ಚಿಕ್ಕನಾಯಕನಹಳ್ಳಿ
ತಾಲ್ಲೂಕಿನ ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ತಾಲ್ಲೂಕು ಕಛೇರಿಯಲ್ಲಿ ಅರ್ಜಿ ನೀಡಲಾಗುತ್ತಿದೆ ಎಂದು ತಹಸೀಲ್ದಾರ್ ಸೋಮಪ್ಪಕಡಕೋಳ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣಕ್ಕೆ ನಮೂನೆ-57ರ ಅರ್ಜಿಯನ್ನು ತಾಲ್ಲೂಕು ಕಚೇರಿಯಲ್ಲಿ ನ. 19ರಿಂದ ನೀಡಲಾಗುತ್ತಿದ್ದು ಅದಕ್ಕಾಗಿ ಕಚೇರಿಯಲ್ಲಿ ಕೌಂಟರ್ ಆರಂಭಿಸಲಾಗಿದೆ. ಅರ್ಜಿ ಸಲ್ಲಿಸಲು 100/-ರೂ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.
ಅರ್ಜಿ ಸಲ್ಲಿಸುವ ಅರ್ಜಿದಾರರು ನಮೂನೆ-57ರ ಜೊತೆ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಆಧಾರ್ ಕಾರ್ಡ್ ನಕಲು, ಸರ್ವೆ ನಂಬರ್‍ಗಳ ಪಹಣಿ, ಅರ್ಜಿದಾರರಿಗೆ ಈ ಹಿಂದೆ ಮಂಜೂರಾದ ಭೂಮಿಯ ವಿವರ, ಅರ್ಜಿದಾರರ ಕುಟುಂಬದ ಸದಸ್ಯರು ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡಿಕೊಂಡು ನಮೂನೆ-50 ಮತ್ತು ನಮೂನೆ-53ರಲ್ಲಿ ಸಕ್ರಮಕ್ಕಾಗಿ ಕೋರಿ ಅರ್ಜಿ ಸಲ್ಲಿಸಿದ ವಿವರ, ನಮೂನೆ-50 ಹಾಗೂ ನಮೂನೆ-53ರಲ್ಲಿ ಬಗರ್‍ಹುಕುಂ ಸಕ್ರಮ ಸಮಿತಿಯಲ್ಲಿ ತಕರಾರು ತಃಖ್ತೆ ದಂಡ ಕಟ್ಟಿದ್ದರೆ ಅದರ ರಶೀದಿ ನಕಲು ಮತ್ತು ವಿವರ ಸಲ್ಲಿಸಬೇಕು. ಅರ್ಜಿದಾರರು ಹೊಂದಿರುವ ಜಮೀನು ಹಾಗೂ ಮಂಜೂರಿಗೆ ಕೋರಿದ ಜಮೀನು ಸೇರಿ 4-38 ಎ/ಗುಂ ಖುಷ್ಕಿ ಜಮೀನನ್ನು ಮಂಜೂರು ಮಾಡಲು ಅವಕಾಶವಿರುತ್ತದೆ ಎಂದ ತಿಳಿಸಿದ ಅವರು, ಅರ್ಜಿದಾರರು ಪುರಸಭಾ ವ್ಯಾಪ್ತಿಯಿಂದ 5.ಕಿ.ಮೀ ಹಾಗೂ ಪಟ್ಟಣ ಪಂಚಾಯ್ತಿಯಿಂದ 3 ಕಿ.ಮೀ ಒಳಗೆ ಇದ್ದರೆ ಅರ್ಜಿ ಸಲ್ಲಿಸಲು ಅವರು ಅರ್ಹರಲ್ಲ ಎಂದು ತಿಳಿಸಿದರು.
ಬೆಳೆ ಸಮೀಕ್ಷೆಗೆ ರೈತರಿಂದ ಆಕ್ಷೇಪಣೆ ಸಲ್ಲಿಸಲು ಅವಕಾಶ :
ಮುಂಗಾರು ಬೆಳೆ ಸಮೀಕ್ಷೆಗೆ ತಾಲ್ಲೂಕಿನಲ್ಲಿ ಈಗಾಗಲೇ ಖಾಸಗಿ ವ್ಯಕ್ತಿಗಳಿಂದ ರೈತರ ಹೊಲದಲ್ಲಿ ಬೆಳೆಯ ಮಾಹಿತಿಯನ್ನು ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಲಾಗಿದೆ. ಸಮೀಕ್ಷೆ ಮಾಡುವಾಗ ನಿಮ್ಮ ಹೊಲದಲ್ಲಿ ತೆಗೆದ ಛಾಯಾಚಿತ್ರ ಅಥವಾ ಬೆಳೆಯು ಸರಿಯಾಗಿ ದಾಖಲಾಗಿರದಿದ್ದರೆ ಬೆಳೆ ದರ್ಶಕ್ ಮೊಬೈಲ್ ಆಪ್‍ನಲ್ಲಿ ಅಥವಾ ತಾಲ್ಲೂಕು ಕಚೇರಿಯಲ್ಲಿಯಾದರೂ ಆಕ್ಷೇಪಣೆ ಸಲ್ಲಿಸಲು ನವಂಬರ್ 30ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು.
ಸ್ಥಳೀಯ ವಿದ್ಯಾವಂತ ಯುವಕರನ್ನು ತೊಡಗಿಸಿಕೊಂಡು ಮೊಬೈಲ್ ಆಪ್ ಮೂಲಕ ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ತಾಲ್ಲೂಕು ಆಡಳಿತ ಬೆಳೆ ಮಾಹಿತಿಯನ್ನು ಪರಿಶೀಲಿಸುತ್ತಿದ್ದು, ಸರ್ಕಾರವು ಈ ಬೆಳೆಗಳ ಮಾಹಿತಿಯನ್ನು ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಠ ಪರಿಹಾರ ಇತ್ಯಾದಿ ಯೋಜನೆಗಳಲ್ಲಿ ಉಪಯೋಗಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುತ್ತಿದೆ. ಈ ಬಗ್ಗೆ ರೈತರಿಂದ ಆಕ್ಷೇಪಣೆ ಬಂದಲ್ಲಿ ಮರು ಸರ್ವೆ ಮಾಡಲು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ರೈತರ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಬೆಳೆ ದರ್ಶಕ್ ಗೂಗಲ್ ಆಪ್ ಪರಿಶೀಲಿಸಿಕೊಳ್ಳಬಹುದಾಗಿದೆ. ಬೆಳೆ ದರ್ಶಕ್ ಆಪ್‍ನ್ನು ಗೂಗಲ್ ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದ್ದು, ರೈತರ ಆಕ್ಷೇಪಣೆಯನ್ನು ಈ ಆಪ್‍ನಲ್ಲಿ ದಾಖಲಿಸಬಹುದು ಹಾಗೂ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ಮಾಹಿತಿ ದಾಖಲಾಗಿರುವುದನ್ನು ಛಾಯಾಚಿತ್ರ ಸಮೇತವಾಗಿ ವೀಕ್ಷಿಸಬಹುದು.ಆಕ್ಷೇಪಣೆಗಳಿದ್ದಲ್ಲಿ ಮೊಬೈಲ್ ಆಪ್‍ನಲ್ಲಿ ದಾಖಲಿಸುವ ಮೂಲಕ ಅಥವಾ ಧ್ವನಿಮುದ್ರಣ ಮಾಡುವುದರ ಮೂಲಕ ದೂರು ಸಲ್ಲಿಸಬಹುದು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