ತುಮಕೂರು
ತುಮಕೂರು ಮಹಾನಗರ ಪಾಲಿಕೆಯ ಕುಡಿಯುವ ನೀರು ಪೂರೈಕೆ ವಿಭಾಗದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಅಶಿಸ್ತಿನ ಪ್ರಕರಣಗಳ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಂಡಿರುವ ಪಾಲಿಕೆ ಆಯುಕ್ತರು, ನೀರು ಪೂರೈಕೆ ವಿಭಾಗದ ಆಪರೇಟರ್ ಒಬ್ಬರಿಗೆ ಹಿಂಬಡ್ತಿ ನೀಡಿರುವ ಹಾಗೂ ಮೂವರು ವಾಲ್ವ್‍ಮನ್‍ಗಳನ್ನು ವಜಾಗೊಳಿಸಿರುವ ಮಹತ್ವದ ಬೆಳವಣಿಗೆ ವರದಿಯಾಗಿದೆ.
ತುಮಕೂರು ನಗರದ 11 ನೇ ವಾರ್ಡ್(ಮೆಳೆಕೋಟೆ) ನಲ್ಲಿ ಆಪರೇಟರ್ ಆಗಿದ್ದ ಸಿದ್ದರಾಜು (ಖಾಯಂ ನೌಕರ) ಎಂಬುವವರಿಗೆ ವಾಲ್ವ್‍ಮನ್ ಆಗಿ ಹಿಂಬಡ್ತಿ ನೀಡಿ ನಗರದ 19 ಮತ್ತು 20 ನೇ ವಾರ್ಡ್‍ಗೆ ನಿಯೋಜಿಸಲಾಗಿದೆ. ನಗರದ 17 ನೇ ವಾರ್ಡ್ (ಬನಶಂಕರಿ, ಸರಸ್ವತಿಪುರಂ) ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ವಾಲ್ವ್‍ಮನ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್, ಆಂಜನಪ್ಪ ಮತ್ತು ಮಂಜುನಾಥ್ ಎಂಬುವವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆಯುಕ್ತ ಟಿ. ಭೂಪಾಲನ್ ಅವರು ಏಪ್ರಿಲ್ 22 ರಂದು ಈ ಕ್ರಮ ಕೈಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
11 ನೇ ವಾರ್ಡ್‍ನಲ್ಲಿ ಸುಮಾರು 2 ಲಕ್ಷ ರೂ. ಮೌಲ್ಯದ ನೀರು ಸರಬರಾಜಿನ ಜಿ.ಐ. ಪೈಪ್‍ಗಳು ಮತ್ತು ಬಿಡಿ ಭಾಗಗಳನ್ನು ದುರುಪಯೋಗಪಡಿಸಲಾಗಿದೆಯೆಂಬ ಆರೋಪ ಕೇಳಿಬಂದಿದೆ. ಇವನ್ನು ಎಲ್ಲಿಗೆ ಬಳಸಲಾಗಿದೆ, ಹೇಗೆ ಬಳಸಲಾಗಿದೆ ಎಂಬ ವಿವರ ಪಾರದರ್ಶಕವಾಗಿಲ್ಲ. “ಪ್ರಭಾವಿಗಳ ಕೈವಾಡ”ದಿಂದ ಹಾಗೂ “ಪ್ರಭಾವಿಗಳೊಂದಿಗೆ ಶಾಮೀಲಾಗಿ” ಸದರಿ ಉಪಕರಣಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಆಪರೇಟರ್ ಸಿದ್ಧರಾಜು ವಿರುದ್ಧ ಕ್ರಮ ಕೈಗೊಂಡು ವಾಲ್ವ್‍ಮನ್ ಆಗಿ ಹಿಂಬಡ್ತಿ ನೀಡಿ 19-20 ನೇ ವಾರ್ಡ್‍ಗೆ ನಿಯುಕ್ತಿಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಪೆÇಲೀಸ್ ದೂರು ನಿರೀಕ್ಷೆ
ಪಾಲಿಕೆ ಆಸ್ತಿಯ ದುರುಪಯೋಗ ಕುರಿತಂತೆ ಪೊಲೀಸ್ ಠಾಣೆಗೆ ದೂರು ನೀಡುವ ನಿರೀಕ್ಷೆ ಇದೆ ಹಾಗೂ ಈ ವಿಷಯವಾಗಿ ಸಿದ್ಧರಾಜು ವಿರುದ್ಧ ಇಲಾಖಾ ವಿಚಾರಣೆ ನಡೆಯಲಿದೆ ಎಂದೂ ಹೇಳಲಾಗುತ್ತಿದೆ.
