ದನಿಯಲ್ಲಿ ಹೇಳುತ್ತಿದ್ದಂತೆ ಇಡೀ ಸಭೆ ನಗೆಗಡಲಲ್ಲಿ ತೇಲಿತು.
ಇ.ಇ. ವಿರುದ್ಧ ಆಕ್ರೋಶ
ತೆರಿಗೆ ನಿ‘ರ್ರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (ಜೆಡಿಎಸ್- 3 ನೇ ವಾರ್ಡ್) ಮಾತನಾಡಿ, ಶಿರಾಗೇಟ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆಂದು ಕೆಲವೊಂದು ಕಟ್ಟಡಗಳನ್ನು ತೆರವು ಮಾಡಿದ್ದ ಬಗ್ಗೆ ನಿರ್ಣಯ ಕೈಗೊಂಡಿದ್ದು ಆ ಬಗ್ಗೆ ಮುಂದಿನ ಪ್ರಕ್ರಿಯೆ ಏನೆಂದು ಪ್ರಶ್ನಿಸುವ ಸಂದ‘ರ್ದಲ್ಲಿ ಪಾಲಿಕೆಯ ಎಕ್ಸಿಕ್ಯುಟೀವ್ ಇಂಜಿನಿಯರ್ ಆಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗವೂ ಜರುಗಿತು.
ಶಿರಾಗೇಟ್ನ ಸದರಿ ಸ್ಥಳದಲ್ಲಿ ತಾವು ಈಗಾಗಲೇ ಸ್ಥಳಪರಿಶೀಲನೆ ಮಾಡಿರುವುದಾಗಿಯೂ, ಆಸ್ತಿ ಕಳೆದುಕೊಂಡಿರುವ ಓರ್ವರು ಪ್ರಸ್ತುತ ಬಂದು ದಾಖಲಾತಿ ನೀಡಿದ್ದಾರೆಂದೂ ಎಕ್ಸಿಕ್ಯುಟೀವ್ ಇಂಜಿನಿಯರ್ ಆಶಾ ಹೇಳಿದರು. ಈ ಮಾತು ಲಕ್ಷ್ಮೀನರಸಿಂಹರಾಜು ಅವರನ್ನು ಕೆರಳಿಸಿತು. ‘‘ನೀವು ಭೇಟಿ ನೀಡುವಾಗ ನನಗೆ ಮಾಹಿತಿ ನೀಡಿದ್ದಿರಾ? ನನ್ನನ್ನೇಕೆ ಸ್ಥಳಕ್ಕೆ ಆಹ್ವಾನಿಸಲಿಲ್ಲ? ಜೊತೆಗೆ ಒಬ್ಬರು ಬಂದು ದಾಖಲಾತಿ ನೀಡಿದ್ದಾರೆಂದು ಸುಳ್ಳು ಹೇಳುತ್ತೀರಾ? ಎಲ್ಲ ದಾಖಲಾತಿಗಳೂ ನನ್ನ ಬಳಿ ಇವೆ.
ಅನೇಕ ಬಾರಿ ಈ ವಿಷಯವಾಗಿ ನಾನು ನಿಮ್ಮ ಗಮನ ಸೆಳೆದಿದ್ದೇನೆ. ಆದರೂ ನೀವು ನನಗೆ ಮಾಹಿತಿ ನೀಡಿಲ್ಲ. ನಿಮ್ಮನ್ನು ನೀವು ತಿದ್ದಿಕೊಳ್ಳಿ’’ ಎಂದು ಏರಿದ ದನಿಯಲ್ಲಿ ಗರಂ ಆದರು. ಇದಕ್ಕೆ ಪ್ರತಿಕ್ರಿಯಿಸಿದ ಆಶಾ, ‘‘ನಾನೇನು ಸುಳ್ಳು ಹೇಳುತ್ತಿಲ್ಲ. ಒಬ್ಬರು ಬಂದು ದಾಖಲೆ ಕೊಟ್ಟಿದ್ದಾರೆ. ಇದು ನಿಜ. ನೀವು ಹೇಳುವ ಪ್ರಕಾರ ನಮ್ಮದು ಬೇಜವಾಬ್ದಾರೀನಾ?’’ ಎಂದು ಪ್ರಶ್ನಿಸಿದಾಗ, ಥಟ್ಟನೆ ಪ್ರತಿಕ್ರಿಯಿಸಿದ ಲಕ್ಷ್ಮೀನರಸಿಂಹರಾಜು ‘‘ಹೌದು, ಬೇಜವಾಬ್ದಾರೀನೇ’’ ಎಂದು ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದರು.
ಲಕ್ಷ್ಮೀನರಸಿಂಹರಾಜು ಅವರ ಮತ್ತೊಂದು ವಿಷಯಕ್ಕೆ ಉತ್ತರಿಸಿದ ಪಾಲಿಕೆಯ ಉಪ ಆಯುಕ್ತ (ಕಂದಾಯ) ಯೋಗಾನಂದ್, ‘‘ಕೈಗಾರಿಕಾ ಪ್ರದೇಶದವರ ಬೇಡಿಕೆಗಳ ಬಗ್ಗೆ ಸರ್ಕಾರದ ಹಂತದಲ್ಲಿ ನಿರ್ಧಾರ ಆಗಬೇಕು. ಹಾಲಿ ಪಾಲಿಕೆಯ ಹಂತದಲ್ಲಿ ವಸತಿ ಮತ್ತು ವಾಣಿಜ್ಯ ಎಂಬ ಎರಡು ವಿಧಾನಗಳಷ್ಟೇ ಕಂದಾಯ ವಸೂಲಿಗೆ ಚಾಲ್ತಿಯಲ್ಲಿದೆ. ಇದರೊಂದಿಗೆ ಕೈಗಾರಿಕೆ ಎಂದು ಸೇರಿಸಿಕೊಳ್ಳುವಂತೆ ಕೈಗಾರಿಕೋದ್ಯಮಿಗಳು ಕೇಳುತ್ತಿದ್ದು, ಈ ಬಗ್ಗೆ ಸರ್ಕಾರವೇ ತೀರ್ಮಾನಿಸಬೇಕಾಗಿದೆ. ಆವರೆಗೆ ಪಾಲಿಕೆ ವ್ಯಾಪ್ತಿಯ ತೆರಿಗೆ ಸಂಗ್ರಹಕ್ಕೆ ಪಾಲಿಕೆಯ ಪ್ರಕ್ರಿಯೆಗಳು ಚಾಲನೆಯಲ್ಲಿವೆ’’ ಎಂದು ಸ್ಪಷ್ಟಪಡಿಸಿದರು.
ಎಸ್.ಟಿ.ಪಿ. ಬದಲು ನೀರು ಕೊಡಿ
ನಗರದ ಮರಳೂರು ಕೆರೆಯ ಬಳಿ ಎಸ್.ಟಿ.ಪಿ. ಘಟಕ ನಿರ್ಮಿಸಿ ಆ ಮೂಲಕ ಕೊಳಚೆ ನೀರನ್ನು ಶುದ್ಧೀಕರಿಸಿ ಕೆರೆಯನ್ನು ತುಂಬಿಸಬೇಕೆಂಬ ಆಲೋಚನೆಗೆ ಆ ಭಾಗದ ಸದಸ್ಯ ‘ರಣೇಂದ್ರ ಕುಮಾರ್ (ಜೆಡಿಎಸ್- 28 ನೇ ವಾರ್ಡ್) ವಿರೋ‘ ವ್ಯಕ್ತಪಡಿಸಿದ ಮತ್ತೊಂದು ಬೆಳವಣಿಗೆಯೂ ಸಭೆಯಲ್ಲಿ ನಡೆಯಿತು.