ಮೂವರ ವಜಾ, ಹೊಸಬರ ನಿಯೋಜನೆಗೆ ಸೂಚನೆ
ಇನ್ನು 17 ನೇ ವಾರ್ಡ್‍ನಲ್ಲಿ “ನೀರು ಬಿಡುವಲ್ಲಿ ತಾರತಮ್ಯವೆಸಗುವುದು, ಕೃತಕವಾಗಿ ನೀರಿನ ಅಭಾವ ಸೃಷ್ಟಿಸುವುದು, ಸ್ಥಳೀಯ ಪ್ರಭಾವಿಗಳು” ಹೇಳಿದಂತೆ ಅವರಿಗೆ ಬೇಕಾದವರಿಗೆ ಮಾತ್ರ ನೀರು ಬಿಡುವುದು, ವಿವಿಧ ಹಂತದಲ್ಲಿರುವ ಪಾಲಿಕೆಯ ಮೇಲಧಿಕಾರಿಗಳು ದೂರವಾಣಿ ಕರೆ ಮಾಡಿದರೂ
ಅದನ್ನು ಸ್ವೀಕರಿಸದಿರುವುದು ಹಾಗೂ ಅನೇಕ ವರ್ಷಗಳಿಂದ ಇದೇ ವಾರ್ಡ್‍ನಲ್ಲಿ ಕೆಲಸನಿರ್ವಹಿಸುತ್ತಿರುವ ದೂರುಗಳ/ಆರೋಪಗಳ ಹಿನ್ನೆಲೆಯಲ್ಲಿ” ಮೂವರು ವಾಲ್ವ್‍ಮನ್‍ಗಳನ್ನು ಆಯುಕ್ತರು ವಜಾಗೊಳಿಸಿದ್ದಾರೆ. ಸುರೇಶ್, ಮಂಜುನಾಥ್ ಮತ್ತು ಆಂಜನಪ್ಪ ಎಂಬ ಈ ವಾಲ್ವ್‍ಮನ್‍ಗಳು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಇವರನ್ನು ವಜಾಗೊಳಿಸಿದ್ದು, ಇವರುಗಳ ಜಾಗಕ್ಕೆ ಹೊಸದಾಗಿ ಮೂವರನ್ನು ನಿಯೋಜಿಸುವಂತೆ ಹೊರಗುತ್ತಿಗೆ ಕಾರ್ಮಿಕರನ್ನು ಪೂರೈಸುವ ಗುತ್ತಿಗೆದಾರರಿಗೆ ಆಯುಕ್ತರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಲವರ ವಿರುದ್ಧ ಕ್ರಮ ಸಂಭವ
ಇಂತಹುದೇ ದೂರು/ಆರೋಪಗಳಿರುವ ನೀರು ಪೂರೈಕೆ ವಿಭಾಗದ ಇನ್ನೂ ಸುಮಾರು 15-20 ಸಿಬ್ಬಂದಿಗಳ ವಿರುದ್ಧವೂ ಇದೇ ರೀತಿಯ ಕ್ರಮಗಳು ಜರುಗಲಿವೆಯೆಂಬ ದಟ್ಟ ವದಂತಿ ಪಾಲಿಕೆಯಲ್ಲಿ ಹರಡಿದ್ದು, ಈ ವಿಚಾರವು ನೀರು ಪೂರೈಕೆ ವಿಭಾಗದಲ್ಲಿ ತೀವ್ರ ಸಂಚಲನ ಉಂಟುಮಾಡಿದೆ.