‘‘ಮರಳೂರು ಕೆರೆಗೆ ಎಸ್.ಟಿ.ಪಿ. ಬೇಡ. ಅದರ ಬದಲಾಗಿ ಹೇಮಾವತಿ ನೀರನ್ನು ಗಂಗಸಂದ್ರ ಕೆರೆಯಿಂದ ತುಂಬಿಸುವ ಮೂಲಕ ಕುಡಿಯುವ ನೀರಿನ ಯೋಜನೆಯಾಗಿ ಮಾರ್ಪಡಿಸಬೇಕು. ಇದರಿಂದ ಈ ಭಾಗದ ಸುಮಾರು 10 ವಾರ್ಡ್ಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ’’ ಎಂಬ ಹೊಸ ಬೇಡಿಕೆಯೊಂದನ್ನು ಮುಂದಿಟ್ಟರು.
ಸ‘ೆಯ ಆರಂ‘ದಲ್ಲಿ ಇಂದಿರಾ ಕ್ಯಾಂಟೀನ್ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ರಚಿಸಲಾಗಿರುವ ಅಧಿಕಾರಿಗಳ ತನಿಖಾ ತಂಡದ ಬಗ್ಗೆ ತಮಗೆ ಅನುಮಾನ ಇದೆಯೆಂದು ಸದಸ್ಯ ಎಚ್.ಮಲ್ಲಿಕಾರ್ಜುನಯ್ಯ (ಬಿಜೆಪಿ- 26 ನೇ ವಾರ್ಡ್), ವಿರೋ‘ ಪಕ್ಷದ ನಾಯಕ ಸಿ.ಎನ್.ರಮೇಶ್ (ಬಿಜೆಪಿ- 31 ನೇ ವಾರ್ಡ್), ಜೆ.ಕುಮಾರ್ (ಕಾಂಗ್ರೆಸ್- 7 ನೇ ವಾರ್ಡ್) ಮತ್ತಿತರ ಸದಸ್ಯರುಗಳು ಅಭಿಪ್ರಾಯ ವ್ಯಕ್ತಪಡಿಸಿದಾಗ, ಆಯುಕ್ತ ಟಿ.ಭೂಬಾಲನ್ ‘‘ಪಾಲಿಕೆ ಅಧಿಕಾರಿಗಳ ಮೇಲೆ ಆರೋಪ ಬಂದ ಹಿನ್ನೆಲೆಯಲ್ಲಿ ಇತರೆ ಇಲಾಖೆಯ ದಕ್ಷ ಅಧಿಕಾರಿಗಳಿಂದ ತನಿಖೆ ಮಾಡಿಸಲು ತನಿಖಾ ತಂಡ ರಚಿಸಲಾಗಿದೆ.
ಆದರೆ ಈಗ ನೀವು ಆ ತನಿಖಾ ತಂಡದ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದೀರಿ. ಆ ಮೂಲಕ ನನ್ನ ಮೇಲೂ ನೀವು ಅವಿಸ್ವಾಸ ಸೂಚಿಸಿದಂತಾಗಿದೆ. ಆದ್ದರಿಂದ ಆ ಸಮಿತಿಯನ್ನೇ ವಿಸರ್ಜಿಸಿಬಿಡುತ್ತೇನೆ. ನಿಮ್ಮ ಅಪೇಕ್ಷೆಯ ಪ್ರಕಾರ ಲೋಕಾಯುಕ್ತ, ಎಸಿಬಿ, ಸಿಬಿಐ, ಇಂಟರ್ಪೋಲ್ ಹೀಗೆ ನೀವು ಇಚ್ಛಿಸುವ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಲು ನೀವೇ ನಿ‘ರ್ರಿಸಿ. ನನ್ನದೇನೂ ತಕರಾರಿಲ್ಲ’’ ಎಂದು ಸ್ವಲ್ಪ ಅಸಮಾ‘ಾನದಿಂದಲೇ ಪ್ರತಿಕ್ರಿಯಿಸಿದರು. ಈ ಮಾತಿನ ಗಂಭೀರತೆಯನ್ನು ತಕ್ಷಣವೇ ಅರ್ಥ ಮಾಡಿಕೊಂಡ ಸದಸ್ಯ ಎ.ಶ್ರೀನಿವಾಸ್ (ಜೆಡಿಎಸ್- 20 ನೇ ವಾರ್ಡ್) ‘‘ಇನ್ನೂ ತನಿಖೆ ಪೂರ್ಣಗೊಂಡಿಲ್ಲ. ಆದ್ದರಿಂದ ಈಗಲೇ ಆ ಬಗ್ಗೆ ಮಾತನಾಡುವುದು ಸರಿಯೆನಿಸುವುದಿಲ್ಲ’’ ಎಂದು ಸದಸ್ಯರನ್ನು ಸಮಾಧಾನಿಸಲು ಯತ್ನಿಸಿದರು. ಅಷ್ಟರಲ್ಲಿ ಇತರೆ ಸದಸ್ಯರುಗಳು ತಮಗೆ ಆಯುಕ್ತರ ಮೇಲೆ ಪೂರ್ಣ ವಿಶ್ವಾಸ ಇದೆ ಎಂದು ಪದೇ ಪದೇ ಹೇಳಿದರು.
ಕನ್ನಡ ಲಕ ಹಾಕಿಸಿ
‘‘ನಗರದ ಮಹಾತ್ಮಗಾಂಧಿ ರಸ್ತೆಯ ಅನೇಕ ಅಂಗಡಿಗಳ ನಾಮಲಕಗಳು ಕನ್ನಡದಲ್ಲಿಲ್ಲ. ಬೇರೆ ಬೇರೆ ಭಾಷೆಯಲ್ಲಿವೆ. ಆದ್ದರಿಂದ ತಕ್ಷಣವೇ ಸದರಿ ನಾಮಲಕಗಳನ್ನು ಕನ್ನಡದಲ್ಲಿ ಹಾಕುವಂತೆ ಪಾಲಿಕೆ ಕ್ರಮ ಕೈಗೊಳ್ಳಬೇಕು’’ ಎಂದು ಬಿ.ಎಸ್.ಮಂಜುನಾಥ್ (ಜೆಡಿಎಸ್-17 ನೇ ವಾರ್ಡ್) ಒತ್ತಾಯಿಸಿದಾಗ, ಎಲ್ಲರೂ ಅದಕ್ಕೆ ಸಹಮತ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಟಿ.‘ೂಪಾಲನ್, ‘‘ಅದೊಂದೇ ರಸ್ತೆಯಲ್ಲ, ಇಡೀ ನಗರದಲ್ಲಿ ಎಲ್ಲ ವಾಣಿಜ್ಯ ಮಳಿಗೆಗಳೂ ಕನ್ನಡದ ನಾಮಲಕವನ್ನು ಹಾಕಲೇಬೇಕು. ಆ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು’’ ಎಂದು ಉತ್ತರಿಸಿದರು.
ಇದಕ್ಕೆ ಸದಸ್ಯರು ಮೇಜು ಕುಟ್ಟಿ ಸಂತಸ ವ್ಯಕ್ತಪಡಿಸಿದರು.ಸದಸ್ಯೆ ರೀದಾ ಬೇಗಂ (ಕಾಂಗ್ರೆಸ್- 13 ನೇ ವಾರ್ಡ್) ಮಾತನಾಡುತ್ತ, ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಿಗದಿತ ಕಾಲಕ್ಕೆ ಪೂರ್ಣಗೊಳ್ಳದೆ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಮಾರ್ಟ್ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಆಯುಕ್ತ ಟಿ.ಭೂಬಾಲನ್, ಕಾಮಗಾರಿಯಲ್ಲಿ ವಿಳಂಬ ಆಗುತ್ತಿರುವುದು ನಿಜ. ಆದರೆ ತಾವು ಅಲ್ಲಿನ ಜವಾಬ್ದಾರಿಯನ್ನು ವಹಿಸಿಕೊಂಡ ಬಳಿಕ ಕಾಮಗಾರಿಗಳು ಚುರುಕಾಗುವಂತೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. ಸಭೆಯಲ್ಲಿ ಉಪಮೇಯರ್ ಬಿ.ಎಸ್.ರೂಪಶ್ರೀ (ಕಾಂಗ್ರೆಸ್- 19 ನೇ ವಾರ್ಡ್) ಹಾಗೂ ಪಾಲಿಕೆಯ ವಿವಿ‘ ವಿಭಾಗಗಳ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
